ಸಾಧನೆಯ ಸಂರಚನೆಯೇ ಬ್ರಾಹ್ಮಣ್ಯ
ಕ.ಪ್ರ.ವಾರ್ತೆ, ಜೋಗ್ಫಾಲ್ಸ್, ಏ.1
ಬ್ರಾಹ್ಮಣ್ಯ ಎನ್ನುವುದು ಭಾರತದ ಪರಮೋಚ್ಚ ಸಾಧನೆಯ ಸಂರಚನೆಯಾಗಿದ್ದು, ಬ್ರಾಹ್ಮಣ್ಯದ ಸಂಕೇತ ದಾನವಾಗಿದೆ. ಬ್ರಾಹ್ಮಣ್ಯಕ್ಕೂ ವಿಪ್ರರಿಗೂ ವ್ಯತ್ಯಾಸವಿದ್ದು, ಸಮಾಜಕ್ಕೆ ಹಿತಕಾರಿಯಾಗಿರುವುದೇ ವಿಪ್ರತ್ವ ಎಂದು ಸಾಗರ ತಾಲೂಕು ಶಿಕ್ಷಣ ಇಲಾಖೆಯ ಪ್ರಭಾರ ಸಮನ್ವಯಾಧಿಕಾರಿ ಶಂಕರ್ ಶಾಸ್ತ್ರಿ ಹೇಳಿದರು.
ಅವರು ಕಾರ್ಗಲ್ನ ರಾಮಮಂದಿರದಲ್ಲಿ ಜೋಗ್ ಕಾರ್ಗಲ್ ವಿಪ್ರಕೂಟದಿಂದ ನಡೆದ ವಿಪ್ರರ ಕುಟುಂಬ ಸಮ್ಮಿಲನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಭಾರತೀಯ ಧರ್ಮ, ಸಂಸ್ಕೃತಿ, ಸಂಸ್ಕಾರವನ್ನು ಜಗತ್ತಿಗೆ ಸಾರಿದ ಹಿರಿಮೆ ಬ್ರಾಹ್ಮಣರಿಗೆ ಸಲ್ಲುತ್ತದೆ. ಹಿಂದಿನ ಕಾಲದಲ್ಲಿಯೇ ಬ್ರಾಹ್ಮಣರು ವಿವಿಧ ಸಂಶೋಧನೆ, ಕೊಡುಗೆ ನೀಡಿದ್ದರು. ಹಿಂದಿನ ಕಾಲದಲ್ಲಿ ಬ್ರಾಹ್ಮಣರಿಗೆ ದೇಶವನ್ನೇ ಸೃಷ್ಟಿಸುವ ಶಕ್ತಿಯಿತ್ತು. ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣರ ಸಂಖ್ಯೆ ಕಡಿಮೆಯಾಗುತ್ತಿದ್ದರೂ, ಅದರ ಸತ್ವ ಮಾತ್ರ ಹಾಗೆಯೇ ಉಳಿದಿದೆ ಎಂದರು.
ಮಾರ್ಗದರ್ಶಕರು: ಬ್ರಾಹ್ಮಣರು ದಾಖಲೆಗಳಿಗೆ ಬೆಲೆ ಕೊಟ್ಟವರಲ್ಲ. ಹಲವಾರು ವಿದ್ಯೆಗಳನ್ನು ತಮ್ಮ ಜ್ಞಾನದಿಂದಲೇ ಸಂಪಾದಿಸಿಕೊಂಡು ಇತರರಿಗೆ ಮಾರ್ಗದರ್ಶಕರಾಗಿದ್ದಾರೆ. ಇಂದೂ ಸಹ ಬ್ರಾಹ್ಮಣರಲ್ಲಿ ಹಲವಾರು ಜ್ಞಾನ ಸಂಪತ್ತನ್ನು ಹೊಂದಿದ ಪ್ರತಿಭೆಗಳು ಹಳ್ಳಿಗಳಲ್ಲಿ ನೆಲೆಸಿದ್ದು, ಅವರಿಗೆ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಸರಿಯಾದ ವೇದಿಕೆ ಸಿಗುತ್ತಿಲ್ಲ. ಇದಕ್ಕೆ ಬಡತನವೂ ಕಾರಣವಾಗಿದ್ದು, ಇದರ ಬಗ್ಗೆ ಚಿಂತನೆ ನಡೆಯಬೇಕಿದೆ. ಅಲ್ಲದೇ ಈಗಿನ ಯುವ ಪೀಳಿಗೆಗೆ ನಮ್ಮ ಸಂಸ್ಕೃತಿ, ಸಂಪ್ರದಾಯ, ಆಚರಣೆಗಳನ್ನು ತಿಳಿಸುವುದರ ಜೊತೆಗೆ ಅವುಗಳ ವೈಜ್ಞಾನಿಕ ಅಂಶಗಳನ್ನೂ ತಿಳಿ ಹೇಳಬೇಕಾಗಿದೆ ಎಂದರು.
ವಿಪ್ರರ ಕುಟುಂಬ ಸಮ್ಮಿಲನ ಕಾರ್ಯಕ್ರಮದ ಕಾರ್ಯಾಧ್ಯಕ್ಷ ಎಂ.ಎಸ್. ಸತೀಶ್ ಮಾತನಾಡಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ವಿಪ್ರರ ಅಭಿವೃದ್ಧಿ ಜೊತೆಗೆ ಸಮಾಜದ ಶ್ರೇಯೋಭಿವೃದ್ಧಿಗೂ ಶ್ರಮಿಸಿ, ಭವ್ಯ ಭಾರತದ ಕಲ್ಪನೆಯನ್ನು ಸಾಕಾರಗೊಳಿಸೋಣ ಎಂದರು.
ವಿಪ್ರ ಭದ್ರಾವತಿ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಜನಾರ್ಧನ್ ಅಯ್ಯಂಗಾರ್, ಸಾಗರ ತಾಲೂಕು ನೌಕರರ ಸಂಘದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶ್ರೀಧರ್ ಭಟ್, ಕೃಷಿಕ ಮತ್ತು ಸಮಾಜ ಸೇವಕರಾದ ಬಣ್ಣುಮನೆ ಚಿದಂಬರರಾವ್, ಕಡುವಿನ ಮನೆ ಲಕ್ಷ್ಮೀನಾರಾಯಣ ಭಟ್ ದಂಪತಿ, ನಾದಭಾರತೀ ಅನುಸಂಧಾನ ಪ್ರತಿಷ್ಠಾನದ ಜನಾರ್ಧನ್ ಹೆಗಡೆ ಹಾಜರಿದ್ದರು.
ಈ ಸಂದರ್ಭದಲ್ಲಿ 25 ವರ್ಷ ದಾಂಪತ್ಯ ಪೂರೈಸಿದ 25 ದಂಪತಿಯನ್ನು ಸನ್ಮಾನಿಸಲಾಯಿತು.
ಲತಾ ಮತ್ತು ವಾಣಿಶ್ರೀ ಪ್ರಾರ್ಥಿಸಿ, ಎನ್.ಎಸ್. ಭಟ್ ಸ್ವಾಗತಿಸಿದರು. ಹು.ಭಾ. ಅಶೋಕ್ ನಿರೂಪಿಸಿದರು. ಎನ್.ಎನ್. ಶ್ರೀಧರ್ ವಂದಿಸಿದರು.