ಶಿಕ್ಷಕರು ಸಮಾಜದ ಕಣ್ಣು: ತೋಟಪ್ಪ ಗೌಡ
ಕ.ಪ್ರ.ವಾರ್ತೆ, ಹೊಸನಗರ ಏ.9 ಯಾವುದೇ ಗ್ರಾಮ ಕ್ರಿಯಾಶೀಲವಾಗಿರಬೇಕಾದಲ್ಲಿ ಅಲ್ಲಿಯ ಶಾಲೆ ಸಕ್ರಿಯವಾಗಿರಬೇಕು. ಭವಿಷ್ಯದ ಸತ್ಪ್ರಜೆ ರೂಪಿಸುವ ಶಿಕ್ಷಕರು ಸಮಾಜದ ಕಣ್ಣು ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ತೋಟಪ್ಪಗೌಡ ಹೇಳಿದರು.
ತಾಲೂಕಿನ ನೂಲಿಗ್ಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕ ವೃತ್ತಿಯಿಂದ ನಿವೃತ್ತಿಯಾದ ಶಾರದಾ ಗೋಖಲೆಯವರಿಗೆ ಬೀಳ್ಕೊಡುಗೆ ನೀಡಿ, ಖಾಸಗಿ ಮತ್ತು ಸರ್ಕಾರಿ ಶಾಲೆಗಳ ತಾರತಮ್ಯ ಹೆಚ್ಚುತ್ತಿದ್ದು, ಶಿಕ್ಷಕರು ಜಾಗೃತರಾದರೆ ಸರ್ಕಾರಿ ಶಾಲೆ ಪಾತ್ರ ಗಮನಾರ್ಹವಾಗುತ್ತದೆ ಎಂದರು.
ಕ್ರಿಯಾಶೀಲತೆ: ಶಿಕ್ಷಣ ಇಲಾಖೆಯ ಸಿಆರ್ಪಿ ಕುಬೇಂದ್ರಪ್ಪ ಮಾತನಾಡಿ, ಮುಖ್ಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ ಶಾರದಾ ಗೋಖಲೆ ಇಳಿ ವಯಸ್ಸಿನಲ್ಲಿಯೂ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವುದರೊಂದಿಗೆ ಶಾಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ದಿದ್ದಾರೆ. ಅಲ್ಲದೆ ಅವರ ಅವಧಿಯಲ್ಲಿ ಸುವರ್ಣ ಸಂಭ್ರಮ ಕಾರ್ಯಕ್ರಮವನ್ನು ಅದ್ಭುತವಾಗಿ ರೂಪಿಸಿದರು ಎಂದು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿದ ಶಾರದಾ ಗೋಖಲೆ, ಶಿಕ್ಷಕ ವೃತ್ತಿಯಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡರೆ ಅಲ್ಲಿ ಸಿಗುವ ಸಂತೃಪ್ತಿ ಮತ್ತೆಲ್ಲೂ ಸಿಗದು ಎಂದರು.
ಮುಖ್ಯಶಿಕ್ಷಕ ಸೋಮಶೇಖರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಾಲ್ತೇಶ ಗೌಡ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಶ್ರೀನಿವಾಸ್, ಪ್ರಮುಖರಾದ ಅಬುಬಕರ್, ಆನಂದಶೆಟ್ಟಿ, ಶಿಕ್ಷಕಿ ರೇಖಾ ಇದ್ದರು.