ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬಿಜೆಪಿ ಮುಖಂಡರ ವಿರುದ್ಧ ಹರಿಹಾಯ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ

Rashmi Kasaragodu
Updated On : 3 Apr 2013, 11:33 am

ಕ.ಪ್ರ ವಾರ್ತೆ   ಶಿಕಾರಿಪುರ   ಏ.2-
ಅಧಿಕಾರಾವಧಿಯಲ್ಲಿ ಕಾನೂನು ಬಿಗಿಗೊಳಿಸಿ ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆ ರದ್ದುಗೊಳಿಸಿ ಹೊರದೇಶಕ್ಕೆ ಆಮದುಗೊಳಿಸದಂತೆ ತಡೆಯೊಡ್ಡಿದ ಪರಿಣಾಮ ಉದ್ದೇಶಪೂರ್ವಕವಾಗಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ  ಅಧಿಕಾರದಿಂದ ಕೆಳಗಿಳಿಸಲು ಪ್ರತಿಪಕ್ಷದ ಜತೆ ಸ್ವಪಕ್ಷೀಯರು ಸಹಕರಿಸಿದರು ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಿಜೆಪಿ ಮುಖಂಡರ ವಿರುದ್ಧ ಹರಿಹಾಯ್ದರು.
ಮಂಗಳವಾರ ಪಟ್ಟಣದ ಮಂಗಳಭವನದ ಹಿಂಭಾಗದಲ್ಲಿ ನಡೆದ ಕರ್ನಾಟಕ ಜನತಾಪಕ್ಷದ ಕಾರ್ಯಕರ್ತರ  ಹಾಗೂ ಅಭಿಮಾನಿಗಳ ಸಭೆ ಉದ್ಘಾಟಿಸಿ ಮಾತನಾಡಿ, ಪಕ್ಷ ಅಸ್ತಿತ್ವ ಪಡೆದ 4 ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ  ಸೂಕ್ತ ಅಭ್ಯರ್ಥಿ ಗುರುತಿಸಿ ಪಕ್ಷದ ತೆಂಗಿನಕಾಯಿ ಚಿಹ್ನೆಯನ್ನು ಜನತೆಗೆ ಪರಿಚಯಿಸುವ ಕಾರ್ಯ ಕಷ್ಟಕರವಾಗಿದೆ. ಈ ದಿಸೆಯಲ್ಲಿ ತಡರಾತ್ರಿವರೆಗೆ ಮಗ್ನನಾಗಿರುತ್ತೇನೆ. ತಾಲೂಕಿನ ಜನತೆ, ಕಾರ್ಯಕರ್ತರು ಹೆಚ್ಚಿನ  ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಗ್ರಾಮೀಣ ಭಾಗದಲ್ಲಿ ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸುವ ಪಣತೊಟ್ಟಿದ್ದಾರೆ ಎಂದರು.
ಹೆಚ್ಚಿನ ಸಾಧನೆ: ಕೃಷಿ, ನೀರಾವರಿ ಮತ್ತಿತರ ರಾಷ್ಟ್ರೀಯ ವಿಚಾರಗಳಿಗೆ ಆದ್ಯತೆ ನೀಡಿ ರಚಿಸಿದ ಕೆಜೆಪಿ ಪಕ್ಷ ಕಳೆದ 4 ತಿಂಗಳ  ಅವಧಿಯಲ್ಲಿ ಹೆಚ್ಚಿನ ಸಾಧನೆ ಮೆರೆದಿದೆ. ರಾಜ್ಯದಲ್ಲಿ ಸಾವಿರ ಕೋಟಿಯ ಮಹಿಳಾ ಸಹಕಾರಿ ಬ್ಯಾಂಕ್ ಸ್ಥಾಪನೆ, ತೆರಿಗೆ ಪಾವತಿಸುವವರನ್ನು ಹೊರತುಪಡಿಸಿ ಎಲ್ಲರಿಗೂ ಆದಾಯ ಪ್ರಮಾಣ ಪತ್ರದ ಮೂಲಕ ಸರ್ಕಾರ  ಸವಲತ್ತು, ಹಿರಿಯ ಕೃಷಿಕರಿಗೆ ತಿಂಗಳ ಮಾಸಾಶನ ಮತ್ತಿತರ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗುತ್ತಿದೆ ಎಂದರು.
ಇದೀಗ ಚುನಾವಣೆ ಹಿನ್ನೆಲೆಯಲ್ಲಿ ವಿರೋಧಿಗಳು ಮತ ಕೇಳಿದರೆ ತಲೆಕೆಡಿಸಿಕೊಳ್ಳದೆ ಎಲ್ಲಾ ವರ್ಗದ ಜನತೆಗೆ  ಯೋಜನೆ ರೂಪಿಸಿದ ಯಡಿಯೂರಪ್ಪ ಬಗ್ಗೆ ಹಗುರವಾಗಿ ಮಾತನಾಡಿದರೆ ಸೂಕ್ತ ರೀತಿಯಲ್ಲಿ ಉತ್ತರ ನೀಡುವಂತೆ ತಿಳಿಸಿದರು.
ಇತಿಹಾಸ ನಿರ್ಮಿಸಿ: ಲೋಕಸೇವಾ ಆಯೋಗದ ಮಾಜಿ ಸದಸ್ಯ ಮುಕುಡಪ್ಪ ಮಾತನಾಡಿ, ಮುಂದಿನ ಬಾರಿ ಪ್ರಧಾನಮಂತ್ರಿ ಆಯ್ಕೆಯಲ್ಲಿ ಯಡಿಯೂರಪ್ಪ ಪ್ರಮುಖ ಪಾತ್ರ ವಹಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಅವಿರೋಧ ಆಯ್ಕೆಗೆ  ಸಹಕರಿಸುವಂತೆ ಮನವಿ ಮಾಡಿ ಇತಿಹಾಸ ನಿರ್ಮಿಸಲು ಶಿಕಾರಿಪುರದ ಜನತೆ ಮುಂದಾಗಬೇಕಾಗಿದೆ ಎಂದರು. ಮುಖಂಡ ಗುರುಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಾಜ್ಯ ಉರ್ದು ಅಕಾಡೆಮಿ ಅಧ್ಯಕ್ಷ ಮೌಲಾನಾ ಅಮ್ಜದ್‌ಹುಸೇನ್, ಕಾಡಾ ಮಾಜಿ ಅಧ್ಯಕ್ಷ ಶೇಖರಪ್ಪ, ತಾಪಂ ಅಧ್ಯಕ್ಷ ಹನುಮಂತಪ್ಪ, ಉಪಾಧ್ಯಕ್ಷೆ ಸರೋಜಮ್ಮ, ಅಗಡಿ ಅಶೋಕ್, ಗಾಯತ್ರಿದೇವಿ, ಭೂಕಾಂತ್, ಚೂಡಾನಾಯ್ಕ, ವಸಂತಗೌಡ, ಲಕ್ಷ್ಮಣನಾಯ್ಕ, ವಿಜಯಕುಮಾರ್ ಜಾಧವ್, ಬಿ.ಎಚ್. ನಾಗರಾಜಪ್ಪ, ಸಣ್ಣಹನುಮಂತಪ್ಪ, ಸಿದ್ರಾಮಪ್ಪ, ಪ್ರವೀಣಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement