ಸಂವೇದನಾಶೀಲ ಸ್ಪಂದನೆ ಬೆಳೆಸಿಕೊಳ್ಳಿ
ಕ.ಪ್ರ.ವಾರ್ತೆ, ಶಿವಮೊಗ್ಗ, ಏ.2
ಪೊಲೀಸರು ಜನಸ್ನೇಹಿಯಾಗಿರಬೇಕಾದರೆ ಜನರೊಂದಿಗೆ ಸಂವೇದನಾಶೀಲರಾಗಿ ಸ್ಪಂದಿಸುವುದು ಅತಿ ಮುಖ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರ ಕುಮಾರ್ ಹೇಳಿದರು.
ಮಂಗಳವಾರ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪೊಲೀಸರ ಶ್ರಮಕ್ಕೆ ಜನರಿಂದ ಪುರಸ್ಕಾರ ಸಿಗಬೇಕು. ಅದಕ್ಕಾಗಿ ಪೊಲೀಸರು ಜನರೊಂದಿಗೆ ಸಂವೇದನಾ ಶೀಲರಾಗಿ ಸ್ಪಂದಿಸಬೇಕು ಎಂದ ಅವರು ಕಳೆದ 1 ವರ್ಷದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಕಾನೂನು ಭಂಗವಾಗುವ ಯಾವುದೇ ತೀವ್ರತರದ ಸಮಸ್ಯೆ ಉದ್ಭವಿಸಿಲ್ಲ. ಮುಂದೆಯೂ ಇದೇ ರೀತಿಯಲ್ಲಿ ಪೊಲೀಸರು ಜನರ ವಿಶ್ವಾಸ ಗಳಿಸಬೇಕು ಎಂದರು.
ವಿಮೆ ವಿಸ್ತರಿಸಲು ಮನವಿ: ನಿವೃತ್ತ ಸಹಾಯಕ ಪೊಲೀಸ್ ಉಪನಿರೀಕ್ಷಕ ಬಿ. ರಾಜೀವ ಶೆಟ್ಟಿ ಮಾತನಾಡಿ, ಕರ್ತವ್ಯನಿರತ ಪೊಲೀಸರಿಗೆ ಇರುವ ಆರೋಗ್ಯ ಭಾಗ್ಯ ವಿಮಾ ಯೋಜನೆಯನ್ನು ನಿವೃತ್ತ ಪೊಲೀಸರಿಗೂ ವಿಸ್ತರಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲು ಜಿಲ್ಲಾ ಎಸ್‌ಪಿಗೆ ಮನವಿ ಮಾಡಿದರು.
ಪೊಲೀಸರು ಸದಾ ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕು. ಜನರಿಗೆ ತಮ್ಮ ಕೈಲಾದ ಸಹಾಯ ಮಾಡಿದರೆ ಪೊಲೀಸರ ಬಗ್ಗೆ ವಿಶ್ವಾಸ ಮೂಡುತ್ತದೆ ಎಂದರು.
ಪೊಲೀಸ್ ಕರ್ತವ್ಯದಲ್ಲಾಗುವ ಸಣ್ಣ-ಪುಟ್ಟ ವ್ಯತ್ಯಾಸ, ತಪ್ಪುಗಳಿಗೆ ಹಿರಿಯ ಅಧಿಕಾರಿಗಳು ದೊಡ್ಡ ಶಿಸ್ತುಕ್ರಮ ಕೈಗೊಳ್ಳುವುದರಿಂದ ಪೊಲೀಸರ ಆತ್ಮಸ್ಥೈರ್ಯ ಕುಂಠಿತವಾಗುತ್ತದೆ ಆದ್ದರಿಂದ ಪೊಲೀಸರಿಗೆ ಸ್ಥೈರ್ಯ ಹೆಚ್ಚಿಸುವ ಪ್ರೋತ್ಸಾಹ ನೀಡಬೇಕು ಎಂದರು.
ಹೆಚ್ಚುವರಿ ಎಸ್‌ಪಿ ಬಸವರಾಜು ಪೊಲೀಸ್ ಕಲ್ಯಾಣ ವರದಿ ವಾಚಿಸಿದರು. ಅತಿಥಿ, ಗಣ್ಯರಿಗೆ ಪೊಲೀಸ್ ಧ್ವಜ ವಿತರಿಸಿ ಪೊಲೀಸ್ ಕಲ್ಯಾಣ ನಿಧಿಗೆ ದೇಣಿಗೆ ಸಂಗ್ರಹಿಸಲಾಯಿತು.
ಪ್ರೊಬೆಷನರಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ನೇತೃತ್ವದ ಆರು ತುಕಡಿಗಳ ಕವಾಯತು ಆಕರ್ಷಕವಾಗಿತ್ತು.