ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಕ್ರ.ಸಂಖ್ಯೆ ಗೊಂದಲ

Lingaraj Badiger
Updated On : 2 Apr 2013, 10:55 am

ಕ.ಪ್ರ. ವಾರ್ತೆ, ಸಾಗರ, ಏ.1
ಸೋಮವಾರದಿಂದ ಆರಂಭವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪಟ್ಟಣದ ಒಂದೆರಡು ಪ್ರೌಢಶಾಲೆಗಳಲ್ಲಿ ಗೊಂದಲ ಸೃಷ್ಟಿಯಾಗಿ ವಿದ್ಯಾರ್ಥಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಯಿತು.
ಬೆಳಗ್ಗೆ 9-30ಕ್ಕೆ ಪರೀಕ್ಷೆ ಎದುರಿಸಲು ಬಂದಿದ್ದ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರ ಬದಲಾಗಿರುವುದು ಆತಂಕ ಸೃಷ್ಟಿಸಿ, ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪ್ರೌಢಶಾಲಾ ಆಡಳಿತ ಮಂಡಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ಕ್ರಮ ಸಂಖ್ಯೆ ಇಲ್ಲ: ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನೀಡಿರುವ ಪರೀಕ್ಷಾ ಪ್ರವೇಶ ಪತ್ರದಲ್ಲಿ ಬಿ.ಎಚ್. ರಸ್ತೆಯಲ್ಲಿರುವ ಸಾಗರ ಉರ್ದು ಪ್ರೌಢಶಾಲೆಯನ್ನು ಪರೀಕ್ಷಾ ಕೇಂದ್ರವಾಗಿ ಮುದ್ರಿಸಲಾಗಿತ್ತು. ವಿದ್ಯಾರ್ಥಿಗಳು ಪ್ರವೇಶಪತ್ರವನ್ನು ತೆಗೆದುಕೊಂಡು ಉರ್ದು ಪ್ರೌಢಶಾಲೆಗೆ ಬಂದರೆ ಅಲ್ಲಿ ಪ್ರವೇಶಪತ್ರದಲ್ಲಿ ನಮೂದಿಸಿದ ಕ್ರಮಸಂಖ್ಯೆ ಇಲ್ಲದೆ ಇರುವುದು ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಯಿತು.
ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲು ಅಲ್ಲಿ ಶಿಕ್ಷಣ ಇಲಾಖೆಯ ಅಥವಾ ಶಾಲೆಯ ಶಿಕ್ಷಕರು ಇರಲಿಲ್ಲ. ಪೋಷಕರು ಆಕ್ರೋಶ ವ್ಯಕ್ತಪಡಿಸಿದ ನಂತರ ಸಾಗರ ಪ್ರೌಢಶಾಲೆಯಲ್ಲಿ ಕೊಠಡಿಗಳ ಕೊರತೆ ಇರುವುದರಿಂದ ಹೆಚ್ಚುವರಿ ವಿದ್ಯಾರ್ಥಿಗಳನ್ನು ಸಂತ ಜೋಸೆಫರ ಕಾನ್ವೆಂಟ್‌ನಲ್ಲಿ ಸ್ಥಳಾವಕಾಶ ಕಲ್ಪಿಸಲಾಗಿದೆ ಎಂದು ಉತ್ತರ ನೀಡಿದರು.
ತಾಲೂಕಿನ ಬಂದಗದ್ದೆ, ಕೆಳದಿ ಇನ್ನಿತರ ಭಾಗದಿಂದ ಬಂದ ವಿದ್ಯಾರ್ಥಿಗಳು ಶಾಲೆ ಹುಡುಕುವುದರಲ್ಲಿ ಸುಸ್ತಾಗಿದ್ದರು. ಪರೀಕ್ಷಾ ಕೇಂದ್ರ ಬದಲಾಗಿರುವುದರ ಕುರಿತು ಸಾಗರ ಉರ್ದು ಪ್ರೌಢಶಾಲೆ ಬಳಿಯಾಗಲಿ, ಪರೀಕ್ಷಾ ಕೇಂದ್ರ ಇಲ್ಲಿದೆ ಎಂದು ಸೂಚಿಸಲು ಸಂತ ಜೋಸೆಫರ ಶಾಲೆಯ ಬಳಿಯಾಗಲಿ ಯಾವುದೆ ನಾಮಫಲಕ ಹಾಕಿರಲಿಲ್ಲ. ಇದು ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಠಡಿ ಹುಡುಕಲು ತೀವ್ರ ಅಡಚಣೆ ಉಂಟು ಮಾಡಿತ್ತು. ಕೆಲವು ವಿದ್ಯಾರ್ಥಿಗಳು ಪರೀಕ್ಷೆ ವೇಳೆ ಸಮೀಪಿಸುತ್ತಿದ್ದರೂ ಕೊಠಡಿ ಸಿಗದೆ ಕಣ್ಣೀರು ಹಾಕಿದ ದೃಶ್ಯವೂ ಕಂಡು ಬಂದಿತು.
ಮಾಹಿತಿ ಕೊರತೆ: ಸಾಗರ ಉರ್ದು ಪ್ರೌಢಶಾಲೆಯಲ್ಲಿ 250 ಜನರಿಗೆ ಮಾತ್ರ ಪರೀಕ್ಷೆಗೆ ಕುಳಿತುಕೊಳ್ಳಲು ಸ್ಥಳಾವಕಾಶವಿದೆ. ಆದರೆ ಪ್ರೌಢಶಿಕ್ಷಣ ಮಂಡಳಿ ಅಲ್ಲಿ 400 ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರವೆಂದು ಸೂಚಿಸಿ ಪ್ರವೇಶಪತ್ರದಲ್ಲಿ ನಮೂದಿಸಿತ್ತು. ಇದು ಗೊಂದಲಕ್ಕೆ ಕಾರಣವಾಗಿದ್ದು, ಸುಮಾರು 180 ವಿದ್ಯಾರ್ಥಿಗಳನ್ನು ಸಂತ ಜೋಸೆಫ್ ಶಾಲೆಗೆ ವರ್ಗಾಯಿಸಿರುವ ಕುರಿತು ಮಾಹಿತಿ ನೀಡದೆ ಇರುವುದು ಇಷ್ಟೆಲ್ಲಾ ಗೊಂದಲಗಳಿಗೆ ಕಾರಣ ಎನ್ನಲಾಗಿದೆ.
ವಿದ್ಯಾರ್ಥಿಗಳ ಕಷ್ಟ ನೋಡಲಾಗದೆ ಸಾರ್ವಜನಿಕರು ತಮ್ಮ ವಾಹನಗಳಲ್ಲಿ ವಿದ್ಯಾರ್ಥಿಗಳನ್ನು ನಿಗದಿಪಡಿಸಿದ ಪರೀಕ್ಷಾ ಸ್ಥಳಕ್ಕೆ ಬಿಟ್ಟು ಬಂದರು. ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಂ.ಸಿ. ಪರಶುರಾಮಪ್ಪ, ಕರವೇ ಮುಖಂಡ ರವೀಂದ್ರ ಸಾಗರ್ ಇನ್ನಿತರರು ಶಿಕ್ಷಣ ಇಲಾಖೆಯ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ, ಈ ಅಚಾತುರ್ಯಕ್ಕೆ ಕಾರಣವಾಗಿರುವ ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement