ಚುನಾವಣೆಯ ಪಂಟರ್ಗಳಿವರು...
ಕ.ಪ್ರ.ವಾರ್ತೆ,ಶಿವಮೊಗ್ಗ, ಏ.8
ಜಿಲ್ಲೆಯ ಎಲ್ಲಾ ಏಳು ವಿಧಾನಸಭಾ ಕ್ಷೇತ್ರದಲ್ಲಿ ಯಾರು ಸ್ಪರ್ಧಿಸಬೇಕೆಂದು ಪ್ರಮುಖ ರಾಜಕೀಯ ಪಕ್ಷಗಳು ಬಹುತೇಕ ನಿರ್ಧರಿಸಿವೆ. ಒಂದೆರಡು ಬದಲಾವಣೆ ಹೊರತು ಹಾಲಿ ಘೋಷಣೆಯಾದ ಅಭ್ಯರ್ಥಿಗಳು ಕಣದಲ್ಲುಳಿಯುವುದು ಬಹುತೇಕ ಖಚಿತ. ವಿಶೇಷವೆಂದರೆ, ಹಾಲಿ ಕಣದಲ್ಲಿರುವ ಬಹುತೇಕ ಅಭ್ಯರ್ಥಿಗಳು ಚುನಾವಣಾ ವಿಷಯಕ್ಕೆ ಬಂದರೆ ಪಂಟರ್ಗಳೇ...
ಚುನಾವಣೆ ಎಂದರೆ ಅವರಿಗೆ ಸಲೀಸು. ಅನೇಕರು ದಂಡ ಯಾತ್ರೆ ಮಾಡಿದ್ದರೆ, ಮತ್ತೆ ಕೆಲವರು ಸೋಲು ಗೆಲುವಿನ ರುಚಿಕಂಡು ತಮ್ಮ ರಾಜಕೀಯ ಅಭಿಮಾನವನ್ನು ಈ ಬಾರಿಯೂ ಮುಂದುವರಿಸುತ್ತಿದ್ದಾರೆ.
ಚುನಾವಣೆಯಲ್ಲಿ ಬರುವ ಗೂಗ್ಲಿ, ಯಾರ್ಕರ್, ಬೌನ್ಸರ್ಗಳನ್ನೆಲ್ಲಾ ಎದುರಿಸಿ ದೀರ್ಘಕಾಲೀನ ರಾಜಕೀಯ ಮಾಡಿದವರು ಸಾಕಷ್ಟಿದ್ದಾರೆ. ಕಾಗೋಡು ತಿಮ್ಮಪ್ಪ, ಜಿ.ಬಸವಣ್ಯಪ್ಪ, ಬಿ.ಎಸ್. ಯಡಿಯೂರಪ್ಪ, ಆರಗ ಜ್ಞಾನೇಂದ್ರ ಪ್ರಮುಖರು.
ಹಿರಿಯಪ್ಪ: ಕಾಗೋಡು ತಿಮ್ಮಪ್ಪ ಚುನಾವಣೆಗೆ ಎಂಟ್ರಿಕೊಟ್ಟಿದ್ದು 1967ರಲ್ಲಿ. ಮೊದಲ ಚುನಾವಣೆಯಲ್ಲಿ ಸೋಲುಕಂಡ ಅವರು, ನಂತರ ಸಾಗರ ಅವರ ಕೈ ಬಿಡಲಿಲ್ಲ. 1972, 1978ರಲ್ಲಿ ಗೆಲುವು ಪಡೆದರು. ರಾಜಕೀಯ ಸ್ಥಿತ್ಯಂತರದಲ್ಲಿ ಅವರು 1983ರಲ್ಲಿ ಸ್ಪರ್ಧಿಸಿ ಸೋಲಿನ ರುಚಿ ಕಂಡರು. ಆದರೆ, 1989ರಲ್ಲಿ ಪುನಾ ಸಾಗರದಿಂದ ಗೆಲುವು ಪಡೆದರು.
1994 ಹಾಗೂ 1999ರ ಚುನಾವಣೆಯಲ್ಲಿ ಮತ್ತೆ ಗೆಲವು ಸಾಧಿಸಿ ಪ್ರಭುತ್ವ ಸಾಧಿಸಿದರು. ಆದರೆ, 2004 ಹಾಗೂ 2008ರ ಚುನಾವಣೆಯಲ್ಲಿ ಅವರಿಗೆ ಕಹಿ ಅನುಭವ. ತಮ್ಮ ಸೋದರಳಿಯ ಗೋಪಾಲಕೃಷ್ಣ ಅವರಿಂದಲೇ ಸೋಲಪ್ಪಿದ್ದಾರೆ.
2013ರ ಚುನಾವಣೆ ಅವರ ಪಾಲಿನ 10ನೇ ಚುನಾವಣೆ. ಈ ಕುರುಕ್ಷೇತ್ರದಲ್ಲಿ ಗೆಲವು ಸಾಧಿಸಿ ತಮ್ಮ ರಾಜಕೀಯ ಅಭಿಯಾನ ಮುಗಿಸುವ ಆಲೋಚನೆ ಅವರದ್ದು. ಹೀಗಾಗಿಯೇ ಕಳೆದ 6 ತಿಂಗಳಿಂದಲೇ ಕ್ಷೇತ್ರ ತುಂಬ ಓಡಾಡಿಬಂದಿದ್ದಾರೆ.
ರಾಜಕೀಯಕ್ಕೆ ಅಣ್ಣ: ಜಿ. ಬಸವಣ್ಯಪ್ಪ ಸದ್ದುಮಾಡದ ರಾಜಕೀಯ ನಾಯಕ. 1962ರಲ್ಲಿ ಕಣಕ್ಕಿಳಿದು ಸೋಲೊಪ್ಪಿಕೊಂಡ ಬಸವಣ್ಯಪ್ಪ ನಂತರದ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ನಂತರ ಹೊಳೆಹೊನ್ನೂರು ಕ್ಷೇತ್ರಕ್ಕೆ ವರ್ಗಾವಣೆಗೊಂಡು 1978ರ ಚುನಾವಣೆ ಗೆದ್ದರು. 1985, 94ರಲ್ಲಿ ಗೆಲುವು ಪಡೆದರೆ 1999ರಲ್ಲಿ ಸೋಲುಂಡರು. 2004ರಲ್ಲಿ ಮತ್ತೆ ಗೆಲುವು ಪಡೆದರು. ಇದೀಗ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಇದು ಇವರ 8ನೇ ಚುನಾವಣೆ.
ತ್ರಿವಿಕ್ರಮ: ಹ್ಯಾಟ್ರಿಕ್ ಸೋಲು ಅನುಭವಿಸಿದರೂ ಛಲಬಿಡದ ತ್ರಿವಿಕ್ರಮನಂತೆ ಮಲೆನಾಡಿನ ಹಳ್ಳಿಹಳ್ಳಿ ತಿರುಗಿಬಂದ ತೀರ್ಥಹಳ್ಳಿಯ ಬಿಜೆಪಿ ನಾಯಕ ಆರಗ ಜ್ಞಾನೇಂದ್ರ ಹ್ಯಾಟ್ರಿಕ್ ಶಾಸಕರಾದರು. 1983, 85, 89ರ ಚುನಾವಣೆ ಕೈಕೊಟ್ಟಿತು. ಆದರೆ, 94, 99, 2004ರ ಚುನಾವಣೆ ಗೆಲುವು ತಂದುಕೊಟ್ಟಿತು. ಆದರೆ, ಪುನ- 2008ರಲ್ಲಿ ಸೋಲುಂಡರು. 2013ರ ಚುನಾವಣೆ ಅವರ ಪಾಲಿನ 8ನೇ ಚುನಾವಣೆ.
8ರ ಹಿಂದೆ: ಶಿಕಾರಿಪುರದಲ್ಲಿ ನೆಲೆ ಕಂಡುಕೊಂಡು ರಾಜ್ಯದಲ್ಲಿ ಪ್ರಥಮ ಬಿಜೆಪಿ ಸರ್ಕಾರ ರಚಿಸಿದ ಬಿ.ಎಸ್. ಯಡಿಯೂರಪ್ಪನರಿಗೂ ಇದು 8ನೇ ಚುನಾವಣೆ. 1983ರ ಮೊದಲ ಚುನಾವಣೆಯಲ್ಲೇ ಗೆಲುವಿನ ರುಚಿ ಕಂಡರು. 1985, 89, 94ರ ಚುನಾವಣೆ ಅವರನ್ನು ಗೆಲ್ಲಿಸಿದರೆ, 99ರಲ್ಲಿ ಮಾತ್ರ ಅವರ ಅತಿಯಾದ ಆತ್ಮವಿಶ್ವಾಸಕ್ಕೆ ಪೆಟ್ಟುಬಿದ್ದಿತು. ಆದರೆ, ಮತ್ತೆ ತಿರುಗಿಬಿದ್ದರೆ, ಸಂಘಟನೆ ಕಟ್ಟಿದರು. ಮರು ಚುನಾವಣೆ 2004 ಹಾಗೂ 2008ರಲ್ಲಿ ಮತ್ತೆ ಹಿಂದಿರುಗಿ ನೋಡಿದ್ದೇ ಇಲ್ಲ.
ಕಣದಲ್ಲಿರುವ ಮತ್ತೊಬ್ಬ ಹಿರಿಯ ಕರಿಯಣ್ಣ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಿಂದ ಈ ಬಾರಿ ಸ್ಪರ್ಧಿಸುತ್ತಿದ್ದು, ಇದು ಇವರ 7ನೇ ಚುನಾವಣೆ. 1985ರಲ್ಲಿ ಹೊಳೆಹೊನ್ನೂರು ಕ್ಷೇತ್ರದಲ್ಲಿ ಸೋಲುಕೊಂಡ ನಂತರ 89ರಲ್ಲಿ ಗೆಲುವಿನ ರುಚಿಕಂಡರು. ಆದರೆ 94ರಲ್ಲಿ ಸೋತರು. ಆದರೆ 99ರಲ್ಲಿ ಮತ್ತೆ ವಿಜಯ ಸಾಧಿಸಿದರು. 2004, 2008ರ ಚುನಾವಣೆ ಮಾತ್ರ ಅವರನ್ನು ಕೈ ಹಿಡಿಯಲಿಲ್ಲ. ಇದೀಗ ಮತ್ತೆ ಅಖಾಡಕ್ಕಿಳಿದಿದ್ದಾರೆ.
ಡಿಸಿಎಂ ಕೆ.ಎಸ್. ಈಶ್ವರಪ್ಪನವರಿಗೆ ಶಿವಮೊಗ್ಗ ಕ್ಷೇತ್ರ ಸಿಹಿ ಸುದ್ದಿಕೊಟ್ಟಿದ್ದೇ ಹೆಚ್ಚು. 1989ರಲ್ಲಿ ಚುನಾವಣೆಗೆ ಧುಮಿಕಿ ವಿಜಯಿಯಾದರು. 1999ರಲ್ಲಿ ಸೋಲುಂಡಿದ್ದು ಬಿಟ್ಟರೆ ನಂತರ ಸೋತಿಲ್ಲ. ಇದೀಗ 6ನೇ ಬಾರಿಗೆ ಅದೃಷ್ಟಪರೀಕ್ಷೆಗೆ ನಿಂತಿದ್ದಾರೆ.
ಅಪ್ಪಾಜಿಗೌಡ: ಅದೇ ರೀತಿ ಶಿವಮೊಗ್ಗ ನೆರೆಯ ಭದ್ರಾವತಿಯಲ್ಲಿ ಅತಿ ಹೆಚ್ಚು ಚುನಾವಣೆ ಎದುರಿಸಿದ್ದು ಅಪ್ಪಾಜಿಗೌಡರು. 1989ರಲ್ಲಿ ಸೋಲಿನೊಂದಿಗೆ ರಾಜಕೀಯ ಪ್ರವೇಶ ಮಾಡಿದ ಅವರು, 1994, 99ರಲ್ಲಿ ಗೆಲುವು ಪಡೆದು 2004, 2008ರಲ್ಲಿ ಸೋಲುಕಂಡರು. ತಾವು ಎದುರಿಸುತ್ತಿರುವ 6ನೇ ಚುನಾವಣೆಯಲ್ಲಿ ವಿಜಯ ಪತಾಕೆ ಹಾರಿಸಲೇಬೇಕೆಂದು ಹೊರಟಿದ್ದಾರೆ.
ಒಂದೂ ಗೆಲುವು ಕಾಣದ ಬಿ.ಆರ್. ಜಯಂತ್ ಸಾಗರದಲ್ಲಿ ಚಿರಪರಿಚಿತ. ವಿವಿಧ ಪಕ್ಷಗಳನ್ನು ಹೊಕ್ಕುಬಂದ ಅವರೀಗ ಕೆಜೆಪಿ ಅಭ್ಯರ್ಥಿ. 1983, 1989, 1999ರಲ್ಲಿ ಚುನಾವಣೆ ನಿಂತು ಒಮ್ಮೆ ಮಾತ್ರ ಠೇವಣಿ ಉಳಿಸಿಕೊಂಡಿದ್ದಾರೆ. ಇದು ಅವರ 4ನೇ ಚುನಾವಣೆ.
ಉಳಿದಂತೆ, ಭದ್ರಾವತಿಯಲ್ಲಿ ಸಂಗಮೇಶ್, ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್, ಸೊರಬದಲ್ಲಿ ಕುಮಾರ್ ಬಂಗಾರಪ್ಪ ತಮ್ಮ 4ನೇ ಬಾರಿ ಚುನಾವಣೆಗೆ ತಮ್ಮನ್ನು ತಾವು ಒಡ್ಡಿಕೊಂಡಿದ್ದಾರೆ. ಇವರೆಲ್ಲಾ ಹಿಂದಿನ ಚುನಾವಣೆಗಳಲ್ಲಿ ಸೋಲು ಹಾಗೂ ಗೆಲುವಿನ ರುಚಿಕಂಡವರೇ. ಸೊರಬದಲ್ಲಿ ಹರತಾಳು ಹಾಲಪ್ಪ, ಮಧುಬಂಗಾರಪ್ಪ, ಸಾಗರದಲ್ಲಿ ಬೇಳೂರು ಗೋಪಾಲಕೃಷ್ಣ ಮೂರನೇ ಚುನಾವಣೆ ಎದುರಿಸುತ್ತಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಕೆ.ಜಿ. ಕುಮಾರಸ್ವಾಮಿ ಒಮ್ಮೆ ಗೆದ್ದಿದ್ದು, ಎರಡನೇ ಚುನಾವಣೆ ಎದುರಿಸುತ್ತಿದ್ದಾರೆ. ಶಾರದಾ ಪೂರ್ಯನಾಯ್ಕ, ಶಿವಮೊಗ್ಗದ ಜೆಡಿಎಸ್ ಅಭ್ಯರ್ಥಿ ಶ್ರೀಕಾಂತ್ ಒಂದು ಚುನಾವಣೆ ಸೋತಿದ್ದು, ಎರಡನೇ ಚುನಾವಣೆ ಎದುರಿಸುತ್ತಿದ್ದಾರೆ.
ಇವರೆಲ್ಲರ ಮಧ್ಯೆ ತೀರ್ಥಹಳ್ಳಿಯ ಕೆಜೆಪಿ ಅಭ್ಯರ್ಥಿ ಮಂಜುನಾಥ ಗೌಡ, ಶಿವಮೊಗ್ಗದ ಕೆಜೆಪಿ ಅಭ್ಯರ್ಥಿ ರುದ್ರೇಗೌಡ, ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಪ್ರಸನ್ನಕುಮಾರ್ ಮೊದಲ ಚುನಾವಣೆ ಎದುರಿಸುತ್ತಾರೆ.
- ಶ್ರೀಕಾಂತ ಭಟ್