ವಿದ್ಯುತ್ ವ್ಯತ್ಯಯಕ್ಕೆ ಕಾಂಗ್ರೆಸ್ ಖಂಡನೆ
ಶಿವಮೊಗ್ಗ: ನಿರಂತರ 7-8 ಗಂಟೆಗಳ ಕಾಲ ವಿದ್ಯುತ್ ಕಡಿತಗೊಳಿಸುತ್ತಿರುವ ಕ್ರಮವನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಅಲ್ಪ ಸಂಖ್ಯಾತರ ವಿಭಾಗ ಖಂಡಿಸಿದೆ. ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿದ್ದು, ಇದರಿಂದ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದು ಸಮಿತಿ ಆರೋಪಿಸಿದೆ. ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಇದೇ ಕ್ಷೇತ್ರದವರಾಗಿದ್ದು, ಪರಿಸ್ಥಿತಿ ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ. ಈ ಕೂಡಲೇ ಸಮರ್ಪಕ ವಿದ್ಯುತ್ ನೀಡುವಂತೆ ಕ್ರಮಕೈಗೊಳ್ಳಬೇಕು ಎಂದು ಸೈಯದ್ ವಾಹೀದ್ ಒತ್ತಾಯಿಸಿದ್ದಾರೆ.
14ರಿಂದ ಶಿಬಿರ
ಶಿವಮೊಗ್ಗ: ರಂಗಾಯಣ ಏಪ್ರಿಲ್ 14ರಿಂದ 30ರ ವರೆಗೆ ಬೆಳಗ್ಗೆ 10 ರಿಂದ ಸಂಜೆ 5ಗಂಟೆವರೆಗೆ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಮಕ್ಕಳಿಗಾಗಿ ಬೇಸಿಗೆ ಶಿಬಿರ ಏರ್ಪಡಿಸಿದೆ. ಚಿತ್ರಕಲೆ, ರಂಗ ವ್ಯಾಯಾಮ, ರಂಗಸಂಗೀತ, ಮುಖವಾಡ ತಯಾರಿಕೆ, ಯೋಗ, ದೇಸಿ ಹಾಡು-ಕುಣಿತ, ಆಟ, ನಟನೆ, ನಗು, ಸಾಹಸ, ಅರಿವು, ಸ್ನೇಹ, ಸಮಾನತೆ, ಬದುಕು-ಕಲಿ, ಪ್ರೇರಣೆಗಳು ಬಗ್ಗೆ ಮಾಹಿತಿ ನೀಡಲಾಗುವುದು.12 ರಿಂದ 14 ವರ್ಷದ ಮಕ್ಕಳಿಗೆ ಮಾತ್ರ ಅವಕಾಶವಿದ್ದು, ಕಡ್ಡಾಯವಾಗಿದೆ. ಶಿಬಿರದಲ್ಲಿ 100 ಮಕ್ಕಳು ಪಾಲ್ಗೊಳ್ಳಬಹುದು. ಪ್ರವೇಶ ಶುಲ್ಕ 500 ಎಂದು ನಿರ್ದೇಶಕ ಹೊ.ನ. ಸತ್ಯ ತಿಳಿಸಿದ್ದಾರೆ. ವಿವರಗಳಿಗಾಗಿ 9844367071.
ಪಡಿತರ ಚೀಟಿದಾರರ ಗಮನಕ್ಕೆ
ಶಿವಮೊಗ್ಗ: ಗ್ರಾಮಾಂತರ ಪ್ರದೇಶದ ಎಲ್ಲಾ ಪಡಿತರ ಚೀಟಿದಾರರು ಏಪ್ರಿಲ್ -2013ನೇ ಮಾಹೆಯಿಂದ ಪಡಿತರ ಪಡೆಯುವಾಗ ಕಡ್ಡಾಯವಾಗಿ ನ್ಯಾಯಬೆಲೆ ಅಂಗಡಿದಾರರಿಗೆ ಖಾಯಂ ಪಡಿತರ ಚೀಟಿಯನ್ನು ಹಾಜರು ಪಡಿಸಲು ಸೂಚಿಸಲಾಗಿದೆ. ಹಾಗೆಯೇ ಯಾರು ಏಪ್ರಿಲ್ -2013ನೇ ಮಾಹೆಯಲ್ಲಿ ಖಾಯಂ ಪಡಿತರ ಹಾಜರುಪಡಿಸದೇ ಹಿಂದಿನ ತಾತ್ಕಾಲಿಕ ಕಾರ್ಡುಗಳನ್ನು ಹಾಜರು ಪಡಿಸುತ್ತಾರೋ ಅಂತಹ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗುವುದೆಂದು ಶಿವಮೊಗ್ಗ ತಹಸೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.