ರೈತರ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ
ಶಿವಮೊಗ್ಗ: ಅರಣ್ಯ ಭೂಮಿ ತೆರವು ಕಾರ್ಯಚರಣೆ ವೇಳೆ ಬಂಧಿಸಿರುವ ಭದ್ರಾವತಿ ತಾಲೂಕಿನ ಬದನೆಹಾಳ್ ಗ್ರಾಮದ ರೈತರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಇಲ್ಲಿನ ಸರ್ವೆ ನಂ 35 ಮತ್ತು 7ರಲ್ಲಿನ ಜಮೀನುಗಳಲ್ಲಿ ಹಲವಾರು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವ ರೈತರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಏಕಾಏಕಿ ಒಕ್ಕಲೆಬ್ಬಿಸಲು ಮುಂದಾಗಿದ್ದರು. ಇದನ್ನು ಪ್ರತಿಭಟಿಸಿದ ರೈತರ ಮೇಲೆ ಲಾಠಿ ಪ್ರಹಾರ ಹಾಗೂ ಗಾಳಿಯಲ್ಲಿ ಗುಂಡು ಹಾರಿಸಲಾಗಿತ್ತು. ಈ ವೇಳೆ ಮಹಿಳೆಯರು ಸೇರಿದಂತೆ ಸುಮಾರು 61 ಜನ ರೈತರನ್ನು ಬಂಧಿಸಲಾಗಿದ್ದು, ಬಂಧಿತ ರೈತರನ್ನು ಕೂಡಲೇ ಬಿಡುಗಡೆ ಮಾಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಮಹಿಳೆಯರ ಮೇಲೂ ಹಲ್ಲೆ: ಬದನೆಹಾಳ್ ಗ್ರಾಮದಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶದ ಮಾರ್ಗಸೂಚಿಗಳನ್ನು ಕಾನೂನು ಪ್ರಕಾರ ಪಾಲಿಸದ ಅರಣ್ಯ ಇಲಾಖೆ ರೈತರ ಮೇಲೆ ದೌರ್ಜನ್ಯ ನಡೆಸಿದ್ದು, ಮಹಿಳೆಯರ ಮೇಲೆಯೂ ಕೂಡ ಹಲ್ಲೆ ನಡೆಸಿದ್ದಾರೆ. ಅಲ್ಲದೇ ರೈತರ ವಿರುದ್ಧ ಸುಳ್ಳು ಕೇಸ್ ದಾಖಲಿಸಿ ಬಂಧಿಸಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ವರ್ತನೆ ಖಂಡನೀಯ: ಜಿಲ್ಲೆಯ ಬಹುತೇಕ ಎಲ್ಲೆಡೆ ರೈತರು ಅರಣ್ಯ ಭೂಮಿ ಸಾಗುವಳಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಈ ಬಗ್ಗೆ ಇಲ್ಲಿಯವರೆಗೂ ತಲೆಕೆಡಿಸಿಕೊಳ್ಳದ ಅರಣ್ಯ ಇಲಾಖೆ ಅಧಿಕಾರಿಗಳು ಇದೀಗ ಏಕಾಏಕಿ ಬದನೆಹಾಳ್ ಗ್ರಾಮದಲ್ಲಿನ ಸಾಗುವಳಿ ರೈತರನ್ನು ಒಕ್ಕಲೆಬ್ಬಿಸಲು ಕ್ರಮಕೈಗೊಂಡಿದ್ದಾರೆ. ಅಲ್ಲದೇ ಚುನಾವಣೆ ವೇಳೆ ತೆರವು ಕಾರ್ಯಚರಣೆಗೆ ಮುಂದಾಗಿರುವ ಅರಣ್ಯ ಅಧಿಕಾರಿಗಳ ವರ್ತನೆ ಖಂಡನೀಯ ಎಂದು ಪ್ರತಿಭಟನಕಾರರು ಆರೋಪಿಸಿದರು.
ಜಿಲ್ಲಾ ಅರಣ್ಯ ಸಮಿತಿ ರಚಿಸಬೇಕು: ಇಂತಹ ತೆರವು ಕಾರ್ಯಚರಣೆ ಕೈಗೊಳ್ಳುವ ಮೊದಲು ಸುಪ್ರೀ ಕೋರ್ಟ್ ಆದೇಶದ ಪ್ರಕಾರ ಗ್ರಾಮ ಅರಣ್ಯ ಸಮಿತಿ ರಚಿಸಿ, ಈ ಸಮಿತಿಯಲ್ಲಿ ಸ್ಥಳೀಯ ಶಾಸಕರನ್ನೊಳಗೊಂಡ ತಾಲೂಕು ಸಮಿತಿ, ಡಿಎಫ್‌ಓ-ಎಸಿಎಫ್ ನೇತೃತ್ವದ ಜಿಲ್ಲಾ ಅರಣ್ಯ ಸಮಿತಿ ರಚಿಸಬೇಕು. ಈ ಸಮಿತಿಗಳು ತಮ್ಮ ವ್ಯಾಪ್ತಿಯಲ್ಲಿ ಒಳಪಡುವ ಅರಣ್ಯ ಭೂಮಿ ಒತ್ತುವರಿ ಗುರುತಿಸಿ ಜನರನ್ನು ವಿಶ್ವಾಸಕ್ಕೆ ಪಡೆದು ಒತ್ತುವರಿ ತೆರವುಗೊಳಿಸಬೇಕಾಗಿತ್ತು. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಇದಾವುದನ್ನು ಮಾಡದೇ, ರೈತರ ಮೇಲೆ ದಾಳಿ ನಡೆಸಿದ್ದಾರೆ ಎಂದು ಪ್ರತಿಭಟನಾಕಾರರು ಆಪಾದಿಸಿದರು.
ಕೂಡಲೇ ಅರಣ್ಯ ಇಲಾಖೆ ತೆರವು ಕಾರ್ಯಚರಣೆಯನ್ನು ಸ್ಥಗಿತಗೊಳಿಸಬೇಕು. ಬಂಧಿಸಲಾಗಿರುವ ರೈತರನ್ನು ಬಿಡುಗಡೆ ಮಾಡಬೇಕು. ಅವರ ಮೇಲೆ ಹಾಕಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಕೆ.ಟಿ. ಗಂಗಾಧರ್, ಯಶವಂತ್‌ರಾವ್ ಘೋರ್ಪಡೆ, ಗಂಗಾಧರ್, ಉಮಾಪತಿಯಪ್ಪ, ವೀರೇಶ್, ರಮೇಶ್, ಗುರುಮೂರ್ತಿ, ಫಾಲಾಕ್ಷಪ್ಪ, ಸೊರಬ ತಾಲೂಕಿನ ಇಂಡಿಹಳ್ಳಿ ರಾಮಪ್ಪ, ಹನುಮಂತಪ್ಪ ಮತ್ತಿತರರು ಇದ್ದರು.