15ರಿಂದ ಚಿಣ್ಣರ ಅಂಗಳ ಕಾರ್ಯಕ್ರಮ
ಶಿವಮೊಗ್ಗ: ಸಾರ್ವಜನಿಕ ಶಿಕ್ಷಣ ಇಲಾಖೆ 2013-14ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳಿಗಾಗಿ ಏಪ್ರಿಲ್ 15 ರಿಂದ ಜುಲೈ 14 ರವರೆಗೆ 3 ತಿಂಗಳ ಅವಧಿಯ ವಸತಿ ಸಹಿತ ಮತ್ತು ವಸತಿ ರಹಿತ ಚಿಣ್ಣರ ಅಂಗಳ ಸೇತುಬಂಧ ಕೇಂದ್ರಗಳನ್ನು ಆರಂಭಿಸಲಿದೆ. ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ 2012ರ ಮಕ್ಕಳ ಗಣತಿಯಲ್ಲಿ ಗುರುತಿಸಲ್ಪಟ್ಟ 7 ರಿಂದ 13 ವರ್ಷ ವಯೋವುತಿಯೊಳಗಿನ ಮಕ್ಕಳಿಗೆ ಅವಕಾಶವಿದೆ. ಈ ಕಾರ್ಯಕ್ರಮಕ್ಕೆ ಪೋಷಕರು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು, ಸಾರ್ವಜನಿಕರು, ಶಿಕ್ಷಣಾಸಕ್ತರು ಹಾಗೂ ಸಂಘ- ಸಂಸ್ಥೆಗಳ ಪ್ರತಿನಿಧಿಗಳು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಚಿಣ್ಣರ ಅಂಗಳ ಕೇಂದ್ರಗಳಿಗೆ ದಾಖಲಿಸುವಂತೆ ತಿಳಿಸಿದೆ.
ವಿವರಗಳಿಗಾಗಿ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿಗಳನ್ನು ಸಂಪರ್ಕಿಸುವಂತೆ ಸರ್ವಶಿಕ್ಷಣ ಅಭಿಯಾನ, ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಹಾಗೂ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
17ರಿಂದ ಬೇಸಿಗೆ ಶಿಬಿರ ಆರಂಭ
ಶಿವಮೊಗ್ಗ: ಬಾಲ ಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಭದ್ರಾವತಿ ಆಶ್ರಯದಲ್ಲಿ ಏ. 17 ರಿಂದ 26 ರವರೆಗೆ ಭದ್ರಾವತಿ ಜವಹಾರ್‌ಲಾಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ.
ಶಿಬಿರದಲ್ಲಿ ಯೋಗ, ಪ್ರಾಣಯಾಮ, ಚಿತ್ರಕಲೆ, ಜೇಡಿಮಣ್ಣಿನ ಕಲೆ, ಸಮೂಹ ನೃತ್ಯ, ಎಂಬ್ರಾಯಿಡರಿ, ಕಸದಿಂದ ರಸ ಹಾಗೂ ವ್ಯಕ್ತಿ ವಿಕಸನ, ಇತ್ಯಾದಿ ವಿಷಯಗಳಿಗೆ ಶಿಬಿರದಲ್ಲಿ ತರಬೇತಿ ನೀಡಲಾಗುತ್ತದೆ. ಮಾಹಿತಿಗೆ-08282-266384.