ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ದುಶ್ಚಟಗಳಿಂದ ದೂರವಿರಿ

Mainashree
Updated On : 1 Jun 2014, 10:57 am

ಕ.ಪ್ರ. ವಾರ್ತೆ ್ಣ ರಾಯಚೂರು ್ಣ ಮೇ 31
ಯುವ ಜನಾಂಗದಲ್ಲಿ ಆರೋಗ್ಯ ಸಂರಕ್ಷಣೆ ಕ್ರಮಗಳ ಬಗ್ಗೆ ಮಾಹಿತಿ ನೀಡಿ ಅವರನ್ನು ಮೋಜು, ಮಸ್ತಿ, ದುಶ್ಚಟಗಳಿಂದ ದೂರವಿರಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಪಿ.ಜಿ.ಎಂ. ಪಾಟೀಲ್ ಸಲಹೆ ನೀಡಿದರು.
ನಗರದ ಐಎಂಎ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗೊತ್ತಿದ್ದೂ ದುಶ್ಚಟಗಳಿಗೆ ಬಲಿ- ಆತಂಕ: ಧೂಮಪಾನ ಸೇರಿ ಯಾವುದೇ ರೀತಿಯ ದುಶ್ಚಟಗಳಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮದ ಕುರಿತು ಜನತೆಗೆ ಅರಿವಿದೆ. ಆದರೂ ಅಂಥ ದುಶ್ಚಟಗಳಿಗೆ ಸಿಲುಕುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದ ಅವರು, ಯುವ ಜನಾಂಗವು ಮೋಜಿನ ನೆಪದಲ್ಲಿ ಕೆಟ್ಟ ಚಟಗಳಿಗೆ ಬಲಿಯಾಗುತ್ತಿರುವುದು ಆತಂಕಕಾರಿ ವಿಚಾರವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ವಿಶ್ವದಲ್ಲಿ ಪ್ರತಿ ವರ್ಷ ಐದು ಮಿಲಿಯನ್ ಜನ ತಂಬಾಕು ಸೇವನೆಯಿಂದುಂಟಾಗುವ ಆರೋಗ್ಯ ಸಂಬಂಧಿ ಸಮಸ್ಯೆಗಳಿಂದಾಗಿ ಸಾವನ್ನಪ್ಪುತ್ತಿದ್ದಾರೆ. ಸಮಾಜಕ್ಕೆ ಈ ಬೆಳವಣಿಗೆ ಕಂಟಕಪ್ರಾಯವಾಗಿದೆ. ತಂಬಾಕು ರಹಿತ ದಿನಾಚರಣೆ ಕೇವಲ ಆಚರಣೆ ಸೀಮಿತವಾಗದೇ ವರ್ಷವಿಡೀ ಯುವಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಆಗಬೇಕೆಂದರು.
ದೃಢ ನಿರ್ಧಾರ ಕೈಗೊಳ್ಳಿ: ವಿಶ್ವ ಆರೋಗ್ಯ ಸಂಸ್ಥೆಯು ತಂಬಾಕಿನ ಸೇವನೆಯ ಸಂಪೂರ್ಣ ನಿಷೇಧಕ್ಕೆ ನಿರಂತರ ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕಿದೆ. ಅದರಲ್ಲೂ ಯುವಕರು ಧೂಮಪಾನ, ಮದ್ಯಪಾನ ಸೇರಿ ಇನ್ನಿತರೆ  ದುಶ್ಚಟಗಳಿಂದ ದೂರವಿರುವ ದೃಢ ನಿರ್ಧಾರ ಮಾಡುವುದು ಅವಶ್ಯ ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾರಾಯಣ್ ಮಾತನಾಡಿ, ತಂಬಾಕು ಉತ್ಪನ್ನದ ಬಳಕೆ ಮಾಡುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ತಂಬಾಕು ಬೆಳೆ ರೈತರಿಗೆ ಒಂದು ಪಟ್ಟು ಲಾಭ ತರುತ್ತದೆ. ಆದರೆ ಸಮಾಜಕ್ಕೆ ಅದರ ಸೇವನೆಯಿಂದಾಗುವ ಹಾನಿ ಮಾತ್ರ ಅಪಾರ ಎಂದರು.
ಹೆಚ್ಚಿನ ತೆರಿಗೆ ವಿಧಿಸಲಿ: ತಂಬಾಕು ಉತ್ಪನ್ನಗಳಿಂದಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ವಿಶ್ವ ಆರೋಗ್ಯ ಸಂಸ್ಥೆಯ ಒತ್ತಾಸೆಯಂತೆ ತಂಬಾಕು ಉತ್ಪನ್ನವನ್ನು ಸಂಪೂರ್ಣ ನಿಷೇಧಿಸಬೇಕು ಅಥವಾ ಉತ್ಪನ್ನಗಳಿಗೆ ಹೆಚ್ಚಿನ ತೆರಿಗೆ ವಿಧಿಸುವ ನಿಟ್ಟಿನಲ್ಲಿ ಸರ್ಕಾರ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಹಿರಿಯ ವ್ಯವಹಾರಿಕ ನ್ಯಾಯಾಧೀಶರಾದ ಚಲುವಮೂರ್ತಿ, ಜಿಪಂ ಯೋಜನಾಧಿಕಾರಿ ಡಾ. ಟಿ.ರೋಣಿ, ವಕೀಲರ ಸಂಘದ ಅಧ್ಯಕ್ಷ ಎನ್.ಭಾನುರಾಜ್, ಕಾರ್ಯದರ್ಶಿ ಪ್ರಭುದೇವ ಪಾಟೀಲ್, ಎಸ್ಪಿ ಎಂ.ಎನ್. ನಾಗರಾಜ, ಐಎಂಎ ಅಧ್ಯಕ್ಷ ಸಿ.ಎನ್. ಕುಲಕರ್ಣಿ ಸೇರಿ ಅನೇಕರಿದ್ದರು. ತಜ್ಞ ವೈದ್ಯರು ಹಾಗೂ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement