ಈಶ್ವರಪ್ಪಗೆ ನಿಮ್ಹಾನ್ಸ್‌ನಲ್ಲಿ ಪರೀಕ್ಷಿಸಿ
ಕ.ಪ್ರ ವಾರ್ತೆ, ಶಿವಮೊಗ್ಗ, ಏ.13
ಸೋಲಿನ ಭೀತಿಯಿಂದ ಡಿಸಿಎಂ ಈಶ್ವರಪ್ಪ ಹತಾಶರಾಗಿದ್ದು ಅವರು ಮನೋರೋಗ ತಜ್ಞ ಅಶೋಕ್ ಪೈ ಅಥವಾ ನಿಮ್ಹಾನ್ಸ್‌ನಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವುದು ಒಳಿತು ಎಂದು ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ಖಾನ್ ಕಟುವಾಗಿ ಟೀಕಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಬ್ರಾಹ್ಮಣರು ಮತ್ತು ಮುಸ್ಲಿಮರ ಬಗ್ಗೆ ಮಾತನಾಡಿರುವ ಈಶ್ವರಪ್ಪರಿಗೆ ಮಾನ ಮರ್ಯಾದೆ ಇಲ್ಲ. ಒಂದು ವೇಳೆ ಮುಸ್ಲಿಂ ಯುವಕ ಲವ್ ಜಿಹಾದ್ ನಡೆಸಿದ್ದು ಗೊತ್ತಾದರೆ ಸಮಾಜದ ಮುಖಂಡರೇ ಚಪ್ಪಲಿಯಿಂದ ಹೊಡೆಯುತ್ತಾರೆ. ತಪ್ಪಿತಸ್ಥ ಯುವಕನನ್ನು ಎಎ ವೃತ್ತದಲ್ಲಿ ನಿಲ್ಲಿಸಿ ಕಲ್ಲಿನಿಂದ ಹೊಡೆದು ಸಾಯಿಸಲಿ. ಮೊದಲ ಕಲ್ಲಿನ ಏಟು ನಮ್ಮದೇ ಆಗಿರುತ್ತದೆ ಎಂದರು.
ಬ್ರಾಹ್ಮಣರಿಗೆ ಸೂಕ್ತ ಸ್ಥಾನಮಾನ: ಬ್ರಾಹ್ಮಣ ಸಮಾಜ ದುರ್ಬಲ ಎಂಬ ರೀತಿ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಸರಸ್ವತಿಯನ್ನು ಒಲಿಸಿಕೊಂಡ ಬ್ರಾಹ್ಮಣರು ಬುದ್ಧಿಜೀವಿಗಳು. ಆದರೆ, ಈಶ್ವರಪ್ಪನವರು ಬ್ರಾಹ್ಮಣರಿಗೇ ಬುದ್ಧಿ ಕಲಿಸಲು ಹೊರಟಿದ್ದಾರೆ. ಬ್ರಾಹ್ಮಣರು ಮೊದಲಿನಿಂದಲೂ ಕಾಂಗ್ರೆಸನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಪಕ್ಷ ಆ ಸಮಾಜಕ್ಕೆ ಸೂಕ್ತ ಸ್ಥಾನಮಾನ ನೀಡಿದೆ ಎಂದರು.
ಈಶ್ವರಪ್ಪ, ಶಂಕರಮೂರ್ತಿ ಮತ್ತಿತರು ಸೇರಿಕೊಂಡು ಬ್ರಾಹ್ಮಣರಾಗಿದ್ದ ಹಿಂದಿನ ಶಾಸಕ ಎಂ. ಆನಂದರಾವ್ ಅವರನ್ನು ಉದ್ದೇಶಪೂರ್ವಕವಾಗಿ ತುಳಿದು ಮೂಲೆಗುಂಪು ಮಾಡಿದರು. ಇದೀಗ ದೇವದಾಸ್ ನಾಯಕ್‌ರನ್ನು ಮೂಲೆಗುಂಪು ಮಾಡಿದ್ದು ಆ ಪಕ್ಷದ ನಾಯಕರೇ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.
ಮುಸ್ಲಿಂ ಸಮುದಾಯದ ಕೆಲವು ಯುವಕರು ಕೆಜೆಪಿ ಬೆಂಬಲಿಸುವ ಮೂಲಕ ತಪ್ಪು ಮಾಡುತ್ತಿದ್ದಾರೆ. ಈಗಲೇ ನಮ್ಮ ವೈರಿ ಯಾರು? ನಮ್ಮ ಸ್ನೇಹಿತರು ಯಾರು ಎಂಬುದನ್ನು ತೀರ್ಮಾನಿಸಬೇಕು. ಗೋಹತ್ಯೆ ಮಸೂದೆ ಮಂಡಿಸಿದ ಹಾಗೂ ಸಾಚಾರ್ ಸಮಿತಿ ಶಿಫಾರಸ್ಸನ್ನು ಜಾರಿ ಮಾಡುವುದಿಲ್ಲ ಎಂದ ಯಡಿಯೂರಪ್ಪ, ಇದೀಗ ಅಲ್ಪಸಂಖ್ಯಾತರಿಗೆ ದ್ರೋಹ ಮಾಡುವುದಿಲ್ಲ ಎಂದು ರಕ್ತದಲ್ಲಿ ಬರೆದು ಕೊಡುವುದಾಗಿ ಸುಳ್ಳು ಹೇಳುತ್ತಿದ್ದಾರೆ ಎಂದರು.
ಕೆಪಿಸಿಸಿ ವಕ್ತಾರ ಕೆ. ದಿವಾಕರ್ ಮಾತನಾಡಿ, ಡಿಸಿಎಂ ಈಶ್ವರಪ್ಪ ಬ್ರಾಹ್ಮಣ ಸಮಾಜದ ಹುಡುಗಿಯರನ್ನು ದುರ್ಬಲರೆಂದು ಭಾವಿಸಿ ಬ್ರಾಹ್ಮಣರು ಮತ್ತು ಮುಸ್ಲಿಮರ ನಡುವೆ ದ್ವೇಷ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಮತಕ್ಕಾಗಿ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಆದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಯೊಂದು ಮತಕ್ಕೂ ಹೋರಾಟ ನಡೆಸಬೇಕಿದೆ. ಜಾತಿಯ ಹೆಸರಿನಲ್ಲಿ ಕೋಮು ಗಲಭೆ ಆಗದಂತೆ ತಡೆಯಬೇಕಿದೆಂದರು.