ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಒಳಚರಂಡಿ ಕಾಮಗಾರಿ ಸ್ಥಗಿತ: ನಿವಾಸಿಗಳ ಸಂಕಷ್ಟ

Lingaraj Badiger
Updated On : 3 Apr 2013, 11:12 am

ಕ.ಪ್ರ. ವಾರ್ತೆ, ಶಿವಮೊಗ್ಗ, ಏ.2
ಒಳ ಚರಂಡಿ ನಿರ್ಮಾಣ ಮಾಡುವ ನೆಪದಲ್ಲಿ ಕೈಗೊಂಡ ಕಾಮಗಾರಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಿದ್ದರಿಂದ ಇಲ್ಲಿನ ಜನ ಅತಂತ್ರ ಸ್ಥಿತಿ ಎದುರಿಸಬೇಕಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್ ಬಳಿ ಇರುವ ವಿನಾಯಕ ರಸ್ತೆಯಲ್ಲಿ ಕಳೆದ ಎರಡು ತಿಂಗಳ ಹಿಂದೆಯಷ್ಟೇ ಒಳ ಚರಂಡಿ ನಿರ್ಮಾಣ ಮಾಡಲು ಕರ್ನಾಟಕ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಗುಂಡಿಗಳನ್ನು ತೆಗೆದಿತ್ತು. ಆದರೆ, ಇದೀಗ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದ್ದರಿಂದ ಈ ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
ಈಗಾಗಲೇ 2 ಬಾರಿ ಒಳ ಚರಂಡಿ ವ್ಯವಸ್ಥೆಯನ್ನು ಸರಿಪಡಿಸಲು ಪೈಪ್ ಲೈನ್ ತೆಗೆದು ಊರಿನ ಕಮಟು ಹೊರ ಬರುವಂತೆ ಮಾಡಿದ್ದ ಇಲಾಖೆ ಈಗ ಅದನ್ನು ಮುಚ್ಚುವುದರಲ್ಲೂ ತಾರತಮ್ಯ ಮಾಡುತ್ತಿದ್ದು, ರಸ್ತೆಯಲ್ಲಿ ಸಾರ್ವಜನಿಕರು ಓಡಾಡಲು ಸಾಧ್ಯವಾಗದಂತೆ ಮಾಡಿದೆ.
ಮನೆಯೊಳಗೆ ಚರಂಡಿ ನೀರು: ಒಳ ಚರಂಡಿ ವ್ಯವಸ್ಥೆಯನ್ನು ಪೂರೈಸಿದ ನಂತರದ ಕ್ರಮ ಕೈಗೊಳ್ಳಬೇಕಾದ ಇಲಾಖೆ ಇತ್ತ ಕಡೆ ಗಮನಹರಿಸಿಲ್ಲ. ಎರಡು ಬದಿಯಲ್ಲಿರುವ ಸಿಮೆಂಟ್ ಚರಂಡಿಗಳು ರಸ್ತೆಯ ಮಣ್ಣಿನಿಂದ ಮುಚ್ಚಿಹೋಗಿವೆ. ಮಳೆ ಬಂದರೆ ಇಲ್ಲಿನ ಮನೆಯೊಳಗೆ ಚರಂಡಿ ನೀರು ಹರಿಯುವ ಸಾಧ್ಯತೆಗಳಿರುವುದರಿಂದ ಸ್ಥಗಿತಗೊಂಡಿರುವ ಕಾಮಗಾರಿಯನ್ನು ಕೂಡಲೇ ಪ್ರಾರಂಭ ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಒಳಚರಂಡಿ ವ್ಯವಸ್ಥೆ ಕಾಮಗಾರಿಯಿಂದ ಒಂದೂವರೆ ತಿಂಗಳಿನಿಂದ ಕೆಟ್ಟ ವಾಸನೆ ಕುಡಿದು ಬದುಕುತ್ತಿದ್ದೇವೆ. ಇದೀಗ ಕೆಲಸ ಮುಗಿದಿದೆ. ಆದರೂ ಜನ ಮೂಗು ಮುಚ್ಚಿಕೂಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಯಾವುದಾದರೂ ವಾಹನ ಬಂದರೆ ಗುಂಡಿಗಳಲ್ಲಿ ಬೀಳುವುದು ನಿಶ್ಚಿತ. ಆದ್ದರಿಂದ ಕೂಡಲೇ ಸ್ಥಗಿತಗೊಳಿಸಿರುವ ಕಾಮಗಾರಿ ಕೈಗೊಳ್ಳುವಂತೆ ಒತ್ತಾಯಿಸುತ್ತಾರೆ ಇಲ್ಲಿನ ಕಮಲಮ್ಮ ಮತ್ತು ರವಿಕುಮಾರ್.
ಇದು ಸಂಪೂರ್ಣ ಕಾಮಗಾರಿ ಕಾರ್ಮಿಕರಿಂದಲೇ ನಡೆಯಬೇಕು. ಇನ್ನೆರೆಡು ದಿನದಲ್ಲಿ ರಸ್ತೆಯನ್ನು ಸರಿಮಾಡಿಕೊಡಲಾಗುತ್ತದೆ ಎನ್ನುತ್ತಾರೆ ಕೆಯುಡಬ್ಲ್ಯೂಎಸ್‌ನ ಸಹಾಯಕ ಕಾರ್ಯಪಾಲಕ ಅಭಿಯಂತರ ಅಚ್ಯುತಾನಂದ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement