ಸಾಂಪ್ರದಾಯಿಕ ಕೃಷಿಯೇ ಬಂಡವಾಳ
ಕ.ಪ್ರ. ವಾರ್ತೆ ,ತೀರ್ಥಹಳ್ಳಿ, ಏ.10
ಈರುಳ್ಳಿ ಹೆಚ್ಚಿದರೆ ಕಣ್ಣು ಉರಿಯುವುದಿಲ್ಲ, ಮೂಲಗಿ ತಿಂದರೆ ರುಚಿ ಇರೋದಿಲ್ಲ, ಹೈಬ್ರೀಡ್ ತಳಿಯ ತರಕಾರಿಗಳು ಆರೋಗ್ಯಕರವಾಗಿಯೂ ಇರುವುದಿಲ್ಲ. ಇವೆಲ್ಲಾ ರಾಸಾಯನಿಕ ಗೊಬ್ಬರದ ಪರಿಣಾಮ. ಇದರಿಂದ ಹೊರಬರಲು ನಮ್ಮ ಸಾಂಪ್ರದಾಯಿಕ ಕೃಷಿಯೇ ಬಂಡವಾಳವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರ ಕಾರ್ಯವಾಹ ಸುರೇಶ್ಜಿ ಜೋಷಿ ಅಭಿಪ್ರಾಯಪಟ್ಟರು.
ಕುರುವಳ್ಳಿಯ ಪುರುಷೋತ್ತಮರಾವ್ ಕೃಷಿ ಸಂಶೋಧನಾ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಪುರುಷೋತ್ತಮ ಸನ್ಮಾನ ಸಮಾರಂಭದಲ್ಲಿ ಸನ್ಮಾನಿತರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ನಮ್ಮ ಪಂಚವಾರ್ಷಿಕ ಯೋಜನೆಗಳಲ್ಲಿ ಕೈಗಾರಿಕೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟಿದ್ದರ ಪರಿಣಾಮ ನಮ್ಮ ಸಾಂಪ್ರದಾಯಿಕ ಕೃಷಿಯ ಮೇಲೆ ಪ್ರತಿಕೂಲ ಪರಿಸ್ಥಿತಿ ಎದುರಾಯಿತು.
ಹೈಬ್ರೀಡ್ ತಳಿ: ರಾಸಾಯನಿಕ ಗೊಬ್ಬರದ ಅತಿಯಾದ ಬಳಕೆ ನಮ್ಮ ಮಣ್ಣಿನ ಸತ್ವದ ಮೇಲೂ ಆಯಿತು. ಯೋಜನೆ ಮಾಡುವವರ ಕಣ್ಣಿಗೆ ಹೈಬ್ರೀಡ್ ತಳಿಗಳೇ ಮುಖ್ಯವಾಗಿ ಕಂಡವು. ಇದೆಲ್ಲದರ ಪರಿಣಾಮ ನಮ್ಮ ರೈತರ ಬದುಕಿನ ಮೇಲೂ ಆಗಿದ್ದು, ಇಂದು ಮಣ್ಣು ತನ್ನ ಸತ್ವವನ್ನು ಕಳೆದುಕೊಂಡಿದೆ. ಅಂತರ್ಜಲ ಕುಸಿದಿದೆ, ಕೀಟನಾಶಕಗಳು, ರಾಸಾಯನಿಕ ಗೊಬ್ಬರ ನಮ್ಮ ಆಹಾರವನ್ನು ವಿಷಯುಕ್ತವಾಗುವಂತೆ ಮಾಡಿದೆ ಎಂದು ಹೇಳಿದರು.
ವಿಶೇಷ ಚಿಂತನೆ: ಹಳೆಯ ಪದ್ಧತಿಗಳನ್ನು ಬಿಡುತ್ತಿದ್ದು, ಹೊಸ ಪದ್ಧತಿಗೆ ಅಂಟಿಕೊಂಡಿರುವುದರಿಂದ ರೈತ ಸಂಕಷ್ಟಕ್ಕೀಡಾಗಿದ್ದಾನೆ. ಸಾವಯವ ಕೃಷಿಯ ಬಗ್ಗೆ ವಿಶೇಷ ಚಿಂತನೆ ಹೊಂದಿರುವ ತೀರ್ಥಹಳ್ಳಿಯ ಪುರುಷೋತ್ತಮ ಕೃಷಿ ಸಂಶೋಧನಾ ಕೇಂದ್ರ ಮುಂದಿನ ದಿನಗಳಲ್ಲಿ ಪರಿವರ್ತನೆಯ ಕೇಂದ್ರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಕ್ತಿಯುತ: ಈ ಬಾರಿ ಗೋಸೇವೆಯ ಮೂಲಕ ಸಾವಯವ ಕೃಷಿಯಲ್ಲಿ ಸಾಧನೆ ಮಾಡಿದ ಮಧ್ಯಪ್ರದೇಶದ ಜಯರಾಮ ಪಾಟೀದಾರ್ ದಂಪತಿಗಳು ಪುರುಷೋತ್ತಮ ಸನ್ಮಾನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜನನಿ ಮೊದಲ ತಾಯಿ, ನಂತರ ಗೋಮಾತೆ, ಜನ್ಮ ಭೂಮಿಯೂ ತಾಯಿ. ಗೋವಿನ ಉತ್ಪನ್ನದಿಂದ ತಯಾರಾದ ಪಂಚಗವ್ಯ ಅಮೃತವಿದ್ದಂತೆ. ಒಂದು ಗೋವು ಇಡೀ ಪರಿವಾರವನ್ನು ಆರೋಗ್ಯವಂತರನ್ನಾಗಿ ಮಾಡುವಷ್ಟು ಶಕ್ತಿಯುತವಾಗಿದೆ ಎಂದು ಹೇಳಿದರು.
ಕಳೆದ 5 ವರ್ಷಗಳಿಂದ ಇಡೀ ಕುಟುಂಬ ಒಮ್ಮೆಯೂ ವೈದ್ಯರ ಬಳಿ ಹೋಗಿಲ್ಲ. ಕುಟುಂಬಕ್ಕೆ ಬೇಕಾದ ಎಲ್ಲ ಆಹಾರ ಬೆಳೆಗಳನ್ನೂ ತಮ್ಮ 8 ಎಕರೆ ಕೃಷಿ ಭೂಮಿಯಲ್ಲೇ ಬೆಳೆಯಲಾಗುತ್ತಿದೆ. ನಮ್ಮಲ್ಲಿ ಗೋಶಾಲೆ ಒಂದು ಪ್ರಯೋಗ ಶಾಲೆಯಾಗಿದೆ. 125 ಗೋಸಂತಾನ ಮನೆಯಲ್ಲಿದೆ. ಗೋವಿನಿಂದ ದೊರಕುವ ಮೂಲ ದ್ರವ್ಯಗಳ ಉಪಯೋಗದಿಂದ ಮೌಲ್ಯವರ್ಧಿತ ವಸ್ತುಗಳ ತಯಾರಿಸಿ ಬಳಸುವುದು ಆರೋಗ್ಯಕ್ಕೆ ಒಳ್ಳೆಯದು. ಮನೆ ಬಳಕೆಗೆ ಬೇಕಾಗುವ ದೀಪದ ವ್ಯವಸ್ಥೆಯನ್ನು ಗೋಬರ್ ಅನಿಲದಿಂದಲೇ ಪಡೆಯುತ್ತೇವೆ. ಸಾವಯವ ಗೊಬ್ಬರ ಕೃಷಿಗೆ ಉಪಯೋಗವಾಗುತ್ತದೆ. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ ಎಂದು ಹೇಳಿದರು. ಈಗ ನೀಡಿರುವ ಸನ್ಮಾನ ಅನ್ನದಾತರಿಗೆ ಸಲ್ಲುವ ಸನ್ಮಾನ ಎಂದು ಅಭಿಮಾನದಿಂದ ಹೇಳಿದರು.
ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ ಶ್ರೀಗಳು ಆಶೀರ್ವಚನ ನೀಡಿ, ಗೋಸಂರಕ್ಷಣೆ ಕಾರ್ಯ ನಮ್ಮೆಲ್ಲರದ್ದಾಗಬೇಕು ಎಂದು ಹೇಳಿದರು. ಸನ್ಮಾನ ಸಮಾರಂಭಕ್ಕೂ ಮೊದಲು ಸನ್ಮಾನಿತರ ಶೋಭಯಾತ್ರೆ ಆಲಂಕೃತ ಎತ್ತಿನ ಗಾಡಿಯಲ್ಲಿ ನೆರವೇರಿತು. ಕೊಪ್ಪ ಸರ್ಕಲ್ನಲ್ಲಿರುವ ಕುವೆಂಪು ಪ್ರತಿಮೆ ಮುಂದೆ ರೈತಗೀತೆ ಹಾಡಲಾಯಿತು.