7 ಗಂಟೆಯಲ್ಲಿ 4 ಎಕರೆ ರೆಂಟೆ ಹೊಡೆದ ಯುವಕ!
ಕ.ಪ್ರ.ವಾರ್ತೆ ಬಾಗಲಕೋಟೆ ಏ.6
ಬಾದಾಮಿ ತಾಲೂಕು ಹಂಗರಗಿ ಗ್ರಾಮದಲ್ಲಿ ಯುವಕನೊಬ್ಬ ಕೇವಲ ಏಳು ಗಂಟೆಯಲ್ಲಿ ನಾಲ್ಕು ಎಕರೆ ರೆಂಟೆ (ಮಡಕಿ) ಹೊಡೆದು (ಸಾಗುವಳಿ ಮಾಡಿ) ಸಾಧನೆ ಮೆರೆದಿದ್ದಾನೆ.
ಕಟಗೇರಿಯ ಬಾಲಪ್ಪ ಅಪ್ಪಣ್ಣವರ (ನೀಲಪ್ಪ ಅಪ್ಪಣ್ಣವರ ಮೊಮ್ಮಗ) ಈ ಸಾಧನೆ ಮಾಡಿದ ಯುವಕ. ಹಂಗರಗಿಯ ಯಲ್ಲಪ್ಪ ತಮ್ಮಣ್ಣವರ ಎಂಬವರ ಹೊಲ ಈತನ ಸಾಧನೆಗೆ ವೇದಿಕೆಯಾಗಿದೆ. 25ರ ಹರೆಯದ ಈ ಯುವಕ ತನ್ನೆರಡು ಎತ್ತುಗಳೊಂದಿಗೆ ಉರಿ ಬಿಸಿಲು ಲೆಕ್ಕಿಸದೇ ಉಳುಮೆ ಮಾಡಿ ನಾಲ್ಕು ಎಕರೆ ರೆಂಟೆ ಹೊಡೆಯುವ ಮೂಲಕ ಬೇರೆಯವರಿಗೆ ಮಾದರಿ ಎನಿಸಿದ್ದಾನೆ.
ಈ ಹೊಲ ತುಸು ಖರಾಬು. ಕಳೆದೆರಡು ವರ್ಷಗಳಿಂದ ಆವರಿಸಿರುವ ಬರಗಾಲದಿಂದ ನೆಲ ಇನ್ನಷ್ಟು ಗಟ್ಟಿಯಾಗಿತ್ತು. ನೇಗಿಲು ಹೊಡೆಯಲೆಂದು ಈ ಹೊಲಕ್ಕೆ ಬಂದಿದ್ದ ಟ್ರ್ಯಾಕ್ಟರ್ ವಾಪಸ್ ಹೋಗಿತ್ತು. ಇದನ್ನೇ ಸವಾಲಾಗಿ ಸ್ವೀಕರಿಸಿದ ಬಾಲಪ್ಪ ಗುರುವಾರ ಬೆಳಗ್ಗೆಯಿಂದ ಏಳು ತಾಸುಗಳಲ್ಲಿ ರೆಂಟೆ ಹೊಡಿದು ಮುಗಿಸಿದ್ದಾನೆ.
ಈ ಯುವಕನ ಸಾಧನೆ ಮೆಚ್ಚಿದ ಹಂಗರಗಿ ಗ್ರಾಮಸ್ಥರು ಕೊರಳಲ್ಲಿ ನೋಟಿನ ಸರ, ಹೂಮಾಲೆ ಹಾಕಿ ಎತ್ತುಗಳ ಸಮೇತ ಗ್ರಾಮದಲ್ಲಿ ಮೆರವಣಿಗೆ ಮಾಡಿ ಹೆಮ್ಮೆಯಿಂದ ಬೆನ್ನು ತಟ್ಟಿದರು.