ವಿಐಎಸ್ಎಲ್ ಉತ್ಪಾದನೆ ಹಂತಹಂತವಾಗಿ ಕಡಿತ
ಕ.ಪ್ರ. ವಾರ್ತೆ, ಭದ್ರಾವತಿ, ಏ.8-
ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಸ್ಥಾವರದಲ್ಲಿ (ವಿಐಎಸ್ಎಲ್) ಉತ್ಪಾದನೆಯನ್ನು ಸ್ಥಗಿತಗೊಳಿಸಿಲ್ಲ. ಬದಲಾಗಿ ಪ್ರತಿಕೂಲಕರ ಮಾರುಕಟ್ಟೆ ಸನ್ನಿವೇಶಕನ್ನುಗುಣವಾಗಿ ಉತ್ಪಾದನೆಯನ್ನು ಹಂತಹಂತವಾಗಿ ಕಡಿತಗೊಳಿಸಲಾಗಿದೆ ಎಂದು ವಿಐಎಸ್ಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಜೆ.ಎನ್.ಚಂದ್ರಹಾಸ ಕನ್ನಡಪ್ರಭ ಪತ್ರಿಕೆಗೆ ತಿಳಿಸಿದ್ದಾರೆ.
ವಿಷಯ ಕುರಿತಂತೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ವಿಐಎಸ್ಎಲ್ ಕಷ್ಟಕರವಾದ ಪರಿಸ್ಥಿತಿಯನ್ನು ಎದುರಿಸುತ್ತಿರುವುದು ನಿಜ. ಅದೇರೀತಿ ವಿಶ್ವ ಉಕ್ಕು ಮಾರುಕಟ್ಟೆಯಲ್ಲೂ ಕುಸಿತ ಉಂಟಾಗಿದೆ. ಇಂತಹ ಸನ್ನಿವೇಶದಲ್ಲಿ ಉತ್ಪಾದನೆಯನ್ನು ಸಮದೂಗಿಸುವುದೊಂದೇ ನಷ್ಟವನ್ನು ತಗ್ಗಿಸಲು ಇರುವ ಪರಿಹಾರ. ಬೇಡಿಕೆ ಮತ್ತು ಸರಬರಾಜು ಪರಿಸ್ಥಿತಿ ಸುಧಾರಿಸುವ ವರೆಗೂ ಇದನ್ನು ಅನುಸರಿಸಬೇಕಾಗಿರುವುದು ಅನಿವಾರ್ಯವೆಂದು ಅವರು ಸ್ಪಷ್ಟಪಡಿಸಿದರು.
ಆಸ್ಟ್ರೇಲಿಯ ತಜ್ಞರು: ಫೋರ್ಜ್ ಸ್ಥಾವರದಲ್ಲಿ ಯಾಂತ್ರಿಕ ತೊಂದರೆ ಉದ್ಭವಿಸಿರುವುದನ್ನು ಒಪ್ಪಿಕೊಂಡ ಅವರು ಅದನ್ನು ಸರಿಪಡಿಸಲು ಆಸ್ಟ್ರೇಲಿಯಾದಿಂದ ಪರಿಣಿತರನ್ನು ಕರೆಸಲಾಗುತ್ತಿದೆ. ಇಂತಹ ಯಾಂತ್ರಿಕ ತೊಂದರೆ ಸಾಧಾರಣವಾಗಿ ಸ್ಥಾವರಗಳಲ್ಲಿ ಉಂಟಾಗುವುದು ಸಹಜ ಎಂದರು.
ಕೇಂದ್ರ ಸರ್ಕಾರ ವಿಐಎಸ್ಎಲ್ ಕಾರ್ಖಾನೆಗೆ ಬಳ್ಳಾರಿ ಜಿಲ್ಲೆಯಲ್ಲಿನ ಸಂಡೂರು ತಾಲ್ಲೂಕಿನಲ್ಲಿ ಮಂಜೂರು ಮಾಡಿರುವ 140 ಹೆಕ್ಟೇರ್ ಕಬ್ಬಿಣದ ಅದಿರು ಗಣಿ ಪ್ರದೇಶದ ಸಮೀಕ್ಷೆಯನ್ನು ಕರ್ನಾಟಕ ಸರ್ಕಾರದ ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕರು ಸಮೀಕ್ಷೆ ಪೂರೈಸಿದ್ದು ವಿಐಎಸ್ಎಲ್ ಶೀಘ್ರದಲ್ಲೇ ಸ್ವಂತ ಗಣಿ ಹೊಂದಲಿದೆ. ಇದು ಸಾಕಾರವಾದರೆ ಭಾರತೀಯ ಉಕ್ಕು ಪ್ರಾಧಿಕಾರವು ಕಾರ್ಖಾನೆಯ ನವೀಕಕರಣಕ್ಕೆ ಹಣವನ್ನು ಹೂಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದು ಸಹ ಕಾರ್ಯಗತವಾದರೆ ವಿಐಎಸ್ಎಲ್ ತನ್ನ ಗತವೈಭವವನ್ನು ಮರಳಿ ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಆಶಾಭಾವದಿಂದ ನುಡಿದರು.