ಈಶ್ವರಪ್ಪ ಹೇಳಿಕೆಗೆ ಕಾಗೋಡು ಖಂಡನೆ
ಸಾಗರ: ಚುನಾವಣೆ ಸಂಬಂಧ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆಂದು ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆರೋಪಿಸಿರುವುದನ್ನು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ತೀವ್ರವಾಗಿ ಖಂಡಿಸಿದ್ದಾರೆ.
ಕೆಲ ದಿನಗಳ ಹಿಂದೆ ಕೆಜೆಪಿ ಮುಖಂಡ ಬಿ.ಆರ್. ಜಯಂತ್ ತಮ್ಮ ಹಾಗೂ ಈಶ್ವರಪ್ಪ ಮಧ್ಯೆ ಒಪ್ಪಂದವಾಗಿದೆ ಎಂದು ಹೇಳಿಕೆ ನೀಡಿದ್ದರು. ಈಗ ಈಶ್ವರಪ್ಪನವರು ಹೊಸ ರೀತಿಯಲ್ಲಿ ಆರೋಪ ಮಾಡಲು ಪ್ರಾರಂಭಿಸಿದ್ದಾರೆ. ಆದರೆ ನಾನು ಇದುವರೆಗೆ ಭ್ರಷ್ಟ ರಾಜಕಾರಣದ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿಲ್ಲ.
ಈಶ್ವರಪ್ಪನವರು ಯಡಿಯೂರಪ್ಪ ಹಾಗೂ ತಮ್ಮ ನಡುವೆ ಏನು ಒಳ ಒಪ್ಪಂದವಾಗಿದೆ ಎನ್ನುವುದನ್ನು ಬಹಿರಂಗಪಡಿಸಬೇಕು ಇಲ್ಲವೇ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಜವಾಬ್ದಾರಿ ಸ್ಥಾನದಲ್ಲಿರುವವರು ದೋಷಾರೋಪಣೆ ಮಾಡುವಾಗ ಆಧಾರ ರಹಿತವಾಗಿ ಮಾಡಬಾರದು ಎಂದು ಕಾಗೋಡು ತಿಮ್ಮಪ್ಪನವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಶೇ.100 ಮತದಾನ ಮಾಡಿ: ಡಾ. ಕೌಸರ್
ಚಿಕ್ಕಮಗಳೂರು: ಶೇ.100ರಷ್ಟು ಮತದಾನವಾಗಲು ಯುವ ಜನತೆ ಸಹಕರಿಸಿ ಸುಭದ್ರ, ಸುಸ್ಥಿರ ಸರ್ಕಾರ ರಚನೆಗೆ ಕಾರಣರಾಗಬೇಕೆಂದು ಐಡಿಎಸ್ಜಿ ಸರ್ಕಾರಿ ಕಾಲೇಜು ಪ್ರಾಂಶುಪಾಲೆ ಡಾ. ಜರೀನಾ ಕೌಸರ್ ಹೇಳಿದ್ದಾರೆ. ಭಾರತ ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತದ ಸಹಯೋಗದೊಂದಿಗೆ ನಗರದ ಐ.ಡಿ.ಎಸ್.ಜಿ ಸರ್ಕಾರಿ ಕಾಲೇಜಿನಲ್ಲಿ ಶನಿವಾರ ನಡೆದ ಮತದಾನ ಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು. ಮತದಾನ ಪವಿತ್ರ ಕರ್ತವ್ಯ. ಉತ್ತಮ ನಾಡನ್ನು ಕಟ್ಟಲು, ಸುಭದ್ರನಾಡು ನಿರ್ಮಾಣಕ್ಕೆ, ದೇಶದ ಪ್ರಗತಿಯ ಚಿಂತನೆಗೆ ಪೂರಕವಾದ ಜನಪ್ರತಿನಿಧಿಗಳನ್ನು ಮತ ಚಲಾಯಿಸುವ ಮೂಲಕ ಚುನಾಯಿಸಿ ಜವಾಬ್ದಾರಿಯುತ ಸರ್ಕಾರ ರಚನೆಗೆ ಕಾರಣಕರ್ತರಾಗುತ್ತಾರೆ ಎಂದರು.
ಕಡ್ಡಾಯವಾಗಿ ನೋಂದಾಯಿಸಿ: ಸಂಪನ್ಮೂಲ ಶಿಕ್ಷಕ ಡಾ.ಜಿ.ಎಂ. ಗಣೇಶ್ ಮಾತನಾಡಿ, ದೇಶದ ಶೇ.40ರಷ್ಟು ಜನ ಮತದಾನದಿಂದ ಹೊರಗುಳಿಯುತ್ತಿದ್ದಾರೆ. ಸರಾಸರಿ ಶೇ.60ರಷ್ಟು ಮಾತ್ರ ಚುನಾವಣೆಗಳಲ್ಲಿ ಮತದಾನವಾಗುತ್ತಿದೆ. ಮತದಾರರ ಪಟ್ಟಿಯಿಂದ ಹೊರಗುಳಿದವರ ಸಂಖ್ಯೆಯೂ ದೊಡ್ಡದಿದೆ. 18 ವರ್ಷ ಪೂರ್ಣಗೊಂಡವರು ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಅರ್ಹ ಮತದಾರರೆಲ್ಲರೂ ತಮ್ಮ ಹಕ್ಕು ಚಲಾಯಿಸುವ ಮೂಲಕ ಭವಿಷ್ಯದ ರಾಷ್ಟ್ರ ಕಟ್ಟಲು ಕಾಣಿಕೆ ನೀಡಬೇಕೆಂದರು.