ಮಕ್ಕಳಲ್ಲಿ ಉತ್ತಮ ನಡುವಳಿಕೆ ಬೆಳೆಸಿ: ಸೀತಾಲಕ್ಷಿ
ಕ.ಪ್ರ. ವಾರ್ತೆ, ಶಿವಮೊಗ್ಗ, ಏ.8
ಮಕ್ಕಳು ತಪ್ಪುದಾರಿಗೆ ಹೋಗುತ್ತಿದ್ದರೆ, ಅದಕ್ಕೆ ಪೋಷಕರ ಪಾತ್ರ ಶೇ.75 ಭಾಗವಿರುತ್ತದೆ. ಹುಟ್ಟಿದ ಮಗುವಿನಿಂದ ಉತ್ತಮ ಸಂಸ್ಕಾರ ಒಳ್ಳೆಯ ವ್ಯಕ್ತಿತ್ವ ಹಾಗೂ ಪೋಷಕರ ನಡವಳಿಕೆಗಳು ಮಕ್ಕಳ ಮನಸ್ಸಿಗೆ ತುಂಬಾ ಪರಿಣಾಮವನ್ನು ಬೀರುತ್ತದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಸದಸ್ಯೆ ಸೀತಾಲಕ್ಷ್ಮಿ ತಿಳಿಸಿದರು.
ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜು ಯುವ ರೆಡ್ ಕ್ರಾಸ್ ಘಟಕವು ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ವ್ಯಕ್ತಿತ್ವ ವಿಕಸನ ಮತ್ತು ಹದಿಹರೆಯದ ಆರೋಗ್ಯ ಸಮಸ್ಯೆ ಮತ್ತು ಜಾಗೃತಿ ಕುರಿತು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಒಂದು ದಿನದ ಅಧ್ಯಯನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತಮ ಆರೋಗ್ಯದಿಂದ ಉತ್ತಮ ಸಮಾಜ ಸಾಧ್ಯ. ಇಂದಿನ ವಿದ್ಯಾರ್ಥಿಗಳಿಗೆ ಎಷ್ಟು ಅವಕಾಶಗಳು ಇವೆಯೋ ಅಷ್ಟೇ ಅಘಾತಗಳೂ ಇವೆ. ಆಧುನಿಕ ಕಾಲದಲ್ಲಿ ಯುವಜನತೆ ಹೆಚ್ಚು ದುರ್ವ್ಯಸನಿಗಳಾಗುತ್ತಿರುವುದು ವಿಷಾದನೀಯ. ಆದ್ದರಿಂದ, ವಿದ್ಯಾರ್ಥಿಗಳು ಉತ್ತಮ ಜೀವನ ಕೌಶಲ್ಯಗಳನ್ನು ಬೆಳಸಿಕೊಳ್ಳಬೇಕೆಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಡಾ.ವಿ.ಎಲ್.ಎಸ್. ಕುಮಾರ್ ಮಾತನಾಡಿ, ಉತ್ತಮ ಆಹಾರ ಅಭ್ಯಾಸ, ಸ್ವಚ್ಛತೆ, ಆಧ್ಯಾತ್ಮ, ಧ್ಯಾನ, ಸಕ್ರಿಯವಾದ ಜೀವನ, ಮನರಂಜನೆ, ಇವುಗಳ ಕಡೆಗೆ ಗಮನ ಹರಿಸಿ ಉತ್ತಮ ಆರೋಗ್ಯವನ್ನು ರೂಪಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಹ್ಯಾದ್ರಿ ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಎಸ್. ಜಯದೇವಪ್ಪ ಮಾತನಾಡಿ, ಆರೋಗ್ಯಪೂರ್ಣ ಮನಸ್ಸು ಉತ್ತಮ ಜೀವನವನ್ನು ಕಟ್ಟುತ್ತದೆ. ವಿಕಾರ ಮನಸ್ಸು ದೇಶದ ಅಭದ್ರತೆಯನ್ನು ಮಾಡುತ್ತದೆ. ಆದ್ದರಿಂದ ಇಂತಹ ಕಾರ್ಯಾಗಾರಗಳು ಯುವ ಜನತೆಗೆ ಅತ್ಯಂತ ಪರಿಣಾಮ ಬೀರುತ್ತದೆ ಎಂದರು.
ವೇದಿಕೆಯಲ್ಲಿ ಯುವ ರೆಡ್‌ಕ್ರಾಸ್ ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ಪ್ರಹ್ಲಾದಪ್ಪ, ಅಂತರಾಷ್ಟ್ರೀಯ ತರಬೇತುದಾರ ಪ್ರೊ. ವಿಲಿಯಂ ಡಿಸೋಜಾ ಇದ್ದರು.