ಬಿಪಿಗೆ ಉತ್ತಮ ಜೀವನ ಶೈಲಿಯೇ ಔಷಧ
ಕ.ಪ್ರ.ವಾರ್ತೆ, ಭದ್ರಾವತಿ, ಏ.9
ಸಂಜೀವಿನಿ ವೇದಿಕೆ ಹಾಗೂ ಮಹಿಳಾ ಆರೋಗ್ಯ ವೇದಿಕೆಯಿಂದ ವಿಶ್ವ ಆರೋಗ್ಯ ದಿನಾಚರಣೆಯನ್ನು ಇತ್ತೀಚೆಗೆ ನಯನ ಆಸ್ಪತ್ರೆ ಸಭಾಂಗಣದಲ್ಲಿ ಆಚರಿಸಲಾಯಿತು.
ವಿಶ್ವ ಆರೋಗ್ಯ ದಿನದ ಧ್ಯೇಯ ಘೋಷಣೆಯಾದ ಅಧಿಕ ರಕ್ತದೊತ್ತಡ ಕುರಿತು ಸಂಜೀವಿನಿ ವೇದಿಕೆ ಅಧ್ಯಕ್ಷ ಡಾ. ಕೃಷ್ಣ ಎಸ್. ಭಟ್ ಮಾತನಾಡಿ, ರಕ್ತದ ಒತ್ತಡಕ್ಕೆ ಕೇವಲ ಔಷಧೋಪಚಾರವೇ ಪರಿಹಾರವಲ್ಲ. ಆರೋಗ್ಯಕರ ಜೀವಶೈಲಿಯೂ ಬಹುಮುಖ್ಯ ಎಂದರು.
ರಕ್ತದೊತ್ತಡ ಮೌನ ಕೊಲೆಗಾರನಾಗಿದ್ದು, ಬಾಹ್ಯ ಲಕ್ಷಣಗಳನ್ನು ತೋರ್ಪಡಿಸದೆ ಹೃದಯಾಘಾತ, ಪಾರ್ಶ್ವವಾಯು, ಮೂತ್ರಪಿಂಡಗಳ ವೈಫಲ್ಯ, ಮೆದುಳು ರಕ್ತಸ್ರಾವ, ಕಣ್ಣಿನ ತೊಂದರೆಯನ್ನುಂಟುಮಾಡಬಹುದು. ಆದ್ದರಿಂದ ಕಾಲಕಾಲಕ್ಕೆ ರಕ್ತದೊತ್ತಡ ತಪಾಸಣೆ ಅತಿ ಮುಖ್ಯ ಎಂದು ಅವರು ಹೇಳಿದರು.
ತೂಕ ನಿಯಂತ್ರಣ: ದೇಹದ ತೂಕದಲ್ಲಿ ನಿಯಂತ್ರಣ, ಕೊಬ್ಬಿನ ಆಹಾರ ಸೇವನೆಯಲ್ಲಿ ನಿಯಂತ್ರಣ, ನಾರಿನಂಶಗಳ ಸೇವನೆ, ನಿತ್ಯ ನಡಿಗೆ, ಧ್ಯಾನ, ಯೋಗ ಇತ್ಯಾದಿಗಳಿಂದ ರಕ್ತದೊತ್ತಡ ನಿಯಂತ್ರಿಸಬಹುದು. ಧೂಮಪಾನ, ಮದ್ಯಪಾನ, ಸ್ಥೂಲಕಾಯ, ಶ್ರಮರಹಿತ ಜೀವನದಿಂದ ದೂರವಿರಬೇಕೆಂದು ಅವರು ತಿಳಿಸಿದರು.
ಮಹಿಳಾ ಆರೋಗ್ಯ ವೇದಿಕೆ ಸಂಚಾಲಕಿ ಡಾ. ವೀಣಾ ಎಸ್. ಭಟ್ ಮಾತನಾಡಿ, ಗರ್ಭಿಣಿಯರು ದಿನನಿತ್ಯ ಮಾಡಬೇಕಾದ ಸರಳ ಯೋಗಾಸನ ಹಾಗೂ ವ್ಯಾಯಾಮ, ಉಸಿರಾಟದ ಅಭ್ಯಾಸಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿಕೊಟ್ಟರು.
ಗರ್ಭಿಣಿಯರು ಹೆಚ್ಚಾಗಿ ಹಸಿರು ಸೊಪ್ಪು ತರಕಾರಿ ಸೇವಿಸುವುದರಿಂದ ಹಾಗೂ ದಿನನಿತ್ಯ ಯೋಗ ಮತ್ತು ಉಸಿರಾಟದ ಅಭ್ಯಾಸ ಮಾಡಿ ಮಾನಸಿಕ ಒತ್ತಡ ನಿಯಂತ್ರಿಸುವುದರಿಂದ ಅಧಿಕ ರಕ್ತದೊತ್ತಡ ಬಾರದ ಹಾಗೆ ತಡೆಯಬಹುದು ಎಂದರು.
ಪ್ರತಿ ತಿಂಗಳ ಮೊದಲ ಭಾನುವಾರ ನಯನ ಆಸ್ಪತ್ರೆಯಲ್ಲಿ ಉಚಿತವಾಗಿ ಗರ್ಭಿಣಿಯರಿಗೆ ನಡೆಸುವ ಶಿಕ್ಷಣ ಹಾಗೂ ಯೋಗ ತರಬೇತಿಯ ಪ್ರಯೋಜನ ಪಡೆಯಲು ತಿಳಿಸಿದರು.
ನಯನ ಆಸ್ಪತ್ರೆಯ ನೇತ್ರತಜ್ಞ ಡಾ. ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.