ಬಿಎಸ್ವೈ ಸೋಲು ಖಚಿತ: ಮಧು
ಕ.ಪ್ರ.ವಾರ್ತೆ, ಶಿರಾಳಕೊಪ್ಪ, ಏ.4
ಶಿಕಾರಿಪುರ ತಾಲ್ಲೂಕಿನಲ್ಲಿ ಜನತೆ ನೋವು ಉಂಡು ಬದಲಾವಣೆ ಬಯಸಿದ್ದಾರೆ. ಶಿಕಾರಿಪುರ ತಾಲ್ಲೂಕಿನ ಜನತೆ ಆಡಂಬರ ವಿಲ್ಲದೇ ಒಳಹೊಡೆತ ಚೆನ್ನಾಗಿ ಹೊಡೆಯುವ ಕಲೆಯನ್ನು ಬಲ್ಲವರಾಗಿದ್ದು, ಯಡಿಯೂರಪ್ಪನವರನ್ನು ಬರಲಿರುವ ಚುನಾವಣೆಯಲ್ಲಿ ಸೋಲಿಸಲಿದ್ದಾರೆ ಎಂಬ ವಿಶ್ವಾಸವಿರುವುದಾಗಿ ಯುವ ಜೆಡಿಎಸ್ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.
ಪಟ್ಟಣದಲ್ಲಿ ಶಿರಾಳಕೊಪ್ಪ ಭಾಗದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸೋಲಿಲ್ಲದ ಸರದಾರ ಎಂದು ಹೆಸರು ಪಡೆದಿದ್ದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರನ್ನು ಶಿಕಾರಿಪುರ ತಾಲ್ಲೂಕಿನಲ್ಲಿ ಯಾಕೆ ಸೋಲಿಸಿದರಿ ಎಂದು ಈವರೆಗೆ ನನಗೆ ತಿಳಿದಿಲ್ಲ. ಹಾಗೆಯೇ ಬಂಗಾರಪ್ಪನವರಿಗೂ ಸೋಲಿನ ಬಗ್ಗೆ ನೋವಿರಲಿಲ್ಲ. ಆದರೆ ಶಿಕಾರಿಪುರ ತಾಲ್ಲೂಕಿನ ನೊಂದ ಜನರಿಗೆ ಸ್ಪಂದಿಸಬೇಕು ಎಂಬ ಆಸೆ ಅವರದಾಗಿತ್ತು ಎಂದರು.
ಜೆಡಿಎಸ್ ಬೆಂಬಲಿಸಿ: ರಾಜ್ಯದಲ್ಲಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಅಧಿಕಾರಕ್ಕೆ ಬರಲಿದ್ದು, ಆ ಸರ್ಕಾರದಲ್ಲಿ ಶಿಕಾರಿಪುರದಿಂದ ಇಲ್ಲಿಯ ಮತದಾರರು ಚುನಾಯಿಸಿ ಕಳಿಸುವ ಜೆಡಿಎಸ್ ಅಭ್ಯರ್ಥಿ ಬಳಿಗಾರ ಇಲ್ಲಿಯ ಜನತೆಯ ಸೇವೆ ಮಾಡಲಿದ್ದಾರೆ. ಆದ್ದರಿಂದ ಈ ಬಾರಿ ಜೆಡಿಎಸ್ ಅನ್ನು ಗೆಲ್ಲಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ಬಳಿಗಾರ ಮಾತನಾಡಿ, ಚುನಾವಣೆಯಲ್ಲಿ ತಮ್ಮನ್ನು ಗೆಲ್ಲಿಸಿ ಸೇವೆಗೆ ಅವಕಾಶ ಮಾಡಿಕೊಡಿ. ಒಂದು ವೇಳೆ ನಾನು ನಿಮ್ಮ ಸೇವೆ ಮಾಡದಿದ್ದರೆ ಮುಂದಿನಬಾರಿ ಸೋಲಿಸಿ. ಆದರೆ ಯಡಿಯೂರಪ್ಪನವರನ್ನು ಗೆಲ್ಲಿಸಿದರೆ ಮುಂದಿನ 40 ವರ್ಷ ತಾಲ್ಲೂಕಿನ ಜನತೆ ಜೀತದಾಳಾಗಿ ಇರ ಬೇಕಾಗುತ್ತದೆ ಎಂದರು.
ಜೆಡಿಎಸ್ ರಾಷ್ಟ್ರೀಯ ಸಮಿತಿ ಸದಸ್ಯ ಹಾಗು ಅಲ್ಪಸಂಖ್ಯಾತ ಯುವಜೆಡಿಎಸ್ ಅಧ್ಯಕ್ಷ ತನ್ವೀರ್ ಅಹಮದ್, ತಾಲ್ಲೂಕ ಅಧ್ಯಕ್ಷ ನಾಗನಗೌಡ, ಮುಖಂಡ ನಾಗರಾಜ್ ಗೌಡ, ಹೊಸದಾಗಿ ಸೇರ್ಪಡೆ ಗೊಂಡ ಮಕಬುಲ್ ಸಾಬ್ ಹಾಗು ಇತರರು ಮಾತನಾಡಿದರು.
ನೀತಿ ಸಂಹಿತೆ ಉಲ್ಲಂಘನೆ
ಶಿರಾಳಕೊಪ್ಪ ಪಟ್ಟಣದಲ್ಲಿ ಗುರುವಾರ ನಡೆದ ಜೆಡಿಎಸ್ ಸಮಾವೇಶದಲ್ಲಿ ಒಂದು ಬ್ಯಾನರ್ ಹಾಗು ಕಾರ್ಯಕ್ರಮ ನಡೆಸಲು ವೇದಿಕೆ ಅಳವಡಿಕೊಳ್ಳಲು ಪಟ್ಟಣ ಪಂಚಾಯ್ತಿಗೆ ಅನುಮತಿ ಕೋರಿತ್ತು.
ಆದರೆ ಯಾವದೇ ಪರವಾನಿಗೆ ಇಲ್ಲದ ಸ್ಥಳದಲ್ಲಿ ಜೆಡಿಎಸ್ ಅಭ್ಯರ್ಥಿ ಬಳಿಗಾರ ಭಾವಚಿತ್ರ ಇರುವಂತಹ ಬ್ಯಾನರ್ ಹಾಗು ಪಕ್ಷದ ನಾಯಕರು ಇರುವಂತಹ ದೊಡ್ಡದಾದ ಬ್ಯಾನರ್ ಅಳವಡಿಸಿದ ಕಾರಣ ಅಪರಾಧದ ಅನ್ವಯ ಪಂಚನಾಮೆ ಮಾಡಿ ಸಾಮಗ್ರಿಗಳನ್ನು ವಶಪಡಿಸಿಕೊಂಡು, ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿ ತಂಡ ದೂರು ದಾಖಲಿಸಿದೆ.