ಜಾತಿ ಓಲೈಕೆ ರಾಜಕಾರಣ ಶುರು
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ಏ.10
ಹಿಂದಿನ ಚುನಾವಣೆಗಳನ್ನು ಗಮನಿಸಿದರೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಮಟ್ಟಿಗೆ ಜಾತಿ ರಾಜಕಾರಣ ಕೆಲಸ ಮಾಡಿದ್ದು ಅಷ್ಟಾಗಿ ಕಡಿಮೆ. ಆದರೆ, ಮುಂಬರುವ ಚುನಾವಣೆ ಮಾತ್ರ ಜಾತಿ ರಾಜಕಾರಣ ಪಾರಮ್ಯ ಮೆರೆಯುವ ಎಲ್ಲಾ ಲಕ್ಷಣಗಳೂ ಗೋಚರಿಸಲಾರಂಭಿಸಿವೆ.
ರಾಜಕಾರಣಕ್ಕೆ ಕೆಜೆಪಿ ಪ್ರವೇಶವಾಗುತ್ತಿದ್ದಂತೆಯೇ ಎಲ್ಲಾ ಪಕ್ಷಗಳಲ್ಲೂ ಸಂಚಲನ ಉಂಟಾಗಿದೆ. ಹೀಗಾಗಿ ಅವು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಕಂಡುಕೊಂಡಿದ್ದು ಜಾತಿ ರಾಜಕಾರಣದ ಅಸ್ತ್ರಗಳನ್ನು, ಹೀಗೆಂದು ಜಾತಿ ರಾಜಕಾರಣ ಮೇಳೈಸಲು ಕೆಜೆಪಿಯೇನು ನೇರ ಕಾರಣವೂ ಅಲ್ಲ. ಆದರೆ, ಎಲ್ಲಾ ಪಕ್ಷಗಳೂ ಜಾತಿ ನಾಯಕರ ಓಲೈಕೆಗೆ ಮುಂದಾಗಿವೆ. ವಿಶೇಷವೆಂದರೆ ಈ ಜಾತಿ ರಾಜಕಾರಣ ಸಮಾಜದಲ್ಲಿ ಒಂದಷ್ಟು ಗೊಂದಲ ಹುಟ್ಟುಹಾಕಿರುವುದಂತೂ ಸುಳ್ಳಲ್ಲ.
ಮುಸ್ಲಿಂ ಓಟು ಚದುರುತ್ತದೆಯೇ, ಬ್ರಾಹ್ಮಣರ ಓಟ್‌ಬ್ಯಾಂಕ್ ವಿಭಜನೆಯಾಗುತ್ತದೆಯೇ, ತಮಿಳರು, ಮರಾಠರು, ಮಡಿವಾಳರು ಈ ಬಾರಿ ತಮ್ಮ ಒಲವು ಬೇರೆಡೆ ಹರಿಸಲಿದ್ದಾರೆಯೇ, ಈ ರೀತಿ ಹತ್ತಾರು ಪ್ರಶ್ನೆಗಳು ಎದ್ದಿದ್ದು, ಅಲ್ಲಲ್ಲಿ ಚರ್ಚೆಗಳು ನಡೆದಿವೆ.
ಬಿಜೆಪಿಗೆ ಸಂಕಟ: ಬ್ರಾಹ್ಮಣ ಮತದಾರರ ಪ್ರಾಬಲ್ಯವಿರುವ ಕೆಲವೇ ಕ್ಷೇತ್ರಗಳಲ್ಲಿ ಶಿವಮೊಗ್ಗ ಕೂಡ ಒಂದು. ನೆರೆಯ ಶೃಂಗೇರಿ ಕ್ಷೇತ್ರವನ್ನು ಹೊರತುಪಡಿಸಿದರೆ ಹೆಚ್ಚಿನ ಬ್ರಾಹ್ಮಣ ಮತದಾರರು ಹೊಂದಿರುವ ಕ್ಷೇತ್ರ ಶಿವಮೊಗ್ಗ. ಇಲ್ಲಿ ಮುಸ್ಲಿಮರಷ್ಟೇ ಸರಿಸಮನಾಗಿ ಬ್ರಾಹ್ಮಣ ಮತದಾರರಿದ್ದು, ಇವರೇ ನಿರ್ಣಾಯಕರು. ಇತ್ತೀಚಿನ ವರ್ಷಗಳಲ್ಲಿ ಬ್ರಾಹ್ಮಣ ಸಮುದಾಯ ಬಿಜೆಪಿಯನ್ನೇ ಕೈಹಿಡಿಯುತ್ತಾ ಬಂದಿದೆ. ಆದರೆ, ಈ ಬಾರಿ ಕಾಂಗ್ರೆಸ್‌ನಿಂದ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಯುವ ಮುಖಂಡ ಕೆ.ಬಿ. ಪ್ರಸನ್ನಕುಮಾರ್ ಕಣಕ್ಕಿಳಿದಿರುವುದರಿಂದ ಬಿಜೆಪಿಗೆ ಒಳಗೊಳಗೆ ಸಂಕಟ ಆರಂಭವಾಗಿದೆ.
ಈ ಹಿನ್ನೆಲೆಯಲ್ಲಿಯೇ ಬಿಜೆಪಿ ಮುಖಂಡರು ಸೇರಿ ಖಾಸಗಿ ಸಮಾರಂಭವೊಂದನ್ನು ಏರ್ಪಡಿಸಿ, ಈ ಸಮುದಾಯದ ಮತ ಚದುರದಂತೆ ನೋಡಿಕೊಳ್ಳುವಂತಹ ಪ್ರಯತ್ನ ಮಾಡಿದರು.
ಹಾಗೆಯೇ ಈ ಬಾರಿ ಲಿಂಗಾಯತ ಮತಗಳೂ ಪೂರ್ಣ ಪ್ರಮಾಣದಲ್ಲಿ ಬಿಜೆಪಿ ಕೈಹಿಡಿಯುವುದು ಅನುಮಾನ. ಹೀಗಾಗಿ ಮತಗಳ ಕ್ರೋಢೀಕರಣಕ್ಕೆ ಪಕ್ಷದ ಮುಖಂಡರು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ.
ಕೆಜೆಪಿ ಗುರಿ: ಈ ಕ್ಷೇತ್ರದಲ್ಲಿ ಮೂರನೇ ಅತಿದೊಡ್ಡ ಮತದಾರರನ್ನು ಹೊಂದಿರುವ ಲಿಂಗಾಯಿತ ಸಮಾಜದತ್ತ ಕೆಜೆಪಿ ಗಂಭೀರ ಗಮನಹರಿಸಿದೆ. ಈ ಸಮುದಾಯದ ಮತ ಕ್ರೋಢೀಕರಿಸುವ ಜೊತೆಗೆ ಇತರೆ ಸಮಾಜದ ಮತಗಳನ್ನು ಒಡೆಯುವ ಮೂಲಕ ತನ್ನ ಶಕ್ತಿ ವೃದ್ಧಿಸಿಕೊಳ್ಳುವ ಕಾರ್ಯ ಸದ್ದಿಲ್ಲದೇ ನಡೆದಿದೆ. ಯಡಿಯೂರಪ್ಪನವರು ಸಿಎಂ ಆಗಿದ್ದ ಅವಧಿಯಲ್ಲಿ ವಿವಿಧ ಸಮಾಜಗಳಿಗೆ ನೆರವು ನೀಡಿದ್ದನ್ನು ನೆನಪಿಸುವ ಕಾರ್ಯ ನಡೆದಿದೆ. ಆ ಮೂಲಕ ಎಲ್ಲಾ ಸಮಾಜದ ಒಂದಷ್ಟು ಮತಕ್ಕೆ ಗಾಳ ಹಾಕುವ ಗುರಿ ಹಾಕಲಾಗಿದೆ.
ಕಾಂಗ್ರೆಸ್ ತಂತ್ರ: ಬ್ರಾಹ್ಮಣ ಮತದಾರರನ್ನು ಗುರಿಯಾಗಿಸಿ ಅದೇ ಸಮುದಾಯಕ್ಕೆ ಸೇರಿದ ಕೆ.ಬಿ. ಪ್ರಸನ್ನಕುಮಾರ್ ಅವರನ್ನು ಕಣಕ್ಕಿಳಿಸಿದೆ. ಈ ಸಮಾಜದ ಮತಗಳನ್ನು ಕ್ರೋಢೀಕರಿಸುವ ಜೊತೆಗೆ ಪಕ್ಷದ ಸಾಂಪ್ರದಾಯಿಕ ಮತಗಳು, ಮುಸ್ಲಿಂ ಮತಗಳನ್ನು ಸೆಳೆದು ತನ್ನ ಬಲ ವೃದ್ಧಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದೆ.
ಈ ಮಧ್ಯೆ ಹೆಚ್ಚಿನ ಸಂಖ್ಯೆಯಲ್ಲಿರುವ ತಮಿಳು, ಮರಾಠ, ಮಡಿವಾಳ ಮತದಾರರನ್ನು ಸೆಳೆಯಲು ಈ ಮೂರುಪಕ್ಷಗಳು ವಿವಿಧ ಕಾರ್ಯತಂತ್ರ ರೂಪಿಸುತ್ತಿವೆ.
ಆಕ್ಷೇಪ: ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಬ್ರಾಹ್ಮಣ ಸಮಾಜದ ವಿವಿಧ ಸಂಘಟನೆಗಳು ಮಂಗಳವಾರ ಬಿಜೆಪಿ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪನವರಿಗೆ ಸನ್ಮಾನ ಮಾಡಿರುವ ಕ್ರಮಕ್ಕೆ ಸಮಾಜದೊಳಗೆ ಆಕ್ಷೇಪ ಕೇಳಿಬಂದಿದೆ.
ಸದ್ಯ ಕಣದಲ್ಲಿರುವ ಕಾಂಗ್ರೆಸ್, ಜೆಡಿಎಸ್, ಕೆಜೆಪಿ ಅಭ್ಯರ್ಥಿಗಳೂ ಬ್ರಾಹ್ಮಣ ಸಮಾಜಕ್ಕೆ ತಮ್ಮದೇ ವಿವಿಧ ಕೊಡುಗೆ ನೀಡಿದ್ದಾರೆ. ಅವರನ್ನೂ ಈ ಸಂದರ್ಭದಲ್ಲಿ ಅಭಿನಂದಿಸಿದ್ದರೆ ಚೆನ್ನಾಗಿತ್ತು. ಅದರ ಹೊರತಾಗಿ ಈಶ್ವರಪ್ಪನವರಿಗೆ ಮಾತ್ರ ಮಣೆ ಹಾಕಿದ್ದು ಸರಿಯಲ್ಲ ಎಂಬ ಮಾತು ಕೇಳಿಬಂದಿದೆ.
ಹಾಗೆಯೇ ಬ್ರಾಹ್ಮಣ ಮತದಾರರು ಹೆಚ್ಚಿರುವ ಕ್ಷೇತ್ರಗಳಲ್ಲಿ ಯಾವುದೇ ಪಕ್ಷದಿಂದ ಒಬ್ಬ ಬ್ರಾಹ್ಮಣ ಅಭ್ಯರ್ಥಿ ಕಣಕ್ಕಿಳಿದಲ್ಲಿ ಅವರನ್ನು ಬೆಂಬಲಿಸಬೇಕೆಂಬ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ನಿಲುವು ಇರುವಾಗ ಶಿವಮೊಗ್ಗದಲ್ಲೇಕೆ ಬೇರೆ ದಾರಿ ಹಿಡಿಯಬೇಕು ಎಂಬ ಕೂಗು ಎದ್ದಿದೆ.
-ಶ್ರೀಕಾಂತ ಭಟ್