ಅಮೂಲ್ಯ ವಸ್ತು ಅಗ್ನಿಗೆ ಅರ್ಪಣೆ ಸಲ್ಲ: ಮಾತೆ ಮಹಾದೇವಿ
ಭದ್ರಾವತಿ: ಧರ್ಮದ ಹೆಸರಿನಲ್ಲಿ ಹೋಮ ಹವನಗಳನ್ನು ನಡೆಸಿ ಅಮೂಲ್ಯ ವಸ್ತುಗಳನ್ನು ಅಗ್ನಿಗೆ ಸಮರ್ಪಿಸುವುದು ಮೂಢನಂಬಿಕೆಯ ಪರಮಾವಧಿ ಎಂದು ಕೂಡಲ ಸಂಗಮ ಬಸವಧರ್ಮ ಪೀಠದ ಮಾತೆ ಮಹಾದೇವಿ ಅಭಿಪ್ರಾಯಪಟ್ಟರು. ಅವರು ಪಟ್ಟಣದ ರಾಷ್ಟ್ರೀಯ ಬಸವದಳ ತರೀಕೆರೆ ರಸ್ತೆಯಲ್ಲಿರುವ ಬಸವ ಮಂಟಪದಲ್ಲಿ ಮಾತೆ ಮಹಾದೇವಿಗೆ 68 ವರ್ಷ ತುಂಬಿದ ಪ್ರಯುಕ್ತ ಏರ್ಪಡಿಸಿದ್ದ ಗುರುವಂದನ ಮತ್ತು ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು. ಸಮಾಜದಲ್ಲಿ ಇನ್ನೂ ಇಂತಹ ಮೂಢನಂಬಿಕೆಗಳು ಜೀವಂತವಾಗಿರುವುದು ವಿಷಾದನೀಯ. ಇಂತಹ ನಂಬಿಕೆಗಳಿಂದ ವ್ಯಕ್ತಿ, ಸಮಾಜದ ಉದ್ಧಾರ ಎಂದಿಗೂ ಸಾಧ್ಯವಿಲ್ಲ. ಧರ್ಮ ಎಲ್ಲರ ಬದುಕಿನ ಸೂತ್ರವಾಗಬೇಕು. ಧರ್ಮದ ಕಾರ್ಯದಲ್ಲಿ ತಾರತಮ್ಯ, ಮೇಲುಕೀಳು, ಶ್ರೀಮಂತ- ಬಡವ ಎಂಬ ಭೇದಭಾವ ಬರಬಾರದು. ಸಂಸ್ಕಾರ, ಸಂಘಟನೆ, ಸಮಾನತೆ, ಸಹಬಾಳ್ವೆ ಸಮಾಜದ ಮುಖ್ಯ ಗುರಿಯಾಗಬೇಕು ಎಂದು ಒತ್ತಿ ಹೇಳಿದರು.
ಗೊಡ್ಡು ಆಚರಣೆ: ಇಂದಿನ ದಿನಗಳಲ್ಲಿ ಉಂಡ ಬಳಿಕ ಎಲೆಯಲ್ಲಿ ಆಹಾರ ಪದಾರ್ಥಗಳನ್ನು ಬಿಡುವುದು ಒಂದು ಕೆಟ್ಟ ಸಂಪ್ರದಾಯವಾಗಿದೆ. ಕೆಲವರು ಊಟದ ಕೊನೆಯಲ್ಲಿ ಸ್ವಲ್ಪ ಆಹಾರ ಮತ್ತು ಅನ್ನದ ಅಗುಳನ್ನು ಬಿಡಬೇಕು ಎಂಬ ಮೂರ್ಖತನದ ಸಂಪ್ರದಾಯಕ್ಕೆ ಕಟ್ಟುಬೀಳುತ್ತಿದ್ದಾರೆ. ಇಂತಹ ಗೊಡ್ಡು ಆಚರಣೆಗಳನ್ನು ಪಾಲನೆ ಮಾಡುವುದನ್ನು ಬಿಡಬೇಕೆಂದು ಹೇಳಿದರು.