11ರಿಂದ 14ರವರೆಗೆ ದೇವರ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ
ಶಿವಮೊಗ್ಗ: ಕುಂಸಿ ಸಮೀಪದ ರೇವಚಿಕೊಪ್ಪದಲ್ಲಿ ಏ.11ರಿಂದ 14ರವರೆಗೆ ದುರ್ಗಾಪರಮೇಶ್ವರಿ, ಶಿವ, ಗಣಪತಿ, ನಾಗದೇವತೆ ಹಾಗೂ ಭೂತಪ್ಪ ದೇವರ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯುವುದು. ಏ.11ರಂದು ಯಾಗಶಾಲೆ ಪ್ರವೇಶ, ಕಳಶ ಸ್ಥಾಪನೆ, ಸಂಜೆ ವಾಸ್ತುಹೋಮ ನಡೆಯುವುದು. 12ರಂದು ಬೆಳಿಗ್ಗೆ ದುರ್ಗಾದೇವಿ ಹಾಗೂ ಹಾಗೂ ನಾಗದೇವತಾ ಪ್ರತಿಷ್ಠಾಪನಾ ಹೋಮ ನಡೆಯುವುದು. ಸಂಜೆ ಶೇಷ ಹೋಮ, ಅಷ್ಟಾವಧಾನ ಸೇವೆ, 13ರಂದು ಪ್ರತಿಷ್ಟಾಪನೆ ಹೋಮ, ದುರ್ಗಾದೇವಿ, ನಾಗದೇವತಾ ಪ್ರತಿಷ್ಟಾಪನೆ ನಡೆದರೆ, 14ರಂದು ಗಣಪತಿ ಮತ್ತು ಶಿವನ ಶೇಷಹೋಮ, ಕುಂಭಾಭಿಷೇಕ ನಡೆಯುವುದು. ಅಂದು ಸಂಜೆ 6.30ರಿಂದ ವಿವಿಧ ಮನೋರಂಜನಾ ಕಾರ್ಯಕ್ರಮ, ದುರ್ಗಾಪರಮೇಶ್ವರಿ ಯುವಕ ಸಂಘದಿಂದ ಕೋಲಾಟ, ಡೊಳ್ಳುಕುಣಿತ, ಪಾರ್ವತಮ್ಮ ಭಜನಾ ಮಂಡಳಿಯಿಂದ ಭಜನೆ ಕಾರ್ಯಕ್ರಮ ನಡೆಯಲಿದೆ.
ರಾತ್ರಿ 9.30ಕ್ಕೆ ಸಿದ್ದಾಪುರ ಬೇಡ್ಕಣಿಯ ಮಾರುತಿ ಪ್ರಸಾದಿತ ಯಕ್ಷಗಾನ ಮಂಡಳಿಯಿಂದ ಯಕ್ಷಲೋಕ ವಿಜಯ ಎಂಬ ಪೌರಾಣಿಕ ಯಕ್ಷಗಾನ ಬಯಲಾಟ ಪ್ರಸ್ತುತಗೊಳ್ಳಲಿದೆ. 14ರಂದು ಮಧ್ಯಾಹ್ನ 12 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದೆ. ಬಸವ ಮರುಳಸಿದ್ದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
ಪಂಡಿತ ಮಧುಸೂಧನ ಆಚಾರ್ಯ ಪ್ರವಚನ ನೀಡುವರು. ಸಿಂಗಧೂರು ಕ್ಷೇತ್ರದ ಧರ್ಮದರ್ಶಿ ರಾಮಪ್ಪ, ಸೂಡೂರು ಮಂಜುನಾಥ್, ಜಗದೀಶ್ ಅಲ್ಸೆ, ಗಾಯತ್ರಿ ರಾಮಚಂದ್ರಪ್ಪ, ರಾಮಾನಾಯ್ಕ, ನಾರಾಯಣ ಮತ್ತಿತರರು ಹಾಜರಿರುವರು.
ಪದಾಧಿಕಾರಿಗಳ ಆಯ್ಕೆ
ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದೆ. ಸಂಘಟನೆ ಜಿಲ್ಲಾ ಅಧ್ಯಕ್ಷ ಎನ್.ಪಿ. ಧರ್ಮರಾಜ್ ಆಯ್ಕೆ ಪ್ರಕ್ರಿಯೆ ನಡೆಸಿದ್ದಾರೆ. ಹಿರಿಯ ಉಪಾಧ್ಯಕ್ಷರಾಗಿ ನ್ಯಾ.ಟಿ.ಜಿ. ಗೋವಿಂದರಾಜ್, ಟಿ.ಎಚ್. ಹನುಮೇಗೌಡ, ಉಪಾಧ್ಯಕ್ಷರಾಗಿ ಕೆ.ಎಸ್.ಪ್ರಭಾಕರ್, ಟಿ.ಎಸ್. ಹೆಬ್ಬಾರ್, ಓ. ಜಯಣ್ಣ, ಸೂಹೈಲ್ ಅಹ್ಮದ್, ಬಿ. ನಾಗರಾಜ್, ಕಾರ್ಯದರ್ಶಿಯಾಗಿ ಡಿ.ಎ. ಕೃಷ್ಣಮೂರ್ತಿ, ಸಂಘಟನಾ ಕಾರ್ಯದರ್ಶಿಯಾಗಿ ಪಿ.ಜಿ. ವಿಜಯಕುಮಾರ್ ಅವರನ್ನು ನೇಮಿಸಲಾಗಿದೆ. ಖಜಾಂಚಿಯಾಗಿ ಎಂ. ಕರಿಬಸಯ್ಯ, ಸಹ ಕಾರ್ಯದರ್ಶಿಯಾಗಿ ಎಸ್.ಎ. ಗುರುರಾಜ್, ಜೆ. ಸೋಮಣ್ಣ, ಜಿ.ಎಂ. ಮಲ್ಲಿಕಾರ್ಜುನಪ್ಪ ಗೌಡ, ಸಾಯಿನಾಥ್, ಟಿ.ಇ. ಶಂಕರಪ್ಪ, ರವಿ, ರಾಜಶೇಖರ್ ಹಾಗೂ ಕೋ- ಆರ್ಡಿನೇಟರ್ಗಳಾಗಿ ಜಿ.ಎಲ್. ರಂಗನಾಥ್, ಚಂದ್ರಾನಾಯ್ಕ ಅವರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಿಸಲಾಗಿದೆ ಎಂದು ಧರ್ಮರಾಜ್ ತಿಳಿಸಿದ್ದಾರೆ.
ಸಂತಾಪ ಸಭೆ
ಶಿವಮೊಗ್ಗ: ಎಂ.ಜಿ. ರಂಗನಾಥ್ ನಿಧನಕ್ಕೆ ಕೋಟೆ ರಸ್ತೆಯ ಗುರು ಕರಿಬಸವೇಶ್ವರ ಸ್ವಾಮಿ ದೇವಸ್ಥಾನ ಟ್ರಸ್ಟ್ ಸಂತಾಪ ಸೂಚಿಸಿದೆ. ಮೃತರ ಆತ್ಮಕ್ಕೆ ಶಾಂತಿ ಕೋರುವ ಸಲುವಾಗಿ ಸಂತಾಪ ಸಭೆ ನಡೆಸಲಾಯಿತು. ಟ್ರಸ್ಟ್ ಅಧ್ಯಕ್ಷ ಎಚ್.ವಿ. ಮಹೇಶ್ವರಪ್ಪ ಮತ್ತು ಕಾರ್ಯದರ್ಶಿ ಎಲ್. ನಾಗಮಂಜು ಸಮಕ್ಷಮದಲ್ಲಿ ಟ್ರಸ್ಟ್ ಸದಸ್ಯರು ಮೌನಾಚರಣೆ ನಡೆಸಿದರು. ಎಂ.ಜಿ. ರಂಗನಾಥ ಶೆಟ್ಟಿ ನಿಧನಕ್ಕೆ ಜಿಲ್ಲಾ ಪಟಾಕಿ ವರ್ತಕರ ಸಂಘ ಸಂತಾಪ ಸೂಚಿಸಿದೆ. ಸಂಘದ ಸದಸ್ಯರು ಮೌನಾಚರಣೆ ಮೂಲಕ ಸಂತಾಪ ಸೂಚಿಸಿ, ಮೃತರ ಆತ್ಮಕ್ಕೆ ಶಾಂತಿ ಕೋರಿದರು.
ತರಬೇತಿ ಶಿಬಿರ
ಶಿವಮೊಗ್ಗ: 2012-13ನೇ ಸಾಲಿನ ಗಿರಿಜನ ಉಪಯೋಜನೆಯಡಿ ಗಿರಿಜನ ಪಂಗಡದ ಯುವಕ, ಯುವತಿ ಮತ್ತು ಯುವ ಮುಂದಾಳುಗಳಿಗೆ ಯುವ ಚೇತನ, ಯುವ ಪ್ರೇರಣಾ ತರಬೇತಿಯನ್ನು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯು ಹಮ್ಮಿಕೊಂಡಿದೆ. ತರಬೇತಿಯು ಏಪ್ರಿಲ್ 17ರಿಂದ 26ರ ವರೆಗೆ 10 ದಿನಗಳ ಕಾಲ ಶಿವಮೊಗ್ಗ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಯುವ ಚೇತನ, ಯುವ ಪ್ರೇರಣಾ ತರಬೇತಿ ಶಿಬಿರವನ್ನು ಪರಿಶಿಷ್ಟ ಪಂಗಡದ 15ರಿಂದ 35 ವರ್ಷ ಒಳಪಟ್ಟ ಯುವಕ, ಯುವತಿಯರಿಗಾಗಿ ನಡೆಸಲಾಗುವುದು. ತರಬೇತಿ ಶಿಬಿರದಲ್ಲಿ ಭಾಗವಹಿಸುವ ಯುವಕ, ಯುವತಿಯರಿಗೆ ಸಮಾಜದಲ್ಲಿ ಉತ್ತಮ ನಾಗರೀಕರನ್ನಾಗಿ ಮಾಡಲು ಹಾಗೂ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುವ ದೃಷ್ಟಿಯಿಂದ ವ್ಯಕ್ತಿತ್ವ ವಿಕಸನ, ಆತ್ಮ ಸ್ಥೈರ್ಯ, ಸಾಮಾಜಿಕ ಬದ್ಧತೆ, ವಿಷಯ ಪ್ರಸಾರ, ಭಾಷಣ ಕೌಶಲ್ಯ, ಮುಂತಾದ ವೃತ್ತಿಗೆ ಸಂಬಂಧಿಸಿದ ವಿವಿಧ ಇಲಾಖೆಗಳಿಂದ ಸಿಗುವ ಸೌಲಭ್ಯಗಳ ಮಾಹಿತಿ ನೀಡಿ ಪರಿಣಾಮಕಾರಿ ಯುವಕ, ಯುವತಿಯರನ್ನಾಗಿಸುವ ದೃಷ್ಟಿಯಿಂದ ಶಿಬಿರವನ್ನು ಹಮ್ಮಿಕೊಂಡಿದೆ. ತರಬೇತಿ ಪಡೆಯಲಿಚ್ಚಿಸುವ ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರದೊಂದಿಗೆ ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಶಿವಮೊಗ್ಗ ಇವರಲ್ಲಿ ಏಪ್ರಿಲ್ 17ರಂದು ಬೆಳಿಗ್ಗೆ 10 ಗಂಟೆಯೊಳಗಾಗಿ ವರದಿ ಮಾಡಿಕೊಳ್ಳುವಂತೆ ತಿಳಿಸಿದೆ.
ರಂಗ ತರಬೇತಿ ಶಿಬಿರ
ಶಿವಮೊಗ್ಗ: ಕಲಾರೋಹಣ ಸಂಸ್ಥೆಯು ಏ.15ರಿಂದ 29ರ ವರೆಗೆ ರಂಗ ತರಬೇತಿ ಶಿಬಿರವನ್ನು ನಗರದ ಕೋಟೆ ರಸ್ತೆಯಲ್ಲಿರುವ ಕೋಟೆ ಬಯಲು ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಶಿಬಿರದಲ್ಲಿ ರಂಗಭೂಮಿಗೆ ಸಂಬಂಧಿಸಿದ ವಿಚಾರಗಳನ್ನು ಮತ್ತು ಬಿ.ವಿ. ಕಾರಂತರ ಅಳಿಲು ರಾಮಾಯಣ ನಾಟಕವನ್ನು ಕುವೆಂಪು ರಂಗಮಂದಿರದಲ್ಲಿ ಪ್ರದರ್ಶಿಸಲು ಮಕ್ಕಳಿಗೆ ಅವಕಾಶ ಕಲ್ಪಿಸಲಾಗುವುದು. ಈ ಶಿಬಿರದಲ್ಲಿ ಸುಮಾರು 8 ವರ್ಷದಿಂದ 14 ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದು. ಮೊದಲು ಬಂದ 30 ಮಕ್ಕಳಿಗೆ ಮಾತ್ರ ಶಿಬಿರದಲ್ಲಿ ಅವಕಾಶವಿದ್ದು, ಆಸಕ್ತರು ತಮ್ಮ ಮಕ್ಕಳ ಹೆಸರನ್ನು ಬಿ.ಆರ್. ರೇಣುಕಪ್ಪ, ರಂಗ ನಿರ್ದೇಶಕರು ಇವರ ಬಳಿ ನೊಂದಾಯಿಸಿಕೊಳ್ಳಲು ಕೋರಲಾಗಿದೆ. ಮಾಹಿತಿಗಾಗಿ ಮೊ- 98459 07703 ಸಂಪರ್ಕಿಸಬಹುದು.
ವಿದ್ಯುತ್ ವ್ಯತ್ಯಯ
ಶಿವಮೊಗ್ಗ: ಏಪ್ರಿಲ್ 6 ರಿಂದ 8 ರವರೆಗೆ ಘಟಕ-4, ನಗರ ಉಪ ವಿಭಾಗ-2ರ ವ್ಯಾಪ್ತಿಯಲ್ಲಿ ಹೊಸ ಸಂಪರ್ಕ ಅಳವಡಿಸಲು ಮತ್ತು ಹಳೆಯ ವಿದ್ಯುತ್ ಕಂಬಗಳನ್ನು ಬದಲಾಯಿಸುವುದರಿಂದ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ನಗರದ ವಿವಿಧ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ. ಕೋಟೆ ರಸ್ತೆ, ಕೋಟೆ ಪೊಲೀಸ್ ಸ್ಟೇಷನ್ ಎದುರು, ಎಲ್ಐಸಿ ಆಫೀಸ್, ಎಸ್ಪಿಎಂ ರಸ್ತೆ, ಓ.ಟಿ.ರಸ್ತೆ, ಮಾರಿಗದ್ದಿಗೆ ಸುತ್ತಮುತ್ತ, ಲಷ್ಕರ್ ಮೊಹಲ್ಲಾ, ಶಿವಾಜಿ ಪಾರ್ಕ್, ಕೊಲ್ಲೂರಯ್ಯ ರಸ್ತೆ, ತುಳಜಾ ಭವಾನಿ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್ ಹತ್ತಿರ, ತಿರುಪಳಯ್ಯನ ಬೀದಿ, ಅಶೋಕ ರಸ್ತೆ, ನಾಗಪ್ಪನ ಕೇರಿ, ಗಂಗಾ ಪರಮೇಶ್ವರಿ ರಸ್ತೆ, ಆನವೇರಪ್ಪನ ಕೇರಿ, ಧರ್ಮರಾಯನ ಕೇರಿ, ಆಲೇಮಾನ್ ಕೇರಿ, ಕೃಷ್ಣ ಕೆಫೆ ಹಿಂಭಾಗ, ಸುತ್ತಮುತ್ತಲ ಪ್ರದೇಶದಲ್ಲಿ ವ್ಯತ್ಯಯ ಉಂಟಾಗಲಿದೆ.