ಬಿರು ಬಿಸಿಲಲ್ಲೂ ಬಿರುಸಿನ ಪ್ರಚಾರ
ಕ.ಪ್ರ.ವಾರ್ತೆ, ತೀರ್ಥಹಳ್ಳಿ, ಏ.7
ಮುಂಬರುವ ವಿಧಾನಸಭಾ ಚುನಾವಣೆಗೆ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಹೆಸರು ಅಂತಿಮಗೊಳ್ಳುತ್ತಿದ್ದಂತೆ ಪ್ರಚಾರ ಬಿರುಸಾಗಿ ಸಾಗಿದೆ.
ತಾಲೂಕಿನ ವಿವಿಧ ಹೋಬಳಿಗಳಲ್ಲಿ ಕಾಂಗ್ರೆಸ್, ಬಿಜೆಪಿ, ಕೆಜೆಪಿ, ಜೆಡಿಎಸ್ ನಾಯಕರು ಪ್ರಚಾರದ ಕಣದಲ್ಲಿ ಈಗಾಗಲೇ ಭರಾಟೆಯಿಂದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ನಾಮಪತ್ರ ಸಲ್ಲಿಕೆಗೆ ದಿನಗಳು ಹತ್ತಿರ ಬರುತ್ತಿದ್ದಂತೆ ಪ್ರಚಾರ ಕಾರ್ಯವೂ ಬಿರುಸಿನಿಂದ ಸಾಗಿದೆ.
ಮುಂಚೂಣಿಯಲ್ಲಿ ಕೆಜೆಪಿ: ಪ್ರಚಾರದ ಮುಂಚೂಣಿಯಲ್ಲಿರುವ ಕೆಜೆಪಿ ಈಗಾಗಲೇ ಮೊದಲನೇ ಸುತ್ತಿನ ಸಭೆ, ಕಾರ್ಯಕರ್ತರ ಸಮಾವೇಶ ಮಾಡಿ ಮುಗಿಸಿದ್ದು, ಎರಡನೇ ಸುತ್ತಿನ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಕ್ಷೇತ್ರದ ನಗರ ಹೋಬಳಿ, ಮಂಡಗದ್ದೆ ಹೋಬಳಿ, ಮತ್ತೂರು ಹೋಬಳಿ ಹಾಗೂ ಕಸಬಾ ಹೋಬಳಿಗಳಲ್ಲಿ ಮೊದಲ ಸುತ್ತಿನ ಪ್ರಚಾರ ಸಭೆಗಳನ್ನು, ಕಾರ್ಯಕರ್ತರ ಭೇಟಿ, ಮಾಡಿದ್ದಾಗಿದೆ.
ಮೇಗರವಳ್ಳಿ, ಮಾಸ್ತಿಕಟ್ಟೆ, ಕೋಣಂದೂರು ಸೇರಿದಂತೆ ಮೂರು ಮಹಿಳಾ ಸಭೆಗಳನ್ನೂ ಮಾಡಿದ್ದಾಗಿದೆ. 2ನೇ ಸುತ್ತಿನ ಪ್ರಚಾರ ಕಾರ್ಯವನ್ನು ಸೋಮವಾರದಿಂದ ಮಾಡಲಿದ್ದಾರೆ. ಕೆಜೆಪಿ ಅಭ್ಯರ್ಥಿ ಮಂಜುನಾಥ ಗೌಡರು ಏ.15ರಂದು ನಾಮಪತ್ರ ಸಲ್ಲಿಸುವ ನಿರೀಕ್ಷೆಯಿದೆ.
ಬೂತ್ ಮಟ್ಟದಲ್ಲಿ ಭೇಟಿ: ಕಾಂಗ್ರೆಸ್ ಕೂಡಾ ಪ್ರಚಾರ ಕಾರ್ಯದಲ್ಲಿ ಸಾಕಷ್ಟು ತೊಡಗಿಸಿಕೊಂಡಿವೆ. ನಗರ ಹೋಬಳಿಯ ನಗರ, ನಿಟ್ಟೂರು ಮತ್ತು ಹುಂಚ ಹೋಬಳಿಗಳಲ್ಲಿ ವಿವಿಧ ಸಭೆ ನಡೆಸಿದ್ದಾರೆ. ಕಾರ್ಯಕರ್ತರ ಸಮಾವೇಶ ಮಾಡಿದ್ದಾರೆ. ಬೂತ್ ಮಟ್ಟದ ಕಾರ್ಯಕರ್ತರ ಭೇಟಿ ಭರದಿಂದ ಸಾಗಿದೆ.
ಸೋಮವಾರದಿಂದ ಮಂಡಗದ್ದೆ ಹೋಬಳಿಯ ತೂದೂರು ಹುಂಚ ಹೋಬಳಿಯ ಹೆದ್ದಾರಿಪುರಗಳಲ್ಲಿ ಸಭೆ , ಕಾರ್ಯಕರ್ತರ ಸಭೆಗಳು ನಡೆಯಲಿವೆ. ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ಏ.17ರಂದು ನಾಮಪತ್ರ ಸಲ್ಲಿಸಲಿದ್ದಾರೆ.
ಬಿಜೆಪಿ ಈಗಾಗಲೇ ತೀರ್ಥಹಳ್ಳಿ ಪಟ್ಟಣದಲ್ಲಿ ಯುವ ಕಾರ್ಯಕರ್ತರ ಸಭೆ, ಮಹಿಳಾ ಕಾರ್ಯಕರ್ತರ ಸಭೆ ನಡೆಸಿದೆ. ಅಗ್ರಹಾರ, ಹುಂಚ, ಹಾಗೂ ನಗರ ಹೋಬಳಿಯಲ್ಲಿ ಕಾರ್ಯಕರ್ತರ ಸಭೆ ನಡೆಸಲಾಗಿದೆ, ಬೂತ್ ಮಟ್ಟದ ಕಾರ್ಯಕರ್ತರನ್ನೂ ಭೇಟಿ ಮಾಡಲಾಗುತ್ತಿದೆ. ಅಭ್ಯರ್ಥಿ ಆರಗ ಜ್ಞಾನೇಂದ್ರ ಏ.11ರಂದು ನಾಮಪತ್ರ ಸಲ್ಲಿಸಲಿದ್ದಾರೆ.
ಭರದ ಪ್ರಚಾರ: ಜೆಡಿಎಸ್ ಅಭ್ಯರ್ಥಿ ಆರ್. ಮದನ್ ನೇತೃತ್ವದಲ್ಲಿ ಪಕ್ಷ ಈಗಾಗಲೇ ಎಲ್ಲಾ ಹೋಬಳಿಗಳಲ್ಲೂ ಒಂದು ಸಾರಿ ಸಭೆ ನಡೆಸಿ, ಕಾರ್ಯಕರ್ತರ ಭೇಟಿ, ಸಂಘಟನೆಯಲ್ಲಿ ತೊಡಗಿಸಿಕೊಂಡಿದೆ. ಹೊಸನಗರ, ಹುಂಚ ಹೋಬಳಿಗಳಲ್ಲೂ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಎರಡನೇ ಸುತ್ತಿನ ಪ್ರಚಾರ ಕಾರ್ಯಕ್ಕೆ ಪಕ್ಷ ಅಣಿಯಾಗುತ್ತಿದೆ.
ಅಭ್ಯರ್ಥಿ ಮದನ್ ಏ.15ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಬಿಎಸ್ಆರ್ ಕಾಂಗ್ರೆಸ್ನ ಅಭ್ಯರ್ಥಿ ಅಶೋಕ ಮೂರ್ತಿ ಕೂಡ ಚುನಾವಣಾ ಪ್ರಚಾರ ಸಭೆಯನ್ನು ಚುರುಕಿನಿಂದ ನಡೆಸುತ್ತಿದ್ದಾರೆ. ಈಗಾಗಲೇ ಒಂದೆರಡು ಕಾರ್ಯಕರ್ತರ ಸಭೆಯನ್ನೂ ನಡೆಸಿರುವ ಅವರು ಈ ಕ್ಷೇತ್ರದಲ್ಲಿ ಸಾಕಷ್ಟು ಪರಿಚಿತ ವ್ಯಕ್ತಿಯಾಗಿದ್ದಾರೆ.
ಈಡಿಗ ಸಮುದಾಯದ ಮತಗಳನ್ನು ಸೆಳೆಯುವ ಶಕ್ತಿ ಅವರಲ್ಲಿದೆ ಎಂಬುದು ಬಲ್ಲವರ ಮಾತು.
ಈ ಬಾರಿ ಮತದಾರನನ್ನು ವಿಶೇಷವಾಗಿ ಓಲೈಸಲು ಯಾವರೀತಿ ಬಲೆ ಬೀಸಬಹುದು ಎಂಬುದು ಪಕ್ಷಗಳ ಮುಖಂಡರಲ್ಲಿ ಸವಾಲಾಗಿದೆ.
-ಸತ್ಯನಾರಾಯಣ