ಕುಮಾರಸ್ವಾಮಿ ಸಿಎಂ ಆಗಲಿ ಎಂಬ ಮಾತು ಮತವಾಗಲಿ
ಕ.ಪ್ರ ವಾರ್ತೆ, ಶಿರಾಳಕೊಪ್ಪ, ಏ.5
ರಾಜ್ಯದ ಜನರ ಬಾಯಲ್ಲಿರುವ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕು ಎಂಬ ಮಾತು ಈಗ ಮತವಾಗಿ ಪರಿವರ್ತನೆ ಆಗಬೇಕಿದೆ ಎಂದು ಜೆಡಿಎಸ್ ಅಲ್ಪಸಂಖ್ಯಾತ ವಿಭಾಗದ ರಾಜ್ಯಾಧ್ಯಕ್ಷ ಹಾಗೂ ರಾಷ್ಟ್ರೀಯ ಸದಸ್ಯ ತನ್ವೀರ್ ಅಹಮದ್ ಹೇಳಿದರು.
ಶಿರಾಳಕೊಪ್ಪ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಎಲ್ಲಾ ವರ್ಗ, ಜಾತಿಯವರನ್ನು ಸರಿಸಮಾನವಾಗಿ ತೆಗೆದುಕೊಂಡು ಹೋಗುವಂತಹ ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕು ಎಂದರು.
ಕಳೆದ 40 ವರ್ಷಗಳಿಂದ ಶಿಕಾರಿಪುರ ತಾಲೂಕಿನ ಜನತೆಯನ್ನು ದಿಕ್ಕು ತಪ್ಪಿಸುತ್ತಿರುವ ಯಡಿಯೂರಪ್ಪ ಪ್ರತೀ ಚುನಾವಣೆಯಲ್ಲಿ ಒಂದೊಂದು ಹೊಸ ವಿಷಯವನ್ನು ಮತದಾರರ ಮುಂದೆ ಇಟ್ಟು ದಾರಿ ತಪ್ಪಿಸುತ್ತಿದ್ದಾರೆ. ನ್ಯಾಯಯುತವಾಗಿ ಯಾವ ಚುನಾವಣೆಯಲ್ಲೂ ಅವರು ಗೆದ್ದಿಲ್ಲ. ಈ ಹಿಂದೆ 20-20 ಅಧಿಕಾರ ನಡೆಸಬೇಕು ಎಂದು ಬಿಜೆಪಿಯೊಂದಿಗೆ ಅಧಿಕಾರ ಮಾಡಿದಾಗ ಹಲವಾರು ಯೋಜನೆಗಳನ್ನು ಜಾರಿ ಮಾಡಲಾಗಲಿಲ್ಲ. ಈಗ ಪುನಹ ಕುಮಾರಸ್ವಾಮಿ ಮುಖ್ಯಮಂತ್ರಿ ಆದರೆ ರಾಜ್ಯದ ಜನತೆಯ ಋಣ ತೀರಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಮಕಬುಲ್‌ಸಾಬ್, ಸುಲೇಮಾನ್ ಸಾಬ್, ಕೆಜೆಪಿಯ ಕಾರ್ಪೆಂಟರ್ ಬಾಷಾಸಾಬ್ ಸೇರಿದಂತೆ ಬೇರೆಪಕ್ಷ ತೊರೆದು ಬಂದ ಹಲವಾರು ಕಾರ್ಯಕರ್ತರನ್ನು ಜೆಡಿಎಸ್‌ಗೆ ಹಾರಹಾಕಿ ಬರಮಾಡಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಅಭ್ಯರ್ಥಿ ಬಳಿಗಾರ್, ಜೆಡಿಎಸ್ ತಾ. ಅಧ್ಯಕ್ಷ ನಾಗನಗೌಡ, ನಾಗರಾಜ್ ಗೌಡ ಇತರರು ಇದ್ದರು.