ವಿಶೇಷ ಕಲಿಕಾ ಶಿಬಿರ
ಶಿವಮೊಗ್ಗ: ಕಲ್ಲಳ್ಳಿಯ ಪ್ರಿಯದರ್ಶಿನಿ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯಲ್ಲಿ ಮುಂಬರುವ ಶೈಕ್ಷಣಿಕ ವರ್ಷ(2014)ದಲ್ಲಿ ನಡೆಯಲಿರುವ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇದೇ ಏಪ್ರಿಲ್ 6ರಿಂದ ಮೇ 27ರವರೆಗೆ ವಿಶೇಷ ಕಲಿಕಾ- ಪರೀಕ್ಷಾ ಸಾಮರ್ಥ್ಯವರ್ಧನಾ ಶಿಬಿರ ಏರ್ಪಡಿಸಿದೆ.
ರಾಜ್ಯದ ಪ್ರತಿಷ್ಠಿತ ಶಾಲೆಗಳ ನುರಿತ ಶಿಕ್ಷಕರಿಂದ ವಿಷಯ ಬೋಧನೆ ಹಾಗೂ ಸರಣಿ ಘಟಕ ಪರೀಕ್ಷೆಗಳನ್ನು ಮಾಡಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗುವುದು. ವಿದ್ಯಾರ್ಥಿಗಳು ಯಾವ ವಿಷಯದಲ್ಲಿ ಡಲ್ ಇದ್ದಾರೋ ಅದೇ ವಿಷಯವನ್ನು ಹೆಚ್ಚಾಗಿ ಅಭ್ಯಸಿಸಲಾಗುವುದು. ಅದರೊಂದಿಗೆ ವಿಷಯದ ಬೋಧನೆಯೊಂದಿಗೆ ಅವಶ್ಯಕವಾದ ಕಲಿಕಾ ಬರಹ ಸಾಮಗ್ರಿಗಳು ಮತ್ತು ಹೆಚ್ಚಿನ ಕಲಿಕೆಗೆ ಅವಕಾಶ ಒದಗಿಸಲಾಗುವುದು. ಶಿಬಿರದಲ್ಲಿ, ಮುಕ್ತ ಸಂವಾದ, ಪ್ರತಿ ಪಾಠದ ಮೌಲ್ಯ ಮಾಪನ, ಘಟಕ ಪರೀಕ್ಷೆಗಳು, ಪ್ರಗತಿಪತ್ರ, ಉತ್ತಮ ಅಭ್ಯಾಸಕ್ಕೆ ಕಲಿಕಾ ಬರಹಗಳು, ಪ್ರತೀ ವಿಷಯಕ್ಕೆ 3 ಮಾದರಿ ಪ್ರಶ್ನೆಪತ್ರಿಕೆಗಳನ್ನು ನೀಡಲಾಗುತ್ತದೆ. ಸರಣಿ ಘಟಕ ಪರೀಕ್ಷೆಗಳು, ಪ್ರಗತಿ ನೋಟ ಮತ್ತು ಮಾದರಿ ಪರೀಕ್ಷೆ ಮೂಲಕ ಪ್ರತಿ ಸ್ಪಂದನ ಪಡೆಯಲಾಗುವುದು. ಸಂಪನ್ಮೂಲ ವ್ಯಕ್ತಿಗಳಾಗಿ ಮೈಸೂರಿನ ಸದ್ವಿದ್ಯಾ ಪ್ರೌಢಶಾಲೆಯ ಕೃಷ್ಣಪ್ರಸಾದ್, ಪ್ರದೀಪ್, ಶಾರದ ವಿಲಾಸ, ಪ್ರೌಢಶಾಲೆಯ ಬಾಲಸುಬ್ರಹ್ಮಣ್ಯ, ಗೋವಿಂದನ್, ಸಿದ್ಧಾರ್ಥ ಪ್ರೌಢಶಾಲೆಯ ಲಿಂಗರಾಜೇಗೌಡ, ಬೆಂಗಳೂರು ನ್ಯಾಷನಲ್ ಸ್ಕೂಲ್ನ ವರದರಾಜ್, ಚಿತ್ರದುರ್ಗದ ಏಕನಾಥ್ ಸೇರಿದಂತೆ ರಾಜ್ಯದ ಇತರೆ ಪ್ರತಿಷ್ಠಿತ ಶಾಲೆಯ ಉತ್ತಮ ಶಿಕ್ಷಕರು ಶಿಬಿರದಲ್ಲಿ ಮಾರ್ಗದರ್ಶನ ನೀಡುವರು ಎಂದು ಆಯೋಜಕರು ತಿಳಿಸಿದ್ದಾರೆ. ವಿವರಗಳಿಗಾಗಿ- 08182-248835.
ವಿಚಾರ ಸಂಕಿರಣ
ಶಿವಮೊಗ್ಗ: ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜು ಆವರಣದಲ್ಲಿ ಏ.9ರಂದು ಬೆಳಿಗ್ಗೆ 10ಕ್ಕೆ ಸಾಮಾಜಿಕ ನ್ಯಾಯ ಸಬಲೀಕರಣ, ಹಿಂದುಳಿದ ವರ್ಗದ ವಿಷಯ ಮತ್ತು ಸವಾಲುಗಳು ವಿಷಯ ಕುರಿತಂತೆ ರಾಷ್ಟ್ರೀಯ ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕುವೆಂಪು ವಿಶ್ವವಿದ್ಯಾನಿಲಯದ ಕುಲಸಚಿವ ಎ. ರಾಮೇಗೌಡ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಸಹ್ಯಾದ್ರಿ ಕಾಲೇಜು ಪ್ರಾಂಶುಪಾಲ ಪ್ರೊ.ಎಚ್. ಜಯದೇವಪ್ಪ, ಸಮಾಜಶಾಸ್ತ್ರ ಸಂಶೋಧನಾ ವಿಭಾಗದ ಡಾ. ಚಂದ್ರಶೇಖರ್ ಪಾಲ್ಗೊಳ್ಳಲಿದ್ದಾರೆ. ತಿರುಪತಿಯ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ಸಂಶೋಧನಾ ವಿಭಾಗ ಪ್ರೊ.ಡಿ. ವೆಂಕಟೇಶ್ವರಲು ಉಪನ್ಯಾಸ ಮಾಡಲಿದ್ದಾರೆ.