ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಆಯನೂರು ಸ.ನಂ.102ರ ನಿಜ ಮಾಲೀಕ ಯಾರು?

Lingaraj Badiger
Updated On : 5 Apr 2013, 10:46 am

ಕ.ಪ್ರ ವಾರ್ತೆ, ಶಿವಮೊಗ್ಗ, ಏ.4
ಆಯನೂರಿನ ಸರ್ವೆ ನಂಬರ್ 102 ಇದೀಗ ತೀವ್ರ ವಿವಾದಕ್ಕೀಡಾಗಿದ್ದು, ಗ್ರಾಮ ಪಂಚಾಯಿತಿ ಹಾಗೂ ಆಸ್ತಿ ಮಾಲೀಕರ ನಡುವೆ ತಿಕ್ಕಾಟ ನಡೆದಿದೆ.
ಪೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಆಸ್ತಿ ಮಾಲೀಕರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಆಗಿದ್ದಿಷ್ಟು: ರುಕ್ಮಿಣಿ ಬಾಯಿ ಎಂಬುವರಿಗೆ ಸೇರಿದ್ದ 1 ಎಕರೆ 34 ಗುಂಟೆ ಜಾಗದಲ್ಲಿ ಕೆಲವರು ಅನಧಿಕೃತವಾಗಿ ಮನೆ ಕಟ್ಟಿಕೊಂಡಿದ್ದರು. 10 ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿ ಆಶ್ರಯ ನಿವೇಶನ ಹಂಚುವ ಉದ್ದೇಶದಿಂದ ಜಾಗದ ಅವಶ್ಯಕತೆ ಬಿದ್ದಾಗ ರುಕ್ಮಿಣಿ ಬಾಯಿಯವರು ತಮಗೆ ಸೇರಿದ ಜಾಗವನ್ನು ಗ್ರಾಪಂಗೆ # 50 ಛಾಪಾ ಕಾಗದದಲ್ಲಿ ಬರೆದು ಕೊಟ್ಟು ಉಪಯೋಗಿಸಿಕೊಳ್ಳುವಂತೆ ಸೂಚಿಸಿದ್ದರು.
ಆದರೆ, ಆ ಜಾಗದಲ್ಲಿದ್ದ ಕುಟುಂಬಗಳನ್ನು ತೆರವುಗೊಳಿಸದ ಕಾರಣ ಗ್ರಾಮ ಪಂಚಾಯಿತಿ ಮೌನಕ್ಕೆ ಶರಣಾಯಿತು.
ಈ ಮಧ್ಯೆ ಜಮೀನಿನ ಮಾಲೀಕರಾದ ರುಕ್ಮಿಣಿ ಬಾಯಿಯವರು ಸರ್ಕಾರದಿಂದ ಹಣ ಬಾರದ ಕಾರಣ, ಜಾಗವನ್ನು ಗಂಗಾನಾಯ್ಕ ಎಂಬುವರಿಗೆ ಮಾರಾಟ ಮಾಡಿದರು. ಈ ಬೆಳವಣಿಗೆ ನಡುವೆಯೇ ಗ್ರಾಮ ಪಂಚಾಯಿತಿಯವರು ಅಲ್ಲಿ ಅನಧಿಕೃತವಾಗಿ ನೆಲೆಸಿದ್ದ ಕುಟುಂಬದವರಿಗೆ ಮೇಲ್ಛಾವಣಿ ಖಾತೆ ಮಂಜೂರು ಮಾಡಿದರು. ಇದರ ಆಧಾರದ ಮೇಲೆ ಅಲ್ಲಿನ ವಾಸಿಗಳು ಮೂಲ ಸೌಲಭ್ಯ ಕಲ್ಪಿಸುವಂತೆ ಗ್ರಾಪಂಗೆ ಅರ್ಜಿ ಕೊಟ್ಟು ಒತ್ತಡ ತರಲಾರಂಭಿಸಿದರು.
ಈ ಹಿನ್ನೆಲೆಯಲ್ಲಿ ಮೆಸ್ಕಾಂ ಸಹ ಈ ಮನೆಗಳಿಗೆ ವಿದ್ಯುತ್ ಕೊಡಲು ಮುಂದಾಯಿತು. ಗ್ರಾ.ಪಂಚಾಯಿತಿ ಸಹ ಈ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಬಹುದೆಂದು ನಿರಾಕ್ಷೇಪಣೆ ಪತ್ರ ನೀಡಿತು.
ಪರಿಸ್ಥಿತಿ ನಿಯಂತ್ರಣ: ಈ ಬೆಳವಣಿಗೆ ಮೂಲ ಜಮೀನುದಾರರಿಂದ ಖರೀದಿಸಿದ ಗಂಗಾನಾಯ್ಕರನ್ನು ಕೆರಳಿಸಿತು. ಅವರು ನನ್ನ ಜಾಗಕ್ಕೆ ವಿದ್ಯುತ್ ಸಂಪರ್ಕ ಕೊಡಲು ಯಾರು ಹೇಳಿದ್ದು ಎಂದು ತಗಾದೆ ತೆಗೆದು ಆಕ್ಷೇಪ ಎತ್ತಿದರು. ಹೀಗಾಗಿ ಮೆಸ್ಕಾಂನವರು ಬರಿಗೈಯಲ್ಲಿ ವಾಪಸ್ ತೆರಳಬೇಕಾಯಿತು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಬೇಕಾಯಿತು.
ಇನ್ನೊಂದೆಡೆ ಗ್ರಾಮ ಪಂಚಾಯಿತಿ ಈ ಜಾಗ ತನಗೆ ಸೇರಿದ್ದೆಂದು ತಹಸೀಲ್ದಾರ್ ಕೊರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಸಿದೆ. ವಾಸ್ತವವಾಗಿ ಗ್ರಾಮ ಪಂಚಾಯಿತಿಯಿಂದ ಜಮೀನಿನ ಮೂಲ ಮಾಲೀಕರಿಗೆ ಈ ವರೆಗೆ ಯಾವುದೇ ಹಣ ಸಂದಾಯವಾಗಿಲ್ಲ. ಖಾತೆ ಕೂಡ ಅವರ ಹೆಸರಿನಲ್ಲೇ ಇತ್ತು.
10 ವರ್ಷಗಳ ಹಿಂದೆಯೇ ಗ್ರಾಮ ಪಂಚಾಯಿತಿ ಆ ಜಾಗವನ್ನು ಪಡೆದುಕೊಂಡಿದೆ. 25 ವರ್ಷಗಳಿಂದ ಇಲ್ಲಿ ವಾಸವಾಗಿರುವ ಮನೆಗಳಿಗೆ ಈಗಾಗಲೇ ಮೇಲ್ಛಾವಣಿ ಖಾತೆ ನೀಡಿದ್ದು, ಮೂಲ ಸೌಕರ್ಯ ವ್ಯವಸ್ಥೆ ಮಾಡಲು ಸರ್ಕಾರ ಸಿದ್ಧವಿದೆ. ಆದರೆ, ಗಂಗಾನಾಯ್ಕ್ ಎಂಬುವವರು ಇಲ್ಲಿನ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡದಂತೆ ನ್ಯಾಯಾಲಯದ ಮೊರೆ ಹೋಗಿರುವುದರಿಂದ ಯಾವುದೇ ಅಭಿವೃದ್ಧಿ ಕೆಲಸ ಮಾಡಲು ಸಮಸ್ಯೆ ಆಗಿದೆ ಎನ್ನುತ್ತಾರೆ ಗ್ರಾಮಪಂಚಾಯಿತಿ ಕಾರ್ಯದರ್ಶಿ ಮಂಜುನಾಥ್.
ನಮ್ಮ ಗಮನಕ್ಕೆ ಬಾರದಯೇ ರುಕ್ಮೀಣಿಯವರು ಜಾಗವನ್ನು ಪರಭಾರೆ ಮಾಡಿರುವುದು ಸರಿಯಲ್ಲ. ಇದನ್ನು ಗ್ರಾಪಂ ವಿರೋಧಿಸುತ್ತದೆ ಎಂದು ಗ್ರಾಮ ಪಂಚಾಯತಿ ಸದಸ್ಯ ಜಯರಾಮ ನಾಯ್ಕ ಹೇಳುತ್ತಾರೆ.
ಆದರೆ, ಸರ್ಕಾರದಿಂದ ಯಾವುದೇ ಹಣ ಪಡೆದುಕೊಂಡಿಲ್ಲ. ದಾಖಲೆಯೂ ಮೂಲ ಮಾಲೀಕರ ಹೆಸರಿನಲ್ಲೇ ಇದೆ. ಹೀಗಿರುವಾಗ ಜಾಗ ಖರೀದಿ ಮಾಡಿದ್ದರಲ್ಲಿ ನನ್ನ ತಪ್ಪೇನಿದೆ. ಹೀಗಾಗಿ ನನ್ನ ಜಾಗದಲ್ಲಿ ವಿದ್ಯುತ್ ಸಂಪರ್ಕ ನೀಡಲು ಇವರ್ಯಾರು, ನಾನು ನ್ಯಾಯಾಲಯದ ಮೊರೆ ಹೋಗುತ್ತಿದ್ದೇನೆ ಎಂಬುದು ಗಂಗಾನಾಯ್ಕರ ಅಭಿಪ್ರಾಯ. ಒಟ್ಟಾರೆ ಆಯನೂರಿನ ಸರ್ವೆ ನಂ.102 ವಿವಾದಿತ ಸ್ಥಳವಾಗಿ ಮಾರ್ಪಟ್ಟಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement