ಇವರ ಕೂಗು 'ಅರಣ್ಯ' ರೋದನ!
-ಮೋಹನ್ ಕುಮಾರ್ ಎನ್.
ಕ.ಪ್ರ ವಾರ್ತೆ, ಶಿವಮೊಗ್ಗ, ಏ.7
ನಮ್ಮದು 150 ಕುಟುಂಬದ ಸಣ್ಣ ಹಳ್ಳಿ, ಇಲ್ಲಿ ಶ್ರೀಮಂತಿಕೆ ಇಲ್ಲದಿದ್ದರೂ ನೆಮ್ಮದಿಗೇನು ಕೊರತೆ ಇರಲಿಲ್ಲ. ಹಾಗೂ ಹೀಗೂ ಇರುವ ಸಣ್ಣ ಕೃಷಿ ಭೂಮಿಯಲ್ಲಿ ಜೋಳ, ಹುರುಳಿ ಬೆಳೆದು ಜೀವನದ ರಥ ಎಳೆಯುತ್ತಿದ್ದೇವೆ. ಆದರೆ, ಈಗ ಅರಣ್ಯ ಇಲಾಖೆಯವರು ನಮ್ಮ ನೆಮ್ಮದಿಯ ಬದುಕಿಗೆ ಕೊಳ್ಳಿ ಇಟ್ಟರೋ... ಎಂದು ಇಲ್ಲಿನ ರೈತರು ಗೊಳಿಡುತ್ತಾರೆ.
ಇದು ಬದನೆಹಾಳ್ (ಬೆಳ್ಳಿಗೆರೆ) ಗ್ರಾಮದ ಕರಾಳ ಕಥೆ. ಇದ್ದಿದ್ದರಲ್ಲಿ ತೃಪ್ತಿಪಟ್ಟುಕೊಂಡಿದ್ದ ರೈತರ ಮುಖದಲ್ಲೀಗ ಆತಂಕದ ಛಾಯೆ. ಗ್ರಾಮದಲ್ಲಿರುವ ಎರಡೂ ರಸ್ತೆಗಳ ತುಂಬೆಲ್ಲಾ ಪೊಲೀಸರ ಬೂಟಿನ ಸದ್ದು. ಮನೆಯೊಳಗಿನ ರೈತ ಮಹಿಳೆಯರು ಆತಂಕದಲ್ಲಿದ್ದಾರೆ. ಮನೆಯಿಂದ ಹೊರಗೆ ಕಾಲಿಟ್ಟರೆ ಎಲ್ಲಿ ಲಾಠಿ ರುಚಿ ನೋಡಬೇಕಾಗುತ್ತದೋ ಎಂಬ ಆತಂಕ.
ನೆನಪು: ಸುತ್ತಲೂ ಅರಣ್ಯವೇ ಹೊದ್ದಿರುವ ಬದನೆಹಾಳ್ (ಬೆಳ್ಳಿಗೆರೆ) ಗ್ರಾಮದಲ್ಲಿ ಕೃಷಿ ಆರಂಭಿಸಿ ಅರ್ಧ ಶತಮಾನವೇ ಆಗಿದೆ ಎಂದು ಇಲ್ಲಿನ ರೈತರು ನೆನಪಿಸಿಕೊಳ್ಳುತ್ತಾರೆ. ಈ ಮಧ್ಯೆ ಅರಣ್ಯ ಒತ್ತುವರಿ ವಿಚಾರ ಬಂದಾಗ ಅಂದು ಶಾಸಕರಾಗಿದ್ದ ಕರಿಯಣ್ಣ ಇಲ್ಲಿಗೆ ಆಗಮಿಸಿ ಒಂದು ತೀರ್ಮಾನ ಕೊಟ್ಟಿದ್ದರು. ಒತ್ತುವರಿಯಾದ ಜಾಗದಲ್ಲಿ 5 ಎಕರೆ ಜಾಗವನ್ನು ಆಶ್ರಯ ಯೋಜನೆಗಾಗಿ ಉಳಿದ 215 ಎಕರೆಯನ್ನು ಸಾಗುವಳಿ ಮಾಡಿಕೊಳ್ಳುವಂತೆ ಸೂಚಿಸಿದ್ದರು. ಇವರ ಮಾತಿನಂತೆ ರೈತರು ಕೃಷಿ ಮಾಡಿಕೊಂಡು ಬಂದಿದ್ದರು.
ಸರ್ವೆ ನಂಬರ್ 35ರಲ್ಲಿ ಸುಮಾರು 832 ಎಕರೆ ಅರಣ್ಯ ಭೂಮಿ ಇದ್ದು, ಅದರಲ್ಲಿ 220 ಎಕರೆಯಲ್ಲಿ ಕೃಷಿ ಮಾಡಲಾಗುತ್ತದೆ. ಇವರಿಗೆ ಸಾಗುವಳಿ ಚೀಟಿ ನೀಡಬೇಕೆಂದು ಈ ಹಿಂದೆಯೇ ನಿರ್ಧಾರವಾಗಿತ್ತು. ಆದರೆ, ಅರಣ್ಯ ಅಧಿಕಾರಿಗಳು ಈಗ ಜಮೀನು ನಮಗೆ ಸೇರಿದ್ದು ಎಂದು ದೌರ್ಜನ್ಯ ಮಾಡುತ್ತಿದ್ದಾರೆ ಎಂಬುದು ಇಲ್ಲಿನ ರೈತರ ನೇರ ಆರೋಪ.
ಬದುಕು ಕಿತ್ತುಕೊಳ್ಳಬೇಡಿ: ನಮಗೆ ಈ ಕೃಷಿ ಭೂಮಿ ಬಿಟ್ಟು ಬೇರೇನೂ ಇಲ್ಲ. ಕೃಷಿಯೇ ಆಧಾರ. ಹೀಗಿರುವಾಗ ನಮ್ಮ ಬದುಕು ಕಿತ್ತುಕೊಳ್ಳಬೇಡಿ ಎಂದು ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿ ಅಂಗಲಾಚಿದೆವು, ಆದರೂ ಅಧಿಕಾರಿಗಳ ಮನಕರಗಲೇ ಇಲ್ಲ ಎಂಬುದು ರೈತರ ಮಾತು. ಈ ಮಧ್ಯೆ ಉಪ ವಿಭಾಗಾಧಿಕಾರಿಯವರು ಸ್ಥಳಕ್ಕೆ ಭೇಟಿಕೊಟ್ಟು ಕಂದಾಯ ಭೂಮಿಗೆ ಬಾರದಂತೆ ಅರಣ್ಯ ಇಲಾಖೆಗೆ ಸೂಚಿಸಿದ್ದರು. ಆದರೂ ಅರಣ್ಯ ಇಲಾಖೆ ತನ್ನ ಶಕ್ತಿ ಪ್ರದರ್ಶನದ ಮೂಲಕ ಜಾಗ ತೆರವು ಮಾಡಲು ಮುಂದಾಯಿತು.
ಸರ್ವೆ ನಂಬರ್ 35ರಲ್ಲಿ ಫಲವತ್ತಾದ ಭೂಮಿಯಾಗಿದ್ದರಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದೇವೆ. ಆದರೆ, ಸಾಗುವಳಿ ಚೀಟಿ ನೀಡಿರಲಿಲ್ಲ. ಆದರೆ ಸರ್ವೆ ನಂಬರ್ 7ರಲ್ಲಿ ಸಾಗುವಳಿ ಚೀಟಿ ನೀಡಲಾಗಿತ್ತು. ಆದರೆ, ಸರ್ವೆ ನಂಬರ್ 7ಕ್ಕೂ ಏಕಾಏಕಿ ಅರಣ್ಯ ಇಲಾಖೆಯವರು ಬಂದು ಒತ್ತುವರಿ ತೆರವು ಮಾಡಿದ್ದಲ್ಲದೇ, ಪಹಣಿ ಇದ್ದಂತಹ ಜಮೀನುಗಳನ್ನೂ ವಶಪಡಿಸಿಕೊಳ್ಳಲು ಮುಂದಾಗಿದೆ. ಅದರೊಂದಿಗೆ ಮನೆ ತೆರವು ಮಾಡಬೇಕೆಂದು ಆದೇಶ ನೀಡಿದೆ. ಸರ್ವೆ ನಂಬರ್ 7ರಲ್ಲಿ ಇರುವ ಜಮೀನುಗಳಿಗೆ ರಾಷ್ಟ್ರೀಕೃತ ಬ್ಯಾಂಕುಗಳು, ಸಹಕಾರ ಸಂಸ್ಥೆಗಳಿಂದ ಸಾಲ ಪಡೆದು ಕೃಷಿ ಮಾಡಿದ್ದಾರೆ.
ಸರ್ಕಾರದ ಸಬ್ಸಿಡಿಯಿಂದ ಬೋರ್ವೆಲ್ ಸಹ ತೆಗೆಸಿಕೊಂಡಿದ್ದಾರೆ ಎಂದು ರೈತರಾದ ದೇವರಾಜ್ 'ಕನ್ನಡಪ್ರಭ'ಕ್ಕೆ ವಿವರಿಸಿದರು.
ಸ್ಥಿತಿ ಗತಿ ಹೇಗೆ: ಬದನೆಹಾಳಿನಲ್ಲಿ ಈಗ ಪೊಲೀಸ್ ರಾಜ್ಯ, ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ರೈತರಿಗೆ ಅರಣ್ಯ ಇಲಾಖೆ ಮೇಲಿನ ಸಿಟ್ಟು ಕಡಿಮೆಯಾಗಿಲ್ಲ. ಇನ್ನೊಂದೆಡೆ ರೈತರನ್ನು ಪೊಲೀಸರು ಹುಡುಕಾಡುತ್ತಿದ್ದಾರೆ. ಅರಣ್ಯಗಳಲ್ಲಿ ತಪ್ಪಿಸಿಕೊಂಡ ಕೆಲವು ರೈತರ ತಡಕಾಟದಲ್ಲಿ ಪೊಲೀಸರಿದ್ದಾರೆ. ಹೆಣ್ಣು ಮಕ್ಕಳು ಮನೆಯಿಂದ ಹೊರಬಾರದ ಸ್ಥಿತಿ ನಿರ್ಮಾಣವಾಗಿದೆ.
ಗಾಳಿಯಲ್ಲಿ ಗುಂಡು: 7 ಜನರಿಗೆ ಗಾಯ
ಸಾಗುವಳಿ ರೈತರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ನಡೆದ ಘರ್ಷಣೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ ಪರಿಣಾಮ ಒಬ್ಬನಿಗೆ ಗುಂಡು ತಗುಲಿದ್ದು, ಮಹಿಳೆಯರು ಸೇರಿದಂತೆ 7 ಜನರು ಗಾಯಗೊಂಡು ಭದ್ರಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ವೇಳೆ ಪೊಲೀಸರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಅಲ್ಲದೇ, ಬದನೆಹಾಳ್ ಗ್ರಾಮದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.