ಅಪಘಾತ: ಬೈಕ್ ಸವಾರ ಸಾವು
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ಏ.10
ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಪರಿಣಾಮ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಹಣಗೆರೆ ಕಟ್ಟೆ ಬಳಿ ನಡೆದಿದೆ. ಹಾರ್ನಹಳ್ಳಿ ಗ್ರಾಮದ ನಿವಾಸಿ ಸೈಯದ್ ಕೈಸರ್ ಮೃತಪಟ್ಟವರು. ಇವರು ಕಾರ್ಯನಿಮಿತ್ತ ಹಣಗೆರೆ ಕಟ್ಟೆಗೆ ತೆರಳಿದ್ದರು. ನಂತರ ತಮ್ಮ ಸಂಬಂಧಿಕರೊಬ್ಬರ ಬೈಕ್ನಲ್ಲಿ ಬರುವಾಗ ಘಟನೆ ನಡೆದಿದೆ. ಮನೆಗೆ ಬೇಗನೆ ಹೋಗಬೇಕೆಂದು ವೇಗವಾಗಿ ಬಂದ ಕೈಸರ್ ಹಣಗೆರೆ ಕಟ್ಟೆಯ ಮಲ್ಲೇಶಂಕರ ಕ್ರಾಸ್ ಬಳಿ ಹಳ್ಳಕ್ಕೆ ಬಿದ್ದಿದ್ದಾರೆ. ಪರಿಣಾಮ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರಕರಣ ಕುಂಸಿ ಠಾಣೆಯಲ್ಲಿ ದಾಖಲಾಗಿದೆ.
ಗೃಹಿಣಿ ಆತ್ಮಹತ್ಯೆ
ಅತ್ತೆ ಮತ್ತು ನಾದಿನಿ ನೀಡುತ್ತಿದ್ದ ದೈಹಿಕ, ಮಾನಸಿಕ ಹಿಂಸೆ ತಾಳಲಾರದೆ ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಗಾಜನೂರಿನಲ್ಲಿ ನಡೆದಿದೆ.
ಸರಿತಾ (25) ಆತ್ಮಹತ್ಯೆ ಮಾಡಿಕೊಂಡವರು. ಇವರು 2005ರಲ್ಲಿ ಗಾಜನೂರಿನ ವಾಸುದೇವ್ ಎಂಬವರೊಂದಿಗೆ ವಿವಾಹವಾಗಿದ್ದು, ಒಂದು ಹೆಣ್ಣು ಮಗು ಇದೆ. ಆದರೆ, ಗಂಡನ ಮನೆಯಲ್ಲಿ ಅತ್ತೆ ಹಾಗೂ ನಾದಿನಿ ಪ್ರತಿನಿತ್ಯ ಹಿಂಸಿಸುತ್ತಿದ್ದರು.
ಇದರಿಂದ ಬೇಸತ್ತ ಸರಿತಾ ಪತಿಯ ಮನೆಯಲ್ಲಿಯೇ ಬೆಂಕಿ ಹಚ್ಚಿಕೊಂಡಿದ್ದರು. ತಕ್ಷಣ ಇವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಮಹಿಳಾ ಠಾಣೆಯಲ್ಲಿ ದಾಖಲಾಗಿದೆ.
ದಲಿತನ ಮೇಲೆ ಹಲ್ಲೆ: ಕ್ರಮಕ್ಕೆ ಆಗ್ರಹ
ದಲಿತ ಮುಖಂಡನ ಮೇಲೆ ಹಲ್ಲೆ ನಡೆಸಿ, ಸುಳ್ಳು ಕೇಸು ದಾಖಲಿಸಿದ ಪೊಲೀಸ್ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆ ಸದಸ್ಯ ಮಂಜುನಾಥ್ ನವಿಲೆ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತೀರ್ಥಹಳ್ಳಿ ತಾಲೂಕಿನ ಹಾರೋಗೊಳಿಗೆಯ ನಿವಾಸಿ ವಿಶ್ವನಾಥ್ ಹಾಗೂ ಆತನ ಸ್ನೇಹಿತರು ಅದೇ ತಾಲೂಕಿನ ಅರಳಸುರಳಿ ಗ್ರಾಮದ ಡಿಎಸ್ಎಸ್ ಸಮಿತಿ ಜಿಲ್ಲಾ ಸಂಚಾಲಕ ಕೆ.ವಿ. ನಾಗರಾಜ್ಗೆ ಕೊಲೆ ಬೆದರಿಕೆ ಹಾಕಿದಲ್ಲದೆ, ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಿದ್ದಾರೆ ಎಂದು ದೂರಿದರು.
ಸಮಿತಿಯ ಜಿಲ್ಲಾ ಸಂಚಾಲಕ ಪರಮೇಶ್ವರ ದೂಗೂರು ಮಾತನಾಡಿ, ನಾಗರಾಜ್ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ ಇಲ್ಲಿನ ಡಿವೈಎಸ್ಪಿ ಶಿವಕುಮಾರ್ ಮೇಲೆ ಜಿಲ್ಲಾ ರಕ್ಷಣಾಧಿಕಾರಿಯವರು ಕ್ರಮಕೈಗೊಳ್ಳಬೇಕು ಎಂದ ಅವರು, ಸುಳ್ಳು ಕೇಸು ದಾಖಲಿಸಿದವರ ಬಗ್ಗೆ ತನಿಖೆಯಾಗಬೇಕು. ನಾಗರಾಜ್ಗೆ ಜೀವ ಬೆದರಿಕೆ ಇರುವುದರಿಂದ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.