ಇಂದು ಸ್ವಾಭಿಮಾನಿ ಕನ್ನಡಿಗರ ಸಮಾವೇಶ
ಶಿವಮೊಗ್ಗ: ಕನ್ನಡಿಗರ ಜನಪರ ವೇದಿಕೆಯಿಂದ ಏ.9ರಂದು ಸ್ವಾಭಿಮಾನಿ ಕನ್ನಡಿಗರ ಸಮಾವೇಶವನ್ನು ನಗರದ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆ ರಾಜ್ಯಾಧ್ಯಕ್ಷ ಎಂ.ಡಿ. ಶರೀಫ್ ತಿಳಿಸಿದ್ದಾರೆ. ಮಧ್ಯಾಹ್ನ 1ರಿಂದ ಹೊಳೆಬಸ್ ನಿಲ್ದಾಣದಿಂದ ಎ.ಎ. ವೃತ್ತ, ಗೋಪಿವೃತ್ತ, ಜೈಲ್ವೃತ್ತ, ಲಕ್ಷ್ಮೀ ಚಿತ್ರಮಂದಿರ ವೃತ್ತ, ಸವಳಂಗ ರಸ್ತೆ, ಮಹಾವೀರ ವೃತ್ತ ಮಾರ್ಗವಾಗಿ ಕುವೆಂಪು ರಂಗಮಂದಿರದವರೆಗೆ ರಾಜಬೀದಿ ಉತ್ಸವ ಹಮ್ಮಿಕೊಳ್ಳಲಾಗಿದೆ. ಸಂಜೆ 4.30ಕ್ಕೆ ಸಭಾ ಕಾರ್ಯಕ್ರಮವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಂಜುನಾಥ್ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಒಕ್ಕೂಟದ ರಾಷ್ಟ್ರಾಧ್ಯಕ್ಷ ಪ್ರಮೋದ್ ಗೋಣಿ, ಸಾಹಿತಿ ರಹಮತ್ ತರೀಕೆರೆ, ಗೀತಾಂಜಲಿ ಆರ್. ಪಾಟೀಲ್, ಹೆವೆನ್ ಹಬೀಬ್, ಚಾಂದ್ ಪಾಷ ಮತ್ತಿತರರು ಉಪಸ್ಥಿತರಿರುವರು. ವಿಶೇಷ ಆಹ್ವಾನಿತರಾಗಿ ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್, ನಗರಸಭೆ ಆಯುಕ್ತ ಡಾ. ರವಿ ಆಗಮಿಸುವರು. ಇದೇ ಸಂದರ್ಭದಲ್ಲಿ ವಿವಿಧ ಗಣ್ಯರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ. ಇದೇ ವೇಳೆಯಲ್ಲಿ ಅನಾಥಾಶ್ರಮಗಳಿಗೆ ಉಚಿತ ಆಹಾರ ಧಾನ್ಯ ವಿತರಣೆ, ಬಡ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ, ಸೀರೆ ವಿತರಣೆ ಮಾಡಲಾಗುವುದು ಎಂದು ಶರೀಫ್ ವಿವರಿಸಿದ್ದಾರೆ.