ನುಂಗಲಾರದ ತುತ್ತಾದ ಮಾದರಿ ನೀತಿ ಸಂಹಿತೆ
ಶಿರಾಳಕೊಪ್ಪ: ಚುನಾವಣಾ ಆಯೋಗ ತಂದಿರುವ ಮಾದರಿ ನೀತಿ ಸಂಹಿತೆಯಿಂದ ಚುನಾವಣೆಗೆ ಸ್ಪರ್ಧಿಸ ಬಯಸಿರುವ ಅಭ್ಯರ್ಥಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ತಾಲೂಕಿನ ಚುನಾವಣಾ ಅಧಿಕಾರಿ ಗೋಪಾಲ ನೇತೃತ್ವದಲ್ಲಿ ಚುನಾವಣಾ ಅಧಿಕಾರಿಗಳು ಪ್ರಚಾರ ಸಭೆಯಲ್ಲಿ ಹದ್ದಿನಕಣ್ಣು ಇಟ್ಟಿರುವುದರಿಂದ ರಾಜಕೀಯ ಪಕ್ಷಗಳ ಧುರೀಣರಿಗೆ ಸಮಸ್ಯೆಯಾಗಿದೆ. ಈವರೆಗೆ ರಾಜಕೀಯ ಪಕ್ಷದ ಸಭೆಗಳಿಗೆ ಗ್ರಾಮಗಳಿಂದ ವಾಹನದಲ್ಲಿ ಮತದಾರರನ್ನು ಕರೆತಂದು ಅವರಿಗೆ ಉಪಹಾರ ಇಲ್ಲವೇ ಊಟದ ವ್ಯವಸ್ಥೆ ಕಲ್ಪಿಸಿ ಸಭೆಯ ನಂತರ ಅವರನ್ನು ವಾಹನಗಳಲ್ಲಿ ಅವರವರ ಗ್ರಾಮಗಳಿಗೆ ತಲುಪಿಸುತ್ತಿದ್ದರು.
ಪ್ರತಿ ಕಾರ್ಯಕ್ರಮಗಳಲ್ಲಿ ಚುನಾವಣಾ ಅಧಿಕಾರಿಗಳು ಪ್ರತಿಯೊಂದು ಅಂಶಗಳನ್ನು ದಾಖಲಿಸುತ್ತಿರುವದರಿಂದ ಇಂದು ಆ ಕಾರ್ಯ ಮಾಡಲಾಗದೇ ಅಭ್ಯರ್ಥಿಗಳು ಅನ್ಯ ಮಾರ್ಗ ಹುಡುಕುತ್ತಾ ತಮ್ಮ ಕಾರ್ಯಸಾಧನೆ ಕಡೆಗೆ ಗಮನಹರಿಸುತ್ತಿವೆ.
ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಸಂಯುಕ್ತವಾಗಿ ಮತದಾರರಿಗೆ ಮಾಹಿತಿ ಕೊಡುತ್ತಾ ಏನಾದರೂ ಅಭ್ಯರ್ಥಿಗಳು ಆಸೆ ಆಮಿಷ ಒಡ್ಡಿದರೆ ತಮ್ಮ ಗಮನಕ್ಕೆ ತರುವಂತೆ ತಿಳಿಸಿದ್ದಾರೆ.
ಗ್ರಾಮಗಳಲ್ಲಿ ಆಮಿಷ ಒಡ್ಡಿದರೆ ತಕ್ಷಣ ತಾಲೂಕು ಚುನಾವಣಾಧಿಕಾರಿ ಗೋಪಾಲ ಅವರಿಗೆ ಪೋನ್ ಮಾಡುವಂತೆ ವಿನಂತಿಸಿದ್ದಾರೆ. ಮೊ. 9480876001 ಗೆ ಸಂಪರ್ಕಿಸಬಹುದು.