ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಈಶ್ವರಪ್ಪ ವಿರುದ್ಧ ಸ್ಪರ್ಧೆ ಇಲ್ಲ

Lingaraj Badiger
Updated On : 5 Apr 2013, 10:42 am

ಕ.ಪ್ರ ವಾರ್ತೆ, ಶಿವಮೊಗ್ಗ, ಏ.4
ಹಲವು ಪ್ರಗತಿಪರ ಸಂಘಟನೆಗಳ ರಾಜಕೀಯ ಪಕ್ಷವಾದ ಪ್ರಜಾ ಪ್ರಗತಿರಂಗದ ಪರವಾಗಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಆಶಯ ವ್ಯಕ್ತಪಡಿಸಿದ್ದ ರೈತ ಮುಖಂಡ ಎಚ್.ಆರ್. ಬಸವರಾಜಪ್ಪ ಮನಸು ಬದಲಿಸಿದ್ದಾರೆ. ಈ ನಡುವೆ ಮತ್ತೋರ್ವ ಭದ್ರಾ ಎಡನಾಲೆ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ವೈ.ಜಿ. ಮಲ್ಲಿಕಾರ್ಜುನ್ ಅವರು ಅವಕಾಶ ಸಿಕ್ಕರೆ ಕಣಕ್ಕಿಳಿಯುವುದಾಗಿ ಹೇಳಿದ್ದಾರೆ. ಆದರೆ ಪಕ್ಷದ ವರಿಷ್ಠರು ಇನ್ನೂ ಅಭ್ಯರ್ಥಿ ಘೋಷಿಸಿಲ್ಲ.
ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಕನಿಷ್ಠ ಮೂರು ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪ್ರಗತಿರಂಗ ಚಿಂತನೆ ನಡೆಸಿತ್ತು. ಈ ಹಿಂದೆ ಹಲವು ಚುನಾವಣೆಯಲ್ಲಿ ರೈತಸಂಘದ ಅಭ್ಯರ್ಥಿಗಳು ಕಡಿಮೆ ಅಂತರದಿಂದ ಸೋಲನುಭವಿಸಿದ್ದರು. ಸ್ವತಃ ಎಚ್.ಆರ್. ಬಸವರಾಜಪ್ಪ ಹೊಸನಗರ ಕ್ಷೇತ್ರದಿಂದ 2004ರಲ್ಲಿ ಮೂರನೇ ಸ್ಥಾನ ಪಡೆದಿದ್ದರು. ಹೊಳೆಹೊನ್ನೂರು ಕ್ಷೇತ್ರದಿಂದ ರೈತಸಂಘದ ಅಭ್ಯರ್ಥಿಗಳು ಉತ್ತಮ ಸಾಧನೆ ತೋರಿದ್ದರು. ಹಾಗಾಗಿ ಶಿವಮೊಗ್ಗ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ಎಚ್.ಆರ್. ಬಸವರಾಜಪ್ಪ ನಿರ್ಧರಿಸಿದ್ದರು.
ಶಿವಮೊಗ್ಗ ಕ್ಷೇತ್ರ ನಗರ ಪ್ರದೇಶದ ಕ್ಷೇತ್ರವಾಗಿರುವುದು, ತುರುಸಿನ ಸ್ಪರ್ಧೆಯ ಕಣವಾಗಿರುವುದು ಅವರ ಯೋಚನೆ ಬದಲಿಸಿದೆ. ಹಾಗಾಗಿ ಅವರೀಗ ಹಿಂದೆ ಸರಿದಿದ್ದಾರೆ. ಈ ನಡುವೆ ರೈತ ಮುಖಂಡ ವೈ.ಜಿ. ಮಲ್ಲಿಕಾರ್ಜುನ್, ಪಕ್ಷ ಅವಕಾಶ ಕೊಟ್ಟರೆ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ.
'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಅವರು, ರೈತರ ಶಕ್ತಿಯ ಪರಿಚಯವನ್ನು ಮತ್ತೆ ಸರ್ಕಾರಕ್ಕೆ ಮಾಡಿಕೊಡಬೇಕಾಗಿದೆ. ಅಲ್ಲದೇ ಪ್ರಗತಿಪರರು ಖಂಡಿತಾ ಬೆಂಬಲಿಸಲಿದ್ದಾರೆ. ಹಾಗಾಗಿ ಶಿವಮೊಗ್ಗ ಕ್ಷೇತ್ರದಲ್ಲಿ ಉತ್ತಮ ಅವಕಾಶವಿದೆ. ಹಾಗಾಗಿ ಸ್ಪರ್ಧಿಸಲು ಸಿದ್ಧ ಎಂದಿದ್ದಾರೆ.
ರೂರಲ್ ಮೇಲೆ ಕಣ್ಣು: ರೈತ ಚಳವಳಿ ತೀವ್ರವಾಗಿದ್ದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮೇಲೆ ಪ್ರಗತಿರಂಗದ ಕಣ್ಣು ನೆಟ್ಟಿದೆ. ಆಚ್ಚರಿಯ ಅಭ್ಯರ್ಥಿಯೊಬ್ಬರನ್ನು ಈ ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆ ಪಕ್ಷದಲ್ಲಿ ಗಂಭೀರ ಚಿಂತನೆ ನಡೆಯುತ್ತಿದೆ. ಈಗಾಗಲೇ ಅಭ್ಯರ್ಥಿ ಪಕ್ಷದ ಹಿರಿಯ ಮುಖಂಡರ ಜತೆ ನಿಕಟ ಸಂಪರ್ಕದಲ್ಲಿದ್ದಾರೆ.
ಭದ್ರಾ ನದಿಯ ಅಚ್ಚುಕಟ್ಟು ಪ್ರದೇಶ ವ್ಯಾಪಕವಾಗಿರುವ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಇವತ್ತಿಗೂ ರೈತ ಚಳವಳಿ ಕಾವು ಉಳಿಸಿಕೊಂಡಿದೆ. ರೈತ ಚಳವಳಿಯ ಇತಿಹಾಸದಲ್ಲಿಯೂ ಹೊಳೆಹೊನ್ನೂರು ಸುತ್ತಮುತ್ತಲಿನ ಪ್ರದೇಶ ಮಹತ್ವದ ಸ್ಥಾನ ಪಡೆದಿದೆ. ಹಾಗಾಗಿ ಪ್ರಜಾ ಪ್ರಗತಿರಂಗ ಶಿವಮೊಗ್ಗ ಕ್ಷೇತ್ರಕ್ಕಿಂತ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮೇಲೆ ಹೆಚ್ಚು ಗಮನ ಹರಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement