ನೀರು ಪೂರೈಕೆಗೆ ಆಗ್ರಹಿಸಿ ಮನವಿ
ಕ.ಪ್ರ.ವಾರ್ತೆ, ಸಾಗರ, ಏ.8
ನಗರ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ನಗರ ಸಭೆಯಿಂದ ಹೆಚ್ಚುವರಿ ಟ್ಯಾಂಕರ್ ಮೂಲಕ ನೀರು ಸರಬರಾಜು ಹಾಗೂ ಕೊಳವೆಬಾವಿಗಳನ್ನು ಕೊರೆಯುವಂತೆ ಒತ್ತಾಯಿಸಿ ನಗರಸಭೆ ಕಾಂಗ್ರೆಸ್ ಸದಸ್ಯರ ನಿಯೋಗ ಸೋಮವಾರ ಪೌರಾಯುಕ್ತರಿಗೆ ಮನವಿ ಸಲ್ಲಿಸಿತು.
ಹಿಂದಿನ ಆಡಳಿತದ ದೂರಾಲೋಚನೆ ಕೊರತೆಯಿಂದ ಬಸವನಹೊಳೆ ಡ್ಯಾಂ ಪೂರ್ಣ ಬತ್ತಿ ಹೋಗಿದ್ದು, ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ನಗರಸಭೆ ಸಾಮಾನ್ಯ ಸಭೆಯಲ್ಲಿ ಹಿಂದಿನ ಬೇಸಿಗೆಯಲ್ಲಿಯೇ ಡ್ಯಾಂ ಹೂಳೆತ್ತುವ ಮೂಲಕ ನೀರು ಸಂಗ್ರಹ ಸಾಮಥ್ರ್ಯವನ್ನು ಹೆಚ್ಚಿಸುವಂತೆ ಮನವಿ ಮಾಡಿದ್ದರೂ ಅದಕ್ಕೆ ಆಡಳಿತ ನಡೆಸುವವರು ಕಿವಿಗೊಡಲಿಲ್ಲ. ಅವರ ನಿರ್ಲಕ್ಷ್ಯತನದ ಫಲವನ್ನು ಈಗ ಜನರು ಅನುಭವಿಸುವಂತೆ ಆಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಸಮರ್ಪಕ ಪೂರೈಕೆ ಇಲ್ಲ: ಬಡಾವಣೆಗಳಿಗೆ ನೀರು ಸಮರ್ಪಕವಾಗಿ ಪೂರೈಕೆ ಆಗುತ್ತಿಲ್ಲ. ಈಗಾಗಲೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆಯನ್ನು ನಗರಸಭೆ ಮಾಡುತ್ತಿದ್ದರೂ, ಅದು ಪರಿಣಾಮಕಾರಿಯಾಗುತ್ತಿಲ್ಲ. ಜನರ ನೀರಿನ ಬವಣೆಯನ್ನು ತಪ್ಪಿಸಲು ನಗರ ವ್ಯಾಪ್ತಿಯಲ್ಲಿ ಇನ್ನಷ್ಟು ಟ್ಯಾಂಕರ್‌ಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಕೆ ಮಾಡಬೇಕು. ನಗರದ ವಿವಿಧ ಪ್ರದೇಶಗಳಲ್ಲಿ 10 ಕೊಳವೆ ಬಾವಿ ತೆರೆಯುವ ಉದ್ದೇಶ ಹೊಂದಿದ್ದು, ಅದನ್ನು ತಕ್ಷಣ ಕಾರ್ಯರೂಪಕ್ಕೆ ತರಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸುವುದು ಎಂದು ಎಚ್ಚರಿದೆ.
ಮನವಿ ಸ್ವೀಕರಿಸಿ ಮಾತನಾಡಿದ ಪೌರಾಯುಕ್ತ ನರಸಿಂಹಮೂರ್ತಿ ಈಗಾಗಲೇ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಅಗತ್ಯ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ನಗರಸಭೆ ಟ್ಯಾಂಕರ್‌ಗಳ ಜೊತೆಗೆ ಹೆಚ್ಚುವರಿಯಾಗಿ 6 ಟ್ಯಾಂಕರಗಳನ್ನು ಬಾಡಿಗೆ ಪಡೆದಿದ್ದು, ಹೊರ ಬಡಾವಣೆಗಳಿಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡಲಾಗುತ್ತಿದೆ ಎಂದರು.
ಕೊಳವೆಬಾವಿಗಳನ್ನು ಕೊರೆಯಲು ಜಾಗ ಗುರುತಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಕುಡಿಯುವ ನೀರನ್ನು ಇತರೆ ಉದ್ದೇಶಕ್ಕೆ ಬಳಸಿಕೊಂಡರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.