ಮತದಾನ ಹೆಚ್ಚಳಕ್ಕೆ ಪ್ರತಿಜ್ಞಾ ವಿಧಿ
ವಿಶೇಷ ವರದಿ
ಕ.ಪ್ರ.ವಾರ್ತೆ ಶಿವಮೊಗ್ಗ ಏ.9
ಮತದಾನ ಪ್ರಮಾಣವನ್ನು ಹೆಚ್ಚಿಸಲು ಚುನಾವಣಾ ಆಯೋಗ ಕೈಗೊಂಡಿರುವ ಪ್ರಯತ್ನಗಳು ಒಂದೆರಡಲ್ಲ. ಅದಕ್ಕೆ ಹೊಸ ಸೇರ್ಪಡೆ ಪ್ರತಿಜ್ಞಾ ವಿಧಿ ಸ್ವೀಕರಣೆ.
ನಿಜವಾದ ಮತದಾರರು ಮನೆಯಲ್ಲಿ ಕುಳಿತಿರುತ್ತಾರೆ. ಅವರನ್ನು ಸಂಪರ್ಕಿಸುವುದಕ್ಕೆ ಬಹು ದೊಡ್ಡ ಮಾನವ ಸಂಪನ್ಮೂಲವೇ ಬೇಕು. ಅವರು ಮನೆಮನೆಗೆ ಹೋಗಿ, ಭೌತಿಕವಾಗಿ ಮಾತನಾಡಿ, ಮತದಾನ ಮಾಡಿ ಎಂದು ಮನವೊಲಿಸುವುದು ಸುಲಭದ ಕೆಲಸವಲ್ಲ. ಆದರೆ, ಅವರನ್ನು ಸಂಪರ್ಕಿಸದೇ ಬಿಡುವಂತೆಯೂ ಇಲ್ಲ. ಹಾಗಾಗಿ ಮತದಾರರನ್ನು ಅವರ ಮಕ್ಕಳ ಮೂಲಕ ಸಂಪರ್ಕಿಸುವ ಪ್ರಯತ್ನಕ್ಕೆ ಚುನಾವಣಾ ಆಯೋಗವು ಕೈಹಾಕಿದೆ.
ಸ್ವೀಪ್ (ಸಿಸ್ಟಮೆಟಿಕ್ ವೋಟರ್ಸ್ ಎಜ್ಯುಕೇಷನ್ ಅಂಡ್ ಎಲೆಕ್ಟ್ರಾಲ್ ಪಾರ್ಟಿಸಿಪೇಷನ್) ಯೋಜನೆ ಅಡಿಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಹೀಗಿದೆ ವಿಧಾನ: ಮತದಾರ ಪೋಷಕರಿಗೆ ಪ್ರತಿಜ್ಞಾ ವಿಧಿಯ ಮಾದರಿಯನ್ನು ಮುದ್ರಿಸಿ ಅದನ್ನು ಪ್ರತಿ ಶಾಲೆಯ ಮಕ್ಕಳ ಮೂಲಕ ಪೋಷಕರಿಗೆ ತಲುಪಿಸಲಾಗುವುದು. ಈ ಪ್ರತಿಜ್ಞಾ ವಿಧಿಯು ಎರಡು ಭಾಗಗಳನ್ನು ಹೊಂದಿದೆ. ಮೊದಲನೇ ಭಾಗವು ವಿದ್ಯಾರ್ಥಿ ಪಾಲಿನ ಪ್ರತಿಜ್ಞಾ ವಿಧಿ, ಎರಡನೇ ಭಾಗವು ಪೋಷಕರ ಪಾಲಿನ ಪ್ರತಿಜ್ಞಾ ವಿಧಿ.
ಪೋಷಕರ ಪ್ರತಿಜ್ಞಾ ವಿಧಿ ಹೀಗಿದೆ: ಪ್ರಜಾಪ್ರಭುತ್ವದಲ್ಲಿ ವಿಶ್ವಾಸವುಳ್ಳ ಭಾರತದ ಪೌರರಾದ ನಾವು ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ, ನ್ಯಾಯಸಮ್ಮತ, ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆಂದು ಹಾಗೂ ಮೇ 5, 2013ರಂದು ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ನಿರ್ಭೀತರಾಗಿ ಧರ್ಮ, ಜನಾಂಗ, ಜಾತಿ, ಮತ ಭಾಷೆ ಅಥವಾ ಯಾವುದೇ ಪ್ರೇರೇಪಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೇ ಮತ ಚಲಾಯಿಸುತ್ತೇವೆಂದು ಈ ಮೂಲಕ ಪ್ರತಿಜ್ಞಾ ಸ್ವೀಕರಿಸುತ್ತೇವೆ.
ನಂತರವೇನು: ಮತ್ತ ಮಕ್ಕಳ ಮೂಲಕ ಕೈಸೇರುವ ಈ ಪ್ರತಿಜ್ಞಾ ವಿಧಿಗೆ ಸಹಿ ಹಾಕಿ ಇದನ್ನು ಮಕ್ಕಳು ಮತ್ತೆ ಶಾಲೆಗೆ ವಾಪಸು ತಂದು ಶಿಕ್ಷಕರ ಕೈಗೆ ಕೊಡುತ್ತಾರೆ. ನಂತರ ಇದು ಅವರ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪುತ್ತದೆ.
ಇದೇ ರೀತಿ ಹಾಸ್ಟೆಲ್ಗಳಲ್ಲಿರುವ ನಿವಾಸಿಗಳಿಗೂ ಸಹ ಈ ಪ್ರತಿಜ್ಞಾ ವಿಧಿಯನ್ನು ತಲುಪಿಸಲಾಗುವುದು. ಅವರು ಮನೆಗೆ ಹೋದಾಗ ಪೋಷಕರಿಂದ ಸಹಿ ಹಾಕಿಸಿಕೊಂಡು ವಾರ್ಡ್ನ್ಗೆ ವಾಪಸು ನೀಡುತ್ತಾರೆ. ನಂತರ ಜಿಲ್ಲಾಧಿಕಾರಿ ಕಚೇರಿ ತಲುಪುತ್ತದೆ.
ಸೀಲುಗಳು: ಮತದಾರರ ಜಾಗೃತಿಗಾಗಿ ಇನ್ನೊಂದು ವಿಶೇಷ ಕಾರ್ಯಕ್ರಮವನ್ನು ಆಯೋಗ ರೂಪಿಸಿದೆ. ಸಾರ್ವಜನಿಕರಿಗೆ ನೀಡುವ ಸರ್ಕಾರಿ ದಾಖಲೆಗಳ ಮೇಲೆ ಮತದಾನ ಮಾಡಲು ಮರೆಯಬೇಡಿ ಎಂಬ ಘೋಷಣೆಯನ್ನು ರಬ್ಬರ್ಸ್ಟಾಂಪ್ ಮೂಲಕ ಮೂಡಿಸಲಾಗುತ್ತದೆ.
ಎಲ್ಲಾ ಗ್ರಾಮ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಅಟಲ್ ಜನಸ್ನೇಹಿ ಕೇಂದ್ರ, ಅಂಚೆ ಕಚೇರಿ, ಬ್ಯಾಂಕ್ಗಳು, ರೈತ ಸಂಪರ್ಕ ಕೇಂದ್ರಗಳಿಗೆ ಈ ರಬ್ಬರ್ ಸ್ಟಾಂಪ್ಗಳನ್ನು ನೀಡಲಾಗಿದೆ. ಚುನಾವಣೆ ಮುಗಿಯುವವರೆಗೂ ಈ ಘೋಷಣೆ ಎಲ್ಲಾ ಸರ್ಕಾರಿ ದಾಖಲೆಗಳ ಮೇಲೆ ಇರುತ್ತದೆ.
ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹಿಮಂತರಾಜು, ಮತದಾರರ ಜಾಗೃತಿಗಾಗಿ ವಿಶೇಷ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಮತದಾನ ಪ್ರಮಾಣವನ್ನು ಹೆಚ್ಚಿಸುವುದು ನಮ್ಮ ಗುರಿ ಎನ್ನುತ್ತಾರೆ.