ಕಾಂಗ್ರೆಸ್ನಲ್ಲಿ ಭುಗಿಲೆದ್ದ ಅಸಮಾಧಾನ
ಕ.ಪ್ರ ವಾರ್ತೆ, ಶಿಕಾರಿಪುರ, ಏ.12
ಪಕ್ಷದ ಮೂಲ ಕಾರ್ಯಕರ್ತರು, ಮುಖಂಡರನ್ನು ಹೊರತುಪಡಿಸಿ ಇತ್ತೀಚೆಗೆ ಪಕ್ಷಕ್ಕೆ ಆಗಮಿಸಿದವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿದ ಪಕ್ಷದ ಹೈಕಮಾಂಡ್ ವಿರುದ್ಧ ತಾಲೂಕಿನ ಮೂಲ ಕಾರ್ಯಕರ್ತರು, ಮುಖಂಡರ ಅಸಮಾಧಾನ ಭುಗಿಲೆದ್ದಿದೆ.
ಈ ದಿಸೆಯಲ್ಲಿ ಶುಕ್ರವಾರ ತಾಲೂಕಿನ ಕಣಿವೆಮನೆ ಗ್ರಾಮದಲ್ಲಿನ ಎಪಿಎಂಸಿ ಸದಸ್ಯ ಅರುಣ ಅವರ ನಿವಾಸದಲ್ಲಿ ಸಭೆ ನಡೆಸಿದ ಪಕ್ಷದ ಮೂಲ ಕಾರ್ಯಕರ್ತರು ಸ್ಥಳೀಯ ಮುಖಂಡರ ನಿರ್ಲಕ್ಷ್ಯ, ಏಕಪಕ್ಷೀಯ ಧೋರಣೆ ಖಂಡಿಸಿ ಕೂಡಲೇ ಸಮಸ್ಯೆ ಪರಿಹರಿಸದಿದ್ದಲ್ಲಿ ಬಂಡಾಯ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಸ್ಪಷ್ಟ ಎಚ್ಚರಿಕೆ ರವಾನಿಸಿದ್ದಾರೆ.
ಶಿಕಾರಿಪುರ ತಾಲೂಕಿನಲ್ಲಿ ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ಎಲ್ಲಾ ರೀತಿಯ ಹೋರಾಟ, ಬೆದರಿಕೆಗಳನ್ನು ಎದುರಿಸಿ ಅಸ್ಥಿತ್ವವನ್ನು ಕಾಪಾಡಿಕೊಂಡು ಬಂದಿದೆ.
ಇತ್ತೀಚೆಗೆ ಅನ್ಯ ಪಕ್ಷಗಳಿಂದ ವಲಸೆ ಬಂದವರು ತಮ್ಮ ಪ್ರಭುತ್ವ ಸ್ಥಾಪಿಸುವ ಮೂಲಕ ಮೂಲ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿ ಶಾಂತವೀರಪ್ಪಗೌಡರ ಬಗ್ಗೆ ಶಿರಾಳಕೊಪ್ಪ ಬ್ಲಾಕ್ ಅಧ್ಯಕ್ಷ ಚಂದ್ರಶೇಖರಪ್ಪ ಕಿಡಿಕಾರಿದರು.
ತೀರ್ಮಾನದಿಂದ ಸೋಲು: ಕಳೆದ ತಾಪಂ ಜಿಪಂ ಚುನಾವಣೆಯಲ್ಲಿ ನಾಮಕಾವಸ್ತೆಗಾಗಿ ಮಾಜಿ ಶಾಸಕ ಮಹಾಲಿಂಗಪ್ಪ ಮತ್ತಿತರ ಮುಖಂಡರ ಒಪ್ಪಿಗೆ ಪಡೆಯದೆ ಏಕಪಕ್ಷೀಯ ತೀರ್ಮಾನದಿಂದ ಸೋಲನುಭವಿಸಬೇಕಾಯಿತು ಎಂದರು.
ಇದೇ ಪರಿಸ್ಥಿತಿ ವಿಧಾನಸಭಾ ಚುನಾವಣೆಯಲ್ಲಿ ಮುಂದುವರಿಯುವ ಲಕ್ಷಣ ಗೋಚರವಾಗಿದೆ. ಈ ಬಾರಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಮಣಿಸಲು ಉತ್ತಮ ಅವಕಾಶವಿದೆ. ಒಗ್ಗಟ್ಟು ಮರೆತು ವರ್ತಿಸಿದಲ್ಲಿ ಬಂಡಾಯ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಹಿಂದೇಟು ಹಾಕುವುದಿಲ್ಲ ಎಂದರು.
ಕುಸ್ಕೂರು ಗ್ರಾಪಂ ಸದಸ್ಯ ಮಲ್ಲೇಶಪ್ಪ ಮಾತನಾಡಿ, ಗ್ರಾಮದ 28 ವಿದ್ಯಾರ್ಥಿಗಳನ್ನು ಸರ್ಕಾರಿ ಹಾಸ್ಟೆಲ್ಗೆ ದಾಖಲಿಸಲು ಬಿಜೆಪಿಯಲ್ಲಿದ್ದ ಶಾಂತವೀರಪ್ಪಗೌಡ ಅಡ್ಡಗಾಲು ಹಾಕಿದ್ದಾರೆ. ಇದೀಗ ಅವರಿಗೆ ಮತ ನೀಡಬೇಕಾದ ದುಸ್ಥಿತಿ ಬಂದಿದೆ. ಹಲವು ವರ್ಷಗಳಿಂದ ಪಕ್ಷ ಸಂಘಟನೆಗೆ ಶ್ರಮಿಸಿದ ಇತರೆ ಮುಖಂಡರಿಗೆ ಅವಕಾಶ ಕಲ್ಪಿಸಲು ನಿವೇದಿಸಿ ಲಿಂಗಾಯಿತರನ್ನು ಮಾತ್ರ ವೇದಿಕೆಗೆ ಆಹ್ವಾನಿಸಿ ಇನ್ನಿತರರನ್ನು ದೂರವಿಡುತ್ತಿದ್ದಾರೆ ಎಂದು ಆರೋಪಿಸಿದರು.
ಗ್ರಾಪಂ ಮಾಜಿ ಉಪಾಧ್ಯಕ್ಷ ಹೇಮನಗೌಡ ಮಾತನಾಡಿ, ರು. 1.35 ಕೋಟಿ ವೆಚ್ಚದ ಬಿಸ್ಲಿಹಳ್ಳಿ ಕೆರೆ ಕಾಮಗಾರಿ ಅವ್ಯಹಾರದ ಬಗ್ಗೆ ಸೂಕ್ತವಾಗಿ ಸ್ಪಂದಿಸದೆ ಕಾರ್ಯಕರ್ತರನ್ನು ಶಾಂತವೀರಪ್ಪಗೌಡ ಕಡೆಗಣಿಸಿದ್ದಾರೆ.
ಇಂತಹ ಇಬ್ಬಗೆ ನೀತಿಯವರಿಗೆ ಮತ ಹಾಕುವುದಕ್ಕಿಂತ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪಗೆ ಮತ ಹಾಕುವುದು ಉತ್ತಮ ಎಂದು ಅಭಿಪ್ರಾಯಪಟ್ಟರು.
ಗುತ್ತಿಗೆದಾರ ಹನುಮಂತಪ್ಪ, ಜಿಪಂ ಸದಸ್ಯ ಈಸೂರು ಬಸವರಾಜ್, ಮಾಜಿ ಶಾಸಕ ಮಹಾಲಿಂಗಪ್ಪ ಮಾತನಾಡಿದರು.
ಬಂಡಾಯ ಬಾವುಟ: ಸಭೆಯಲ್ಲಿ ಶಿರಾಳಕೊಪ್ಪ ಭಾಗದ ಮುಖಂಡರ ಅಸಮಾಧಾನ ಎದ್ದುತೋರುತ್ತಿತ್ತು. ಏಕಪಕ್ಷೀಯ ವರ್ತನೆ,ನಿರ್ಧಾರ, ಕಡೆಗಣನೆ, ಅವಾಚ್ಯ ನಿಂದನೆಯಿಂದ ರೋಸಿಹೋಗಿದ್ದ ಅವರು ಶೀಘ್ರ ಪರಿಹಾರ ದೊರಕದಿದ್ದಲ್ಲಿ ಬಂಡಾಯ ಬಾವುಟ ಹಾರಿಸುವ ದೃಢ ನಿರ್ಧಾರ ಕೈಗೊಂಡಿದ್ದು ಗೋಚರಿಸುತ್ತಿತ್ತು.
ಕೆಪಿಸಿಸಿ ಸದಸ್ಯ ನಗರದ ಮಹಾದೇವಪ್ಪ, ಪುರಸಬಾ ಸದಸ್ಯ ಪಾರಿವಾಳದ ಶಿವರಾಂ, ತಾಪಂ ಸದಸ್ಯ ತಿಮ್ಮಣ್ಣ, ಮುಖಂಡ ರುದ್ರಗೌಡ್ರು, ಬಸವರಾಜಪ್ಪ, ಶಿವ್ಯಾನಾಯ್ಕ, ಅಂಬಾರ ಗೊಪ್ಪದ ರಾಜಪ್ಪ, ಜಯಪ್ರಕಾಶ್, ಕಲ್ಮನೆ ರಾಮಣ್ಣ, ಗಂಗೊಳ್ಳಿ ಸತೀಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.