'ಭಜನ್ ಸಾಮ್ರಾಟ್' ತಂಡಗಳಿಗೆ ಆಹ್ವಾನ
ರಾಯಚೂರು: ಶ್ರೀಶಂಕರ ವಾಹಿನಿಯು ನಡೆಸುವ ಭಜನ್ ಸಾಮ್ರಾಟ್ ಸಂಗೀತ ಕಾರ್ಯಕ್ರಮದ ಎರಡು ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿದ್ದು ಮೂರನೇ ಆವೃತ್ತಿಗೆ ಆಸಕ್ತರಿಂದ ಪಾಲ್ಗೊಳ್ಳಲು ಆಹ್ವಾನಿಸಲಾಗಿದೆ. ಮೂರನೇ ಆವೃತ್ತಿಯಲ್ಲಿ ಜ್ಯೂನಿಯರ್ ವಿಭಾಗ 8-16 ವರ್ಷ ಹಾಗೂ ಸೀನಿಯರ್ ವಿಭಾಗದಲ್ಲಿ 17- 45 ವರ್ಷ ವಯೋವಾನದವರಿಗೆ ಸ್ಪರ್ಧೆ ನಡೆಯಲಿದೆ. ತಂಡದಲ್ಲಿ ಪಕ್ಕವಾದ್ಯ ಸೇರಿ ಕನಿಷ್ಠ 7- 9 ಜನ ಕಲಾವಿದರು ಪಾಲ್ಗೊಳ್ಳಬಹುದು.
ಪಕ್ಕ ವಾದ್ಯದವರಿಗೆ ವಯಸ್ಸಿನ ನಿರ್ಬಂಧವಿಲ್ಲ. ಖ್ಯಾತನಾಮ ತಜ್ಞರು, ತೀರ್ಪುಗಾರರಾಗಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಈಗಾಗಲೇ ಮೊದಲ ಹಂತದ ಭಜನ್ ಸಾಮ್ರಾಟ್ ಸೀಸನ್-3ರ ಸ್ಪರ್ಧಾ ಸುತ್ತುಗಳು ಆರಂಭಗೊಂಡಿದ್ದು, ಬೆಂಗಳೂರು, ಮೈಸೂರು, ಚೆನ್ನೈ, ಕೊಯಮತ್ತೂರಿನಲ್ಲಿ ಪೂರ್ಣಗೊಂಡಿವೆ. ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ಭಜನ್ ಸಾಮ್ರಾಟ್ ಸೀಸನ್-3 ಸ್ಪರ್ಧಾ ಸುತ್ತುಗಳು ಹೊಸಪೇಟೆ ಹತ್ತಿರದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಭುವನ್ ವಿಜಯ ಸಭಾಂಗಣದಲ್ಲಿ ಜೂ.6ರಿಂದ 8ರವರೆಗೆ ನಡೆಯಲಿವೆ.
10 ಲಕ್ಷ ಬಹುಮಾನ: ಭಜನ್ ಸಾಮ್ರಾಟ್ ಸೀಸನ್-3ನ್ನು ಯಶಸ್ವಿಗೊಳಿಸಲು ವಾಹಿನಿ ಮನವಿ ಮಾಡಿದ್ದು, ಈ ಸ್ಪರ್ಧೆಯ ವಿಜೇತರಿಗೆ 10 ಲಕ್ಷ ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದೆ.
ಭಜನ್ ಸಾಮ್ರಾಟ್ ಸೀಸನ್ -3ರ ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ಸ್ಪರ್ಧಾ ಸುತ್ತಿನ ಜೂ.6 ರಿಂದ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಣ್ಣ ನೀರಾವರಿ ಸಚಿವ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಶಿವರಾಜ ತಂಗಡಗಿ ಭಾಗವಹಿಸಲಿದ್ದಾರೆ. ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಕುಲಪತಿ ಹೀ.ಚಿ. ಬೋರಲಿಂಗಯ್ಯ ಅವರು ಅಧ್ಯಕ್ಷತೆ ವಹಿಸಲಿದ್ದಾರೆಂದು ವಾಹಿನಿ ತಿಳಿಸಿದೆ.
ರೌಡಕುಂದಿ ಮಹಾಸಂಸ್ಥಾನದ ಮರಿಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಲಿದ್ದಾರೆ. ವಿಶೇಷ ಅತಿಥಿಗಳಾಗಿ ಸಿರಗುಪ್ಪ ಶಾಸಕ ಬಿ.ಎಂ. ನಾಗರಾಜ, ಉದ್ಯಮಿ ದೀಪಕ್ ಕುಮಾರ್ ಸಿಂಗ್, ಡೆನ್ನ್‌ಟ್ ವರ್ಕ್ಸ್ ಬಳ್ಳಾರಿಯ ಮುಖ್ಯಸ್ಥ ಚಂದ್ರಕುಮಾರ, ಕಿರ್ಲೋಸ್ಕರ್ ಲೇಡಿಸ್ ಕ್ಲಬ್ ಅಧ್ಯಕ್ಷೆ ಕಮಲಾ, ಕಮಲಾಪುರ ಪಪಂ ಅಧ್ಯಕ್ಷ ಮುಖ್ತಿಯಾರ್, ಶ್ರೀಶಂಕರ ಟಿವಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್. ಸುರೇಶಕುಮಾರ ಪಾಲ್ಗೊಳ್ಳಲಿದ್ದಾರೆಂದು ಪ್ರಕಟಣೆ ತಿಳಿಸಿದೆ. ವಿವರಕ್ಕೆ ರಾಜೀವ್ ಐರಣಿ- 99029 39239, ಆನಂದ ವಿ.ಕೆ.- 99860 70186, ರಾಚಯ್ಯ ಸ್ವಾಮಿ- 96111 17144, ಸತೀಶ್ ಮುರಾಳ್- 99163 32447 ಹಾಗೂ ಮುಖ್ಯ ಸಂಪರ್ಕಾಧಿಕಾರಿ ಪವನ್‌ಕುಮಾರ್ ಮೊ. 7259963218 ಸಂಪರ್ಕಿಸಬಹುದು.