ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅರಣ್ಯ ಭೂ ಒತ್ತುವರಿ ತೆರವು: ಬೈಕ್, ಬುಲ್ಡೋಜರ್‌ಗೆ ಬೆಂಕಿ ಇಟ್ಟ ರೈತರು

Lingaraj Badiger
Updated On : 8 Apr 2013, 11:39 am

ಕನ್ನಡಪ್ರಭ ವಾರ್ತೆ, ಶಿವಮೊಗ್ಗ, ಏ.7
ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ವಿರುದ್ಧ ಸಿಡಿದೆದ್ದ ಸಾಗುವಳಿದಾರರು ಬುಲ್ಡೋಜರ್ ಹಾಗೂ ಒಂದು ಬೈಕ್‌ಗೆ ಬೆಂಕಿ ಇಟ್ಟ ಘಟನೆ ಭಾನುವಾರ ಭದ್ರಾವತಿ ತಾಲೂಕಿನ ಬಂಡಿಗುಡ್ಡ ಅರಣ್ಯದಲ್ಲಿರುವ ಬದನೆಹಾಳ್ (ಬೆಳ್ಳಿಗೆರೆ) ಗ್ರಾಮದಲ್ಲಿ ನಡೆದಿದೆ. ಅಲ್ಲದೇ ಘಟನೆಗೆ ನಾವೇ ಕಾರಣ ಎಂದು 50ಕ್ಕೂ ಹೆಚ್ಚು ರೈತರು ಜೈಲ್‌ಭರೋ ಚಳವಳಿ ನಡೆಸಿದ್ದಾರೆ.
ಭದ್ರಾವತಿ ನಗರದಿಂದ 18 ಕಿ.ಮೀ. ದೂರದಲ್ಲಿರುವ ಬದನೆಹಾಳ್ (ಬೆಳ್ಳಿಗೆರೆ) ಸರ್ವೆ ನಂಬರ್ 35ರಲ್ಲಿ ಸುಮಾರು 832 ಎಕರೆ ಅರಣ್ಯ ಭೂಮಿ ಇದೆ. ಅದರಲ್ಲಿ 220 ಎಕರೆಯನ್ನು 2004ರಲ್ಲಿ ಹುಲ್ಲುಬನಿ ಎಂದು ಘೋಷಿಸಲಾಗಿತ್ತು. ಅಲ್ಲದೇ ಸಾಗುವಳಿ ಚೀಟಿಯನ್ನು ನೀಡಲು ಸ್ಥಳೀಯ ಆಡಳಿತಕ್ಕೆ ಸರ್ಕಾರ ಸೂಚನೆ ನೀಡಿತ್ತು. ಆದರೆ, ಸಾಗುವಳಿ ಚೀಟಿ ಮಾತ್ರ ರೈತರ ಕೈ ಸೇರಿರಲಿಲ್ಲ. ಈ ನಡುವೆ ಅಲ್ಲೇ ಇರುವ ಸರ್ವೆ ನಂ.7ರಲ್ಲಿ ಸಾಗುವಳಿ ಮಾಡುತ್ತಿದ್ದ ಎಲ್ಲ ರೈತರಿಗೂ ಸಾಗುವಳಿ ಚೀಟಿ ನೀಡಲಾಗಿದೆ. ಅರಣ್ಯ ಇಲಾಖೆಯಿಂದ ಒತ್ತುವರಿ ತೆರವು ಕಾರ್ಯಾಚರಣೆಯ ಮುನ್ಸೂಚನೆ ಅರಿತ ಸ್ಥಳೀಯ ರೈತರು ಹಲವಾರು ಬಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಶನಿವಾರ ಸಹ ತಹಸೀಲ್ದಾರ್ ಕಚೇರಿ ಎದುರು ಧರಣಿ ನಡೆಸಿದ್ದರು.
ಅತ್ತ ರೈತರು ನ್ಯಾಯಕ್ಕಾಗಿ ಅಂಗಲಾಚಿದರೆ ಇತ್ತ ಅರಣ್ಯ ಇಲಾಖೆ ನೇತೃತ್ವದಲ್ಲಿ ಕೃಷಿ ಭೂಮಿಯ ಮೇಲೆ ಬುಲ್ಡೋಜರ್ ಹತ್ತಿಸಿ ತಮ್ಮ ವಶಕ್ಕೆ ಪಡೆದುಕೊಳ್ಳುವ ಕಾರ್ಯ ನಡೆದಿತ್ತು. ಭಾನುವಾರವೂ ಈ ಕಾರ್ಯ ಮುಂದುವರಿದಿದ್ದರಿಂದ ಸಿಡಿದೆದ್ದ ರೈತರು, ಸರ್ವೆ ನಂ.35ರ ಜತೆಯಲ್ಲಿ ಸರ್ವೆ ನಂ.7ರಲ್ಲಿ ಸಾಗುವಳಿ ಚೀಟಿ ಇದ್ದರೂ ಇಲ್ಲಿನ ಜಮೀನುಗಳ ಒತ್ತುವರಿ ತೆರವು ಮಾಡಲು ಬಂದ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಚಾಲಕ ಪರಾರಿ: ಬೆಳಗ್ಗೆ 10 ಗಂಟೆ ಸುಮಾರಿಗೆ ಮನೆಯನ್ನೂ ತೆರವು ಮಾಡಬೇಕಾಗುತ್ತದೆ ಎಂಬ ಅರಣ್ಯ ಇಲಾಖೆಯ ಗದರಿಕೆಗೆ ಮತ್ತಷ್ಟು ಕೆರಳಿದ ರೈತರು, ಕೃಷಿ ಭೂಮಿಯನ್ನು ನಾಶ ಮಾಡಿ ತಮ್ಮ ವಶ ಮಾಡಿಕೊಳ್ಳುವುದಕ್ಕಾಗಿ ತಂದಿದ್ದ ಬುಲ್ಡೋಜರ್ ಹಾಗೂ ಬೈಕ್‌ಗೆ ರೈತರು ಬೆಂಕಿ ಇಟ್ಟಿದ್ದಾರೆ. ಬುಲ್ಡೋಜರ್‌ನಲ್ಲಿದ್ದ ಚಾಲಕ ರಾಜು ಪರಾರಿಯಾಗಿದ್ದಾನೆ. ಬುಲ್ಡೋಜರ್ ಎಂಜಿನ್ ಹಾಗೂ ಬೈಕ್ ಸಂಪೂರ್ಣ ಭಸ್ಮಗೊಂಡಿವೆ. ಜತೆಗೆ ಲಾರಿ ಹಾಗೂ ಜೆಸಿಬಿ, ಮತ್ತೊಂದು ಬೈಕ್‌ನ್ನು ಜಖಂಗೊಳಿಸಲಾಗಿದೆ. ಸ್ಥಳಕ್ಕಾಗಿಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿ ಪ್ರಹಾರ ನಡೆಸಿದ್ದಾರೆ. ಅಲ್ಲದೇ ಅರಣ್ಯ ಇಲಾಖೆ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.
ನಾವೇ ಮಾಡಿದ್ದು: ದಾಳಿ ಮಾಡಿದ ರೈತರನ್ನು ಬಂಧಿಸಲು ಪೊಲೀಸರು ಮುಂದಾದಾಗ ನಾ ಮುಂದು, ತಾ ಮುಂದು ಎಂದು ನೂರಾರು ರೈತರು ಪೊಲೀಸರತ್ತ ಧಾವಿಸಿ ಬಂದು 'ಘಟನೆಗೆ ನಾವೇ ಕಾರಣ, ನಮ್ಮನ್ನೂ ಬಂಧಿಸಿ' ಎಂದಾಗ ಪೊಲೀಸರು ಗೊಂದಲಕ್ಕೊಳಗಾಗಿ ಕೊನೆಗೆ 50ಕ್ಕೂ ಹೆಚ್ಚು ರೈತರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement