ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮತ ಹಾಕುವ ಮುನ್ನ ಕೇಳಿ ಗೋಳು- ಕರಪತ್ರ

Lingaraj Badiger
Updated On : 8 Apr 2013, 11:29 am

ಕ.ಪ್ರ.ವಾರ್ತೆ, ಶಿವಮೊಗ, ಏ.7
ಈಶ್ವರಪ್ಪನವರ ಕಮಲದ ಗುರುತಿಗೆ ಓಟು ಹಾಕುವುದಕ್ಕೆ ಮೊದಲು ನಮ್ಮ ವ್ಯಥೆ ಕೇಳಿ ಎಂಬ ಶಿರ್ಷಿಕೆ ಹೊಂದಿದ ಕರಪತ್ರವೊಂದು ನಗರದ ವಿವಿಧೆಡೆ ಪ್ರಸಾರವಾಗಲಾರಂಭಿಸಿದೆ.  ಭಾನುವಾರ ಈ ಕರಪತ್ರ ಸಾಗರ ರಸ್ತೆಯ ಲಗನ ಕಲ್ಯಾಣ ಮಂದಿರದ ಸಮೀಪ ಹಂಚಿಕೆಯಾಗುತ್ತಿತ್ತು.ನೊಂದ ರೈತರು ಒಕ್ಕಣೆ ಮಾಡಿರುವ ಪತ್ರ ಮಾದರಿಯ ಕರಪತ್ರ ಇದಾಗಿದ್ದು, ತಮಗಾಗಿರುವ ನೋವನ್ನು ರೈತರು ತೋಡಿಕೊಂಡಿದ್ದಾರೆ.
ಕರಪತ್ರದ ಸಾರಾಂಶ: ನಾವು 40 ವರ್ಷದಿಂದ ವ್ಯವಸಾಯ ಮಾಡಿಕೊಂಡು ಬಂದ ಜಮೀನನ್ನು ಸರ್ಕಾರ 2008ರಲ್ಲಿ ಕೆಐಎಡಿಬಿಗೆ 970 ಎಕರೆ ಸ್ವಾಧೀನಪಡಿಕೊಂಡಿತು. ನಂತರ ನಾನಾ ಕಾರಣಗಳಿಂದ 350 ಎಕರೆ ಅರಣ್ಯ ಪ್ರದೇಶ ಎಂದು ಕೈಬಿಟ್ಟು ಬಾಕಿ ಜಮೀನಿಗೆ ಹಣ ಕೊಟ್ಟು ಯಡಿಯೂರಪ್ಪನವರು ಅಂತಿಮಗೊಳಿಸಿ ನಿಮಗೂ ವ್ಯವಸ್ಥೆ ಮಾಡುತ್ತೇನೆ ಎನ್ನುವಷ್ಟರಲ್ಲಿ ಅವರು ಅಧಿಕಾರದಿಂದ ಕೆಳಗೆ ಇಳಿದರು.
 ನಂತರ ಬಂದ ಡಿಸಿಎಂ ಮತ್ತು ಕಂದಾಯ ಸಚಿವ ಈಶ್ವರಪ್ಪನವರ ಬಳಿ ಹೋಗಿ ನಮ್ಮ ಕಷ್ಟಗಳನ್ನು ಹೇಳಿದರೆ ಯಾರು ವಶಪಡಿಸಿಕೊಂಡರೋ ಅವರ ಬಳಿ ಹೋಗಿ ಎಂದು ಹಾಗೂ ನಮ್ಮ ವಿಧಾನಸಭಾ ಕ್ಷೇತ್ರಕ್ಕೆ ನೀವು ಬರುವುದಿಲ್ಲ. ಯಾರ ಕ್ಷೇತ್ರಕ್ಕೆ ಬರುತ್ತೀರೋ ಅವರ ಬಳಿ ಹೋಗಿ ಎಂದರು.
    ನಾವು ಹಣ ಬಂದೇ ಬಿಟ್ಟಿತು ಎಂದು ನಮ್ಮ ಹೆಣ್ಣು ಮಕ್ಕಳಿಗೆ ಸಾಲಸೋಲ ಮಾಡಿ ಮದುವೆ ಮಾಡಿರುತ್ತೇವೆ. ಈಗ ಸಾಲ ತೀರಿಸಲೂ ಆಗದೇ, ಜಮೀನು ಮಾರಲೂ ಬಾರದ ಹಾಗೂ ವಿಷ ಕುಡಿಯುವ ಸ್ಥಿತಿಯಲ್ಲಿದ್ದೇವೆ ಎಂದರೂ ಸಹ ಅದಕ್ಕೆ ನಾನು ಜವಾಬ್ದಾರನಲ್ಲ ಎಂದು ಹೇಳಿದರು ನಮ್ಮ ಉಪಮುಖ್ಯಮಂತ್ರಿ ಮಹಾಶಯರು.   
  ಇಂತಹವರಿಗೆ ಓಟು ಹಾಕಿದರೆ ಇಂದು ನಮಗಾದ ಸ್ಥಿತಿ ನಿಮಗೂ ಬರಬಹುದು ಎಂದು ಎಚ್ಚರವಹಿಸಿ ಈಶ್ವರಪ್ಪನವರನ್ನು ತಿರಸ್ಕರಿಸಿ, ನಮ್ಮ ಪ್ರತಿಭಟನೆಗೆ ತಾವು ಪುರಸ್ಕಾರ ನೀಡಿ ಸಹಕರಿಸಬೇಕಾಗಿ ಕಳಕಳಿಯ ಪ್ರಾರ್ಥನೆ ಎಂದು ನೊಂದ ರೈತರು ಕರಪತ್ರದಲ್ಲಿ ವಿನಂತಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement