ಲವ್ ಜಿಹಾದ್, ಮುಸ್ಲಿಂ ಒಗ್ಗಟ್ಟು
ಶಿವಮೊಗ್ಗ: ಲವ್ ಜಿಹಾದ್, ಒಗ್ಗಟ್ಟಾಗುತ್ತಿರುವ ಮುಸ್ಲಿಮರು- ಕ್ರೈಸ್ತರು, ಗೋಹತ್ಯೆ ನಿಷೇಧ ಕಾನೂನು, ಕನಕ ಗೋಪುರ ಇತ್ಯಾದಿ ವಿಷಯಗಳನ್ನು ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಮಂಗಳವಾರ ಸಂಜೆ ವಿಪ್ರ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿ ಈ ಬಾರಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನು ಬಿಜೆಪಿ ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಲು ಬಯಸುತ್ತಿದೆ ಎಂಬುದನ್ನು ಸೂಚ್ಯ ತಿಳಿಸಿದರು.
ವಿವಿಧ ಬ್ರಾಹ್ಮಣ ಸಂಘಟನೆಗಳ ಪ್ರತಿನಿಧಿಗಳು ಸನ್ಮಾನಿಸಿದ ನಂತರ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಲವ್ ಜಿಹಾದ್ ನಡೆಯುತ್ತಿದೆ. 68 ಬ್ರಾಹ್ಮಣ ಹೆಣ್ಣುಮಕ್ಕಳನ್ನು ಮುಸ್ಲಿಂ ಯುವಕರು ಹೊತ್ತುಕೊಂಡು ಹೋಗಿ, 6 ತಿಂಗಳು- ವರ್ಷ ಇಟ್ಟುಕೊಂಡು ನಂತರ ಅವರ ಮನೆಗೆ ಬಿಸಾಕಿ ಹೋಗುತ್ತಾರೆ. ಮರ್ಯಾದೆಗೆ ಹೆದರಿ ಪೊಲೀಸ್ ಕಂಪ್ಲೆಂಟ್ ಕೊಡುವುದಕ್ಕೂ ಆಗುತ್ತಿಲ್ಲ ಎಂದರು.
ಈ ಬಾರಿ ಮುಸ್ಲಿಮರು ಒಗ್ಗಟ್ಟಾಗುತ್ತಿದ್ದಾರೆ. ನಗರಸಭೆ ಚುನಾವಣೆಯಲ್ಲಿ ಅವರು ಒಟ್ಟಾಗಿ ಮತ ಹಾಕಿದರು. ಹಾಗಾಗಿ ಹಲವು ವಾರ್ಡ್ಗಳಲ್ಲಿ ಹಿಂದೂಗಳು ಸೋಲಬೇಕಾಯಿತು ಎಂದು ಅವರು ಕೋಟೆ ವಾರ್ಡ್ನ ಚುನಾವಣೆಯನ್ನು ಉದಾಹರಿಸಿದರು.
ಗೋಹತ್ಯೆ ನಿಷೇಧ: ಗೋಹತ್ಯೆ ನಿಷೇಧ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿದಾಗ ಕಾಂಗ್ರೆಸ್ನಲ್ಲಿದ್ದ ಬ್ರಾಹ್ಮಣರು ಹಾಗೂ ಲಿಂಗಾಯಿತರು ವಿರೋಧಿಸಿದರು. ಗೋಹತ್ಯೆ ಆಗಬೇಕು ಎಂದು ಅವರು ವಾದ ಮಂಡಿಸಿದರು ಎಂದ ಈಶ್ವರಪ್ಪ ಅವರು, ನಾನು ನನ್ನ ಉಸಿರಿರುವ ವರೆಗೂ ಈ ಮಸೂದೆ ಪರವಾಗಿ ಇರುತ್ತೇನೆ ಎಂದರು.
ಕನಕ ಗೋಪುರ ವಿವಾದ ಉಂಟಾದಾಗ ನಾನು ಯಾರಾದರೂ ಇಲ್ಲಿ ಕನಕ ಗೋಪುರ ಇತ್ತು ಎಂದು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದಿದ್ದೆ. ಆಗ ಕುರುಬ ಸಮಾಜದ ಹಲವು ಸ್ವಾಮೀಜಿಗಳು ಫೋನ್ ಮಾಡಿ ಯಾಕೆ ಸಮುದ್ರದ ವಿರುದ್ಧ ಈಜುತ್ತೀಯ ಎಂದಿದ್ದರು. ಅವರು ಹೆದರಿದ್ದರು. ನನಗೆ ಸತ್ಯ ಹೇಳುವುದಕ್ಕೆ ಹೆದರಿಕೆ ಇರಲಿಲ್ಲ ಎಂದರು.
ಭರವಸೆ: ವಿಪ್ರ ಸಮಾಜಕ್ಕೆ ಈಗ ಮಂಜೂರಾಗಿರುವ ನಾಲ್ಕು ಎಕರೆ ಜಾಗದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಲು ಹೋಗಬೇಡಿ. ಅದಕ್ಕಾಗಿ ಬೇರೆ ಕಡೆ 25 ಎಕರೆ ಭೂಮಿ ಕೊಡಿಸುತ್ತೇನೆ ಎಂದು ಈಶ್ವರಪ್ಪ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ವಕೀಲ ಎಂ.ಆರ್. ಸತ್ಯನಾರಾಯಣ್, ಸ್ವಾಮೀಜಿಗಳು ಹೇಳಿದರು ಎಂಬ ಕಾರಣದಿಂದ ಅವರು ಹೇಳಿದವರಿಗೆ ಬ್ರಾಹ್ಮಣ ಸಮಾಜ ಓಟು ಹಾಕುವುದಿಲ್ಲ. ಅವರು ಬುದ್ದಿವಂತರಿದ್ದಾರೆ. ಯಾರಿಗೆ ಮತ ಹಾಕಬೇಕೆಂದೆನಿಸುತ್ತದೆಯೋ ಅವರಿಗೇ ಓಟು ಹಾಕುತ್ತಾರೆ ಎಂದರು. ಈಶ್ವರಪ್ಪರ ಸೋಲು ಬಿಜೆಪಿ ನಾಶ ಎಂದು ವ್ಯಾಖ್ಯಾನಿಸಿದ ಅವರು, ಈ ಪಕ್ಷದ ನಾಶಕ್ಕೆ ಅವಕಾಶ ಮಾಡಿಕೊಡುವುದು ಸರಿಯೇ ಎಂದು ಪ್ರಶ್ನಿಸಿದರು.
ಸಮಾರಂಭದಲ್ಲಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಪದ್ಮನಾಭ ಭಟ್, ಬ್ರಾಹ್ಮಣ ಸಮಾಜದ ಮುಖಂಡ ಎ.ಜಿ. ರಾಮಚಂದ್ರ, ಅಶೋಕ್ ಭಟ್, ವೇಣುಗೋಪಾಲ್ ಸೇರಿದಂತೆ ಹಲವರು ಮಾತನಾಡಿದರು.
ಆಕ್ಷೇಪಿಸಿದವರ ಬಂಧನ
ವಿಪ್ರ ವೇದಿಕೆ ಆಯೋಜಿಸಿದ್ದ ಈ ಕಾರ್ಯಕ್ರಮ ಗೊಂದಲದಿಂದಲೇ ಆರಂಭವಾಯಿತು.
ಈಶ್ವರಪ್ಪ ಅವರು ಕಾರ್ಯಕ್ರಮ ಆಯೋಜಿಸಿದ್ದ ಗಾಯತ್ರಿ ಮಾಂಗಲ್ಯ ಮಂದಿರಕ್ಕೆ ಬರುವ ಮುಂಚೆಯೇ ಕೆಲವರು ಆಕ್ಷೇಪವೆತ್ತಿದ್ದರು. ಕಾರ್ಯಕ್ರಮ ಆಯೋಜಕರೊಂದಿಗೆ ವಾಗ್ವಾದ ನಡೆಸಿದರು. ವಿಪ್ರ ವೇದಿಕೆ ಸನ್ಮಾನ ಮಾಡುವುದೇ ಆದರೆ ಎಲ್ಲಾ ಅಭ್ಯರ್ಥಿಗಳನ್ನೂ ಕರೆದು ಸನ್ಮಾನಿಸಲಿ, ಈಶ್ವರಪ್ಪರಿಗೆ ಮಾತ್ರ ಏಕೆ ಎಂದು ಪ್ರಶ್ನಿಸಿದರು.
ಸ್ಥಳದಲ್ಲೇ ಇದ್ದ ಪೊಲೀಸರು ಅವರನ್ನು ಮಾಂಗಲ್ಯ ಮಂದಿರ ಆವರಣದಿಂದ ಹೊರಗೆ ಕರೆದುಕೊಂಡು ಹೋಗುವ ಪ್ರಯತ್ನ ನಡೆಸಿದರೂ ಸಾಧ್ಯವಾಗಲಿಲ್ಲ. ನಂತರ ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ರಾಮಾನಾಯ್ಕ್ ಸ್ಥಳಕ್ಕೆ ಆಗಮಿಸಿ ಸುರೇಶ್ ರಾವ್ ನಾಡಿಗ್ ಹಾಗೂ ಇನ್ನಿಬ್ಬರನ್ನು ಬಂಧಿಸಿ ಕರೆದೊಯ್ದರು. ಇತ್ತ ಇವರ ಬಂಧನ ನಡೆಯುತ್ತಿದ್ದ ಸಂದರ್ಭದಲ್ಲೇ ಕೆ.ಎಸ್. ಈಶ್ವರಪ್ಪ ಅವರು ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಿದರು.