ಯುದ್ಧಕ್ಕೂ ಮುನ್ನವೇ ಶಸ್ತ್ರ ಕೆಳಗಿಟ್ಟ ಬಿಜೆಪಿ
ಶ್ರೀಕಾಂತ ಭಟ್
ಶಿವಮೊಗ್ಗ: ಕೆಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರೊಂದಿಗೆ ಗುದ್ದಾಡುವ ಬದಲು ಸಂಘಟನೆಯನ್ನು ಭದ್ರಗೊಳಿಸುವುದೇ ಉತ್ತಮ ಎಂಬ ತಂತ್ರಗಾರಿಕೆಗೆ ಮೊರೆಹೋದ ಶಿವಮೊಗ್ಗ ಜಿಲ್ಲಾ ಬಿಜೆಪಿ, ಚುನಾವಣೆಗೆ ಮುನ್ನವೇ ಸಾಗರ, ಶಿಕಾರಿಪುರ ಮತ್ತು ಸೊರಬ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆಗೂ ಮುನ್ನವೇ ಶಸ್ತ್ರ ಕೆಳಗಿಳಿಸಿದೆ!
ಸಾಗರದಿಂದ ಬೇಳೂರು ಗೋಪಾಲಕೃಷ್ಣ ಯಡಿಯೂರಪ್ಪ ಅಲೆಯಲ್ಲಿ ಗೆಲುವಿನ ದಡ ಸೇರಿದ್ದರು. ಸೊರಬದಲ್ಲಿ 'ಸಹೋದರರ ಸವಾಲ್' ಮಧ್ಯೆ ಹರತಾಳು ಹಾಲಪ್ಪ ಗೆಲವಿನ ನಗೆ ಬೀರಿದ್ದರು. ಇನ್ನು ಶಿಕಾರಿಪುರದಲ್ಲಿ ಸ್ವತಃ ಯಡಿಯೂರಪ್ಪನವರೇ 'ಸೋಲಿಲ್ಲದ ಸರದಾರ' ಬಂಗಾರಪ್ಪ ವಿರುದ್ಧ ಬಹಳ ಮತಗಳ ದೊಡ್ಡ ಅಂತರದಲ್ಲಿ ಗೆದ್ದಿದ್ದರು. ಆದರೆ, ಇದೀಗ ಚಿತ್ರಣ ಸಂಪೂರ್ಣ ಬದಲಾಗಿದೆ. ಗೋಪಾಲಕೃಷ್ಣ ದಾಖಲೆಯಲ್ಲಷ್ಟೆ ಬಿಜೆಪಿಯಲ್ಲಿದ್ದಾರೆ.
ಸೊರಬದಲ್ಲಿ ಹಾಲಪ್ಪ ಹಾಗೂ ಶಿಕಾರಿಪುರದಲ್ಲಿ ಯಡಿಯೂರಪ್ಪ ಅವರೇ ಕೆಜೆಪಿ ಹುರಿಯಾಳು. ಇದೀಗ ಈ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಲೂ ಹೆಣಗಾಡುತ್ತಿದೆ. ಮೇಲ್ನೋಟಕ್ಕೆ ಪಕ್ಷಕ್ಕೆ ಯಾರೂ ಮುಖ್ಯವಲ್ಲ. ಈ ಕ್ಷೇತ್ರಗಳಲ್ಲಿ ಕಾರ್ಯಕರ್ತರ ದೊಡ್ಡ ಪಡೆಯೇ ಇದೆ ಎಂದು ಬಿಜೆಪಿ ನಾಯಕರು ಹೇಳಿಕೊಳ್ಳುತ್ತಿದ್ದರೂ ನೋವು ಅನುಭವಿಸುವುದು ತಪ್ಪೋಲ್ಲ.
ಟೂಪಾಯಿಂಟ್ ಪ್ರೋಗ್ರಾಂ: ಶಿಕಾರಿಪುರ ಹಾಗೂ ಸೊರಬದಲ್ಲಿ ಬಿಜೆಪಿ ಕಾರ್ಯಕರ್ತರು ಕೆಜೆಪಿಯತ್ತ ಗುಳೇ ಹೋಗಿಯಾಗಿದೆ. ಅಲ್ಲಿ ಅಳಿದುಳಿದವರನ್ನು ಕೂಡಿ ಹಾಕುವ ಕಾರ್ಯಕ್ಕೆ ಬಿಜೆಪಿ ಕೈ ಹಾಕಿದೆ. ಪಕ್ಷದಲ್ಲಿ ದುಡಿದ ಕಾರ್ಯಕರ್ತರಿಗೆ ತಾಲೂಕು ಘಟಕದ ಜವಾಬ್ದಾರಿ ನೀಡಿದ್ದು, ಪಕ್ಷವನ್ನು ಸಂಘಟಿಸಲಾಗುತ್ತಿದೆ.
ಈ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಂಬಂಧವಾಗಿ ಬಿಜೆಪಿ ತುಟಿಕ್ಪಿಟಿಕ್ ಎನ್ನುತ್ತಿಲ್ಲ. ಈ ಬಗ್ಗೆ ವಿಚಾರಿಸಿದರೆ, ಪಕ್ಷದ ಸ್ಥಳೀಯ ಮುಖಂಡರ ಪೈಕಿ ಮೂರ್ನಾಲ್ಕು ಮಂದಿಯಲ್ಲಿ ಒಬ್ಬ ಸಮರ್ಥರನ್ನು ಆರಿಸಲಾಗುತ್ತದೆ. ಬಿಜೆಪಿಗೆ ಅಭ್ಯರ್ಥಿಗಳಿಗೇನು ಕೊರತೆ ಇಲ್ಲ ಎಂದೇ ಸಮಜಾಯಿಷಿ ನೀಡಲಾಗುತ್ತಿದೆ. ಈ ಕ್ಷೇತ್ರಗಳಿಗೆ ತಾರಾ ನಾಯಕರೋ ಅಥವಾ ಬೇರೆ ಪಕ್ಷದಿಂದ ನಾಯಕರನ್ನು ಎಳೆದು ತಂದು ಅಭ್ಯರ್ಥಿಗಳನ್ನು ಹೂಡುವುದಿಲ್ಲ. ಬದಲಾಗಿ ನಮ್ಮ ಪಕ್ಷದಲ್ಲಿಯೇ ದುಡಿಯುವವರಿಗೆ ಅವಕಾಶ ನೀಡಿ ಬೆಳೆಸಿ ಪಕ್ಷ ಸಂಘಟನೆಗೆ ಒತ್ತುಕೊಡುತ್ತೇವೆ ಎನ್ನುತ್ತಾರೆ ಮತ್ತೊಬ್ಬರ ನಾಯಕರು.
ಕೆಜೆಪಿಗೆ ಗೂಗ್ಲಿ: ಇನ್ನೊಂದೆಡೆ ಈ ಮೂರು ಕ್ಷೇತ್ರಗಳಲ್ಲಿ ಕೆಜೆಪಿ ಪ್ರಭಾವ ತಗ್ಗಿಸುವ ಗುರಿಯನ್ನು ಬಿಜೆಪಿ ಹಾಕುತ್ತಿದೆ. ಪ್ರಮುಖವಾಗಿ ಸಾಗರ ಹಾಗೂ ಸೊರಬದಲ್ಲಿ ಕೆಜೆಪಿ ಅಭ್ಯರ್ಥಿಗಳಿಗೆ ಮಣ್ಣು ಮುಕ್ಕಿಸುವ ತಂತ್ರಗಾರಿಕೆ ಬಿಜೆಪಿ ಕಡೆಯಿಂದ ನಡೆದಿದೆ. ಅಭ್ಯರ್ಥಿಗಳ ಆಯ್ಕೆ ಮೂಲಕ ಕೆಜೆಪಿಗೆ ಹಿನ್ನಡೆ ಮಾಡುವ ತಂತ್ರಗಾರಿಕೆಯೂ ಅಡಗಿದೆ ಎನ್ನಲಾಗುತ್ತಿದೆ. ಜಾತಿ ಆಧಾರದಲ್ಲಿ ಯಾವ ಅಭ್ಯರ್ಥಿ ಹೂಡಿದರೆ ಕೆಜೆಪಿ ಓಟಕ್ಕೆ ಅಡ್ಡಗಾಲಾಗಬಹುದೆಂಬ ಲೆಕ್ಕಾಚಾರವನ್ನೂ ಹಾಕಲಾಗುತ್ತಿದೆ.
ಎಲ್ಲಿ ಯಾರ ಹೆಸರು?: ಸೊರಬ ವಿಧಾನಸಭಾ ಕ್ಷೇತ್ರದಿಂದ ಹುಲ್ತಿಕೊಪ್ಪ ಶ್ರೀಧರ್, ವಕೀಲ ಎಂ.ನಾಗಪ್ಪ, ಚಿಕ್ಕಾವಲಿ ನಾಗರಾಜ ಗೌಡ, ದಿವಾಕರ ಬಾವೆ ಟಿಕೆಟ್ ಆಕಾಂಕ್ಷಿಗಳಿದ್ದರು. ಈ ಮಧ್ಯೆಯೇ ಮಡಿವಾಳ ಸಮಾಜದ ಪ್ರಮುಖರಾದ ಬಸವಣ್ಯಪ್ಪ ಹೆಸರೂ ಕೇಳಿಬರುತ್ತಿದೆ.
ಇನ್ನು ಸಾಗರದಲ್ಲಿ ಯು.ಎಚ್. ರಾಮಪ್ಪ ಹಾಗೂ ಶರಾವತಿ ಸಿ. ರಾವ್, ಸತ್ಯನಾರಾಯಣ್ ತಳನೀರು ಹೆಸರು ರೇಸ್ನಲ್ಲಿತ್ತಾದರೂ, ಕಳೆದ ವಾರವಷ್ಟೇ ಜೆಡಿಎಸ್ ತೊರೆದು ಬಿಜೆಪಿಗೆ ಸೇರಿದ ಅರುಣ್ ಪ್ರಸಾದ್ ಹೆಸರು ಇದೀಗ ಕೇಳಿಬರುತ್ತಿದೆ.
ಶಿಕಾರಿಪುರದಲ್ಲಿ ಜೆಡಿಎಸ್ನಿಂದ ಬಂದ ಕೊಪ್ಪಲು ಮಂಜುನಾಥ್ ಹೆಸರು ಸಾಕಷ್ಟು ಕೇಳಿಬಂದಿತ್ತಾದರೂ, ಪಕ್ಷದ ಹಿರಿಯರು ಆಕ್ಷೇಪಿಸುತ್ತಿದ್ದಾರೆ. ತಾಲೂಕಿನ ಪ್ರಬಲ ಕೋಮಿಗೆ ಸೇರಿದ ಜಿಪಂ ಸದಸ್ಯ ದಾನೇರ ರುದ್ರಪ್ಪ ಹೆಸರು ಇದೀಗ ಕೇಳಿಬಂದಿದೆ.
ಒಂದು ವೇಳೆ ಪದ್ಮನಾಭ ಭಟ್ ಕಣಕ್ಕಿಳಿಯಲು ನಿರಾಕರಿಸಿದರೆ ದಾನಿ ರುದ್ರಪ್ಪ ಖಚಿತ. ಈ ಮಧ್ಯೆಯೇ ಹಿರಿಯರಾದ ಕಪ್ನಳ್ಳಿ ರಾಮಪ್ಪ ಆಕಾಂಕ್ಷಿಯಾಗಿದ್ದಾರೆ. ತಮ್ಮ ಸಾಧನೆಯನ್ನು ಪರಿಚಯಿಸುವ ಪ್ರಯತ್ನವನ್ನು ನಡೆಸಿದ್ದಾರೆ.