ಶರಣ ಸಂಸ್ಕೃತಿ ಮಹಾಯಾತ್ರೆ
ಶಿವಮೊಗ್ಗ: ಕನ್ನಡ-ಸಂಸ್ಕೃತಿ ಇಲಾಖೆ, ಬಸವ ಸಮಿತಿ ಮತ್ತು ರಾಜ್ಯದ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಕಳೆದ ಮಾರ್ಚ್ 13 ರಿಂದ ಆರಂಭವಾಗಿರುವ ಶರಣ ಸಂಸ್ಕೃತಿ ಮಹಾಯಾತ್ರೆ ಏ.2ರಂದು ಶಿವಮೊಗ್ಗ ನಗರ ಪ್ರವೇಶಿಸಲಿದೆ.
ಬಿ.ಎಚ್. ರಸ್ತೆಯ ಬೆಕ್ಕಿನಕಲ್ಮಠದ ಆವರಣದಿಂದ ಸಂಜೆ 5.30ಕ್ಕೆ ಮಹಾಯಾತ್ರೆಯ ಮೆರವಣಿಗೆ ಆರಂಭವಾಗಲಿದೆ. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ನಂತರ ಗಾಂಧಿಬಜಾರ್ ರಸ್ತೆಯ ಬಸವೇಶ್ವರ ದೇವಾಲಯಕ್ಕೆ ಆಗಮಿಸಲಿದೆ. ಅಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಸವ ಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ, ಸಭಾ ಕಾರ್ಯಕ್ರಮದ ಸಾನ್ನಿಧ್ಯವನ್ನು ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ವಹಿಸಲಿದ್ದಾರೆ. ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ, ವೀರಶೈವ ಸಮಾಜದ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಎಚ್.ಎಸ್. ರುದ್ರಸ್ವಾಮಿ, ಎಸ್. ರುದ್ರೇಗೌಡ, ಟಿ.ವಿ. ಈಶ್ವರಯ್ಯ, ರುದ್ರಮುನಿ ಸಜ್ಜನ್ ಮತ್ತಿತರರು ಉಪಸ್ಥಿತರಿರುವರು ಎಂದರು.
ಬಸವ ಜಯಂತಿ ಶತಮಾನೋತ್ಸವ ವರ್ಷಾಚರಣೆ ಹಿನ್ನೆಲೆಯಲ್ಲಿ ಹಾಗೂ ಬಸವಾದಿ ಶರಣರ ಜೀವನ ಮೌಲ್ಯಗಳನ್ನು ಜನಸಾಮಾನ್ಯರಿಗೆ ಬಿತ್ತರಿಸುವ ಉದ್ದೇಶದಿಂದ ಬಸವ ಸಮಿತಿ ಈ ಮಹಾಯಾತ್ರೆ ಹಮ್ಮಿಕೊಂಡಿದೆ ಎಂದು ತಿಳಿಸಿದ ಅವರು, ಮಾರ್ಚ್ 13ರಂದು ಬಸವನಬಾಗೇವಾಡಿಯಿಂದ ಆರಂಭಗೊಂಡ ಯಾತ್ರೆ ಏಪ್ರಿಲ್ 14ರಂದು ಕೂಡಲಸಂಗಮದಲ್ಲಿ ಕೊನೆಗೊಳ್ಳಲಿದೆ ಎಂದು ವಿವರಿಸಿದರು.
ಒಟ್ಟಾರೆ 33 ದಿನ ಸಂಚರಿಸುವ ಈ ಯಾತ್ರೆ 4,950 ಕಿಲೋಮೀಟರ್ ಕ್ರಮಿಸಲಿದೆ ಎಂದು ಮಾಹಿತಿ ನೀಡಿದರು. ಸುದ್ದಿ ಗೋಷ್ಠಿಯಲ್ಲಿ ಶರಣ ಸಂಸ್ಕೃತಿ ಮಹಾಯಾತ್ರೆ ಸ್ವಾಗತ ಸಮಿತಿ ಅಧ್ಯಕ್ಷ ರುದ್ರಮುನಿ ಎನ್. ಸಜ್ಜನ್, ಈಶ್ವರಪ್ಪ, ಮಂಜುನಾಥ್, ಬೆನಕಪ್ಪ, ರುದ್ರಪ್ಪ ಇದ್ದರು.