ಮಲವಗೊಪ್ಪದಲ್ಲಿ ಉರುಸ್
ಶಿವಮೊಗ್ಗ: ಮಲವಗೊಪ್ಪದ ಹಜ್ರತ್ ಸೈಯದ್ ಅಹ್ಮದ್ ಷಾ ಖಾದ್ರಿ, ಖಾದ್ರಿಯಾ ಮಸ್ಜಿದ್ ಕಮಿಟಿ ಏ.13 ಮತ್ತು 14ರಂದು ಗಂಧದ ಉತ್ಸವ ಮತ್ತು ಉರುಸ್ ಕಾರ್ಯಕ್ರಮ ಹಮ್ಮಿಕೊಂಡಿದೆ. ಸಮಿತಿ ಅಧ್ಯಕ್ಷ ಮುನಾವರ್ ಪಾಷಾ ಅಧ್ಯಕ್ಷತೆಯಲ್ಲಿ ಗಂಧ- ಉತ್ಸವ ಮೆರವಣಿಗೆ ನಡೆಯುವುದು. 14ರಂದು ಮಧ್ಯಾಹ್ನ 12 ಗಂಟೆಗೆ ಮೆರವಣಿಗೆ ಆರಂಭವಾಗಲಿದೆ. ಕ್ಲರ್ಕ್ ಪೇಟೆ, ಆದಾಜ್ ನಗರ, ಕೆ.ಆರ್.ಪುರಂ, ಎ.ಎ.ಸರ್ಕಲ್, ಎಂಕೆಕೆ ರಸ್ತೆ, ನಾಗಪ್ಪನ ಕೇರಿ, ಲಷ್ಕರ್ ಮೊಹಲ್ಲಾ, ಹೊಳೆ ಬಸ್‌ಸ್ಟಾಪ್, ವಿದ್ಯಾನಗರ, ಹರಿಗೆ ಮಾರ್ಗವಾಗಿ ಮಲವಗೊಪ್ಪದಲ್ಲಿರುವ ದರ್ಗಾ ತಲುಪಲಿದೆ. ರಾತ್ರಿ 9ರಿಂದ ತಸ್ಲೀಮ್ ಆರಿಫ್ ಹಾಗೂ ಹಬೀಬ್ ಅಜ್ಮೀರಿಯವರಿಂದ ಖವಾಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಮಿಟಿ ತಿಳಿಸಿದೆ.
ವಾರ್ಷಿಕೋತ್ಸವ
ಶಿವಮೊಗ್ಗ: ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಏ.5ರಂದು ಬೆಳಿಗ್ಗೆ 10 ಗಂಟೆಗೆ ಕ್ರೀಡಾ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯುವುದು. ಫುಟ್‌ಬಾಲ್ ತರಬೇತುದಾರ ಮಹಮ್ಮದ್ ದಾದಾಪೀರ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುತ್ತಿದೆ. ಎನ್‌ಇಎಸ್ ಕಾರ್ಯದರ್ಶಿ ಎಸ್.ವಿ.ತಿಮ್ಮಯ್ಯ ಸಮಾರೋಪ ಭಾಷಣ ಮಾಡಲಿದ್ದಾರೆ. ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎ. ನಾಗರಾಜ್ ಅಧ್ಯಕ್ಷತೆ ವಹಿಸುವರು.
ಉಪನಯನ
ಶಿವಮೊಗ್ಗ: ಬ್ರಾಹ್ಮಣ ಸೇವಾ ಸಂಘವು ಮೇ 1ರಂದು ಸಾಮೂಹಿಕ ಉಪನಯನ ಕಾರ್ಯಕ್ರಮ ಹಮ್ಮಿಕೊಂಡಿದೆ. ತ್ರಿ- ಮತಸ್ಥ ಬ್ರಾಹ್ಮಣ ವಟುಗಳಿಗೆ ಉಪನಯನ ಆಯೋಜಿಸಲಾಗಿದೆ. ಇದರ ಸದುಪಯೋಗಪಡೆದುಕೊಳ್ಳುವಂತೆ ಸಂಘದ ಕಾರ್ಯದರ್ಶಿ ಎಚ್.ಡಿ. ಚಂದ್ರಶೇಖರ್ ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಶ್ರೀ ಗಾಯತ್ರಿ ದೇವಸ್ಥಾನದ ಅರ್ಚಕರನ್ನು ಸಂಪರ್ಕಿಸಲು ಕೋರಿದೆ.
ಪುಸ್ತಕ ಬಿಡುಗಡೆ
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಸಂಶೋಧಕ ಫ್ರಾನ್ಸಿಸ್ ಡಿಸೋಜ ಅವರು ಬರೆದಿರುವ ಸ್ಪೀಕಿಂಗ್ ಇಂಗ್ಲಿಷ್ ಎಂಬ ಪುಸ್ತಕ ಬಿಡುಗಡೆಗೊಂಡಿದೆ. ನಗರದ ಎಡ್ಯುರೈಟ್ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಅತಿಥಿ ಉಪನ್ಯಾಸಕ ಪ್ರೊ. ಡೇವಿಡ್ ಬಾಂಡ್ ಪುಸ್ತಕ ಬಿಡುಗಡೆಗೊಳಿಸಿದರು. ಇಂಗ್ಲಿಷ್ ಕಲಿಯಲು ಪುಸ್ತಕಗಳನ್ನು ಓದುವುದು ಮತ್ತು ಶಿಕ್ಷಕರ ನೆರವಿನಿಂದ ಇಂಗ್ಲಿಷ್ ಕಲಿಯುವುದು ಸೂಕ್ತ ಎಂದರು. ಕ್ಯಾನನ್ ಲಾ, ಫಾ. ಆಲ್ವಿನ್ ಸೆರಾಮೊ, ಪ್ರೊ. ರಾಮಪ್ರಸಾದ, ಡಾ. ಶಂಕರನಾರಾಯಣ್, ರೇಷ್ಮಾ ಡಿಸೋಜ, ಪಲ್ಲವಿ, ಕುಶಲ್, ದೀಕ್ಷಾ ಇದ್ದರು.