ಸೋಲಿನ ಭೀತಿಯಿಂದ ಬಾಯಿಗೆ ಬಂದಂತೆ ಹೇಳಿಕೆ: ಆರೋಪ
ಕ.ಪ್ರ ವಾರ್ತೆ, ಶಿವಮೊಗ್ಗ, ಏ.7
ಚುನಾವಣೆಯಲ್ಲಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಸೋಲುವುದು ನಿಶ್ಚಿತ. ಸೋಲುವ ಭೀತಿಯ ಹಿನ್ನೆಲೆಯಲ್ಲೇ ಅವರು ಮತದಾರರಲ್ಲಿ ಗೊಂದಲ ಸೃಷ್ಟಿಸಲು ಕೆಜೆಪಿ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಕೆಜೆಪಿ ಜಿಲ್ಲಾಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಕೆಜೆಪಿ ಹಾಗೂ ಕಾಂಗ್ರೆಸ್ ನಡುವೆ ಒಳ ಒಪ್ಪಂದವಾಗಿದೆ ಎಂಬ ಈಶ್ವರಪ್ಪ ಹೇಳಿಕೆ ಹತಾಶೆಯಿಂದ ಕೂಡಿದೆ ಹಾಗೂ ಸತ್ಯಕ್ಕೆ ದೂರವಾದದು ಎಂದರು.
ಈಶ್ವರಪ್ಪಗೆ ಸಾಕಷ್ಟು ರಾಜಕೀಯ ಅನುಭವವಿದೆ, ಯಾವುದೇ ಹೇಳಿಕೆ ನೀಡುವ ಮುನ್ನ ಅತ್ಯಂತ ಎಚ್ಚರಿಕೆಯಿಂದ ನೀಡಬೇಕು. ಒಳ ಒಪ್ಪಂದ ಇತ್ಯಾದಿಯಾಗಿ ಹೇಳಿಕೆ ನೀಡಿ ಜನರ ಮುಂದೆ ನಗೆಪಾಟಲಿಗೀಡಾಗಬಾರದು. ಕೆಜೆಪಿಯನ್ನು ಎಲ್ಲ ವರ್ಗದವರು ಬೆಂಬಲಿಸುತ್ತಿದ್ದಾರೆ. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಕೆಲಸಗಳು, ಅಭಿವೃದ್ಧಿ ಕಾರ್ಯಗಳೇ ಪಕ್ಷದ ಗೆಲುವಿಗೆ ಶ್ರೀರಕ್ಷೆ ಎಂದು ಅಭಿಪ್ರಾಯಪಟ್ಟರು.
ಏ.9ರಂದು ಸಂಜೆ ಶಿವಮೊಗ್ಗದಲ್ಲಿ ಬಿ.ಎಸ್. ಯಡಿಯೂರಪ್ಪ ವಿವಿಧ ಸಮಾಜದ ಮುಖಂಡರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಏ.10ರಂದು ಬೆಳಿಗ್ಗೆ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಕುತಂತ್ರ: ಮುಖ್ಯಮಂತ್ರಿಯಾಗಿದ್ದ ವೇಳೆ ಯಡಿಯೂರಪ್ಪರನ್ನು ಇಳಿಸಲು ಬಿಜೆಪಿ ಮುಖಂಡರು ಇನ್ನಿಲ್ಲದ ಕುತಂತ್ರ ನಡೆಸಿದರು. ಒಂದು ದಿನವೂ ಅವರು ಸರಿಯಾಗಿ ಆಡಳಿತ ನಡೆಸಲು ಅವಕಾಶ ನೀಡಲಿಲ್ಲ. ಇದರಿಂದ ರೋಸಿ ಹೋದ ಅವರು ಬಿಜೆಪಿ ತೊರೆದು ಪ್ರತ್ಯೇಕ ಪಕ್ಷ ಕಟ್ಟುವಂತಾಯಿತು. ಯಡಿಯೂರಪ್ಪ ಅವರ ಈ ನಿರ್ಧಾರಕ್ಕೆ ರಾಜ್ಯದ ಜನತೆಯೂ ಬೆಂಬಲಿಸಿದ್ದಾರೆ ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಸ್. ರುದ್ರೇಗೌಡ ಹೇಳಿದರು.
ಲಗನ ಕಲ್ಯಾಣ ಮಂದಿರದಲ್ಲಿ ಭಾನುವಾರ ಕೆಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿ, ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಹತ್ತು ಹಲವು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದರು. ಜೊತೆಗೆ ಶಿವಮೊಗ್ಗ ನಗರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದರು. ರಾಜ್ಯವನ್ನು ಮಾದರಿ ನಗರವನ್ನಾಗಿ ರೂಪಿಸಿದರು. ಇದು ತಮ್ಮ ಗೆಲುವಿಗೆ ಸಹಕಾರಿಯಾಗಿದೆ ಎಂದು ಹೇಳಿದರು.
ಮನವರಿಕೆ ಮಾಡಲಿ: ಪಕ್ಷದ ಕಾರ್ಯಕರ್ತರು ಯಡಿಯೂರಪ್ಪನವರ ಅಭಿವೃದ್ಧಿ ಕಾರ್ಯಗಳ ಕುರಿತಂತೆ ಮತದಾರರಿಗೆ ಮನವರಿಕೆ ಮಾಡಿಕೊಡಬೇಕು. ಪಕ್ಷದ ಗುರುತಾದ ತೆಂಗಿನಕಾಯಿಗೆ ಮತ ಹಾಕುವಂತೆ ಮನವಿ ಮಾಡಬೇಕು ಎಂದು ಸಲಹೆ ನೀಡಿದರು.
ಕೆಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಪುರುಷೋತ್ತಮ್ ಮಾತನಾಡಿ, ಯಡಿಯೂರಪ್ಪರಿಗೆ ಅನ್ಯಾಯ ಮಾಡಿದವರಿಗೆ ತಕ್ಕ ಪಾಠ ಕಲಿಸುವ ಸಮಯ ಬಂದಿದೆ. ಕೆಜೆಪಿ ಅಭ್ಯರ್ಥಿಗಳಿಗೆ ಮತ ಹಾಕಿ ಗೆಲ್ಲಿಸುವ ಮೂಲಕ ಯಡಿಯೂರಪ್ಪಗೆ ದ್ರೋಹ ಮಾಡಿದವರಿಗೆ ಮತದಾರರು ತಕ್ಕ ಪಾಠ ಕಲಿಸಬೇಕಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಮುಖಂಡರಾದ ಬಿಳಕಿ ಕೃಷ್ಣಮೂರ್ತಿ, ಭಾನುಪ್ರಸಾದ್, ಇಕ್ಬಾಲ್ ಅಹ್ಮದ್, ನಗರಸಭೆ ಸದಸ್ಯ ಮಾಲತೇಶ್, ಮಹೇಂದ್ರಪ್ಪ, ಬಳ್ಳೆಕೆರೆ ಸಂತೋಷ್ ಮತ್ತಿರರು ಇದ್ದರು.