ಕನಕ ವಿದ್ಯಾಸಂಸ್ಥೆ ಕಟ್ಟಡಕ್ಕೆ ಅನುದಾನ ನೀಡಿದ ಬಿಎಸ್ವೈ
ಕ.ಪ್ರ ವಾರ್ತೆ, ಶಿಕಾರಿಪುರ, ಏ.13
ರಾಜ್ಯದ ಮುಖ್ಯಮಂತ್ರಿಯಾದ ಅವಧಿಯಲ್ಲಿ ಯಡಿಯೂರಪ್ಪನವರು ಕಾಗಿನೆಲೆ ಕನಕ ಗುರುಪೀಠದ ಕನಕ ವಿದ್ಯಾ ಸಂಸ್ಥೆಯ ನೂತನ ಕಟ್ಟಡ ನಿರ್ಮಾಣಕ್ಕೆ ಕೋಟಿ ಅನುದಾನ ನೀಡುವ ಮೂಲಕ ಮಠದ ಬಡಮಕ್ಕಳ ಶೈಕ್ಷಣಿಕ ಕನಸನ್ನು ನನಸಾಗಿಸಲು ಸಹಕರಿಸಿ ಬಹುದೊಡ್ಡ ಜವಾಬ್ದಾರಿ ಕಡಿಮೆಗೊಳಿಸಿದ್ದಾರೆ ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಮಹಾಸ್ವಾಮಿಗಳು ತಿಳಿಸಿದರು.
ಶನಿವಾರ ಸಂಜೆ ಪಟ್ಟಣದ ಹೊರವಲಯ ಕಾನಹಕ್ಕಲು ಪ್ರದೇಶದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕೋಟ್ಯಂತರ ವೆಚ್ಚದ ಕನಕವಿದ್ಯಾಸಂಸ್ಥೆಯ ಕಾಮಗಾರಿ ಪ್ರಗತಿ ಪರಿಶೀಲಿಸಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅಧಿಕಾರವಧಿಯಲ್ಲಿ ಅನುದಾನ: ಸಮಾಜದ ನಿರ್ಗತಿಕ, ಬಡ ಮಕ್ಕಳ ಹಾಗೂ ಸಂಚಾರಿ ಕುರಿಗಾರರ ಮಕ್ಕಳ ಉನ್ನತ ಶೈಕ್ಷಣಿಕ ಪ್ರಗತಿಗೆ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಅಡಿಯಲ್ಲಿನ ಶ್ರೀ ಕನಕ ವಿದ್ಯಾಸಂಸ್ಥೆಯ ವಸತಿ ಶಾಲೆಯ ನಿರ್ಮಾಣಕ್ಕೆ ರಾಜ್ಯದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಅಧಿಕಾರಾವಧಿಯಲ್ಲಿ ಕೋಟಿ ರುಪಾಯಿ ಅನುದಾನ ನೀಡುವ ಮೂಲಕ ಮಠದ ಬಡ ಮಕ್ಕಳ ಶೈಕ್ಷಣಿಕ ಕನಸು ಸಾಕಾರಗೊಳ್ಳಲು ಸಹಕರಿಸಿದ್ದಾರೆ ಎಂದರು.
ಇದೇ 18,19ರಂದು ಶ್ರೀ ಕ್ಷೇತ್ರ ಕಾಗಿನೆಲೆಯಲ್ಲಿ ರೇವಣಸಿದ್ದೇಶ್ವರ, ಬೀರಲಿಂಗೇಶ್ವರ, ಮೈಲಾರಲಿಂಗೇಶ್ವರ ಹಾಗೂ ಮಹಾಸಿದ್ದೇಶ್ವರಿ ದೇವರ ವರ್ಷಾಭಿಷೇಕ ಮತ್ತು ಕನಕ ರಥೋತ್ಸವ ಹಾಗೂ ಸಾಮೂಹಿಕ ವಿವಾಹ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದರು. ನಂತರ ವಿದ್ಯಾಸಂಸ್ಥೆಯ ನೂತನ ವಾಹನವನ್ನು ಉದ್ಘಾಟಿಸಿದರು. ತಾಲೂಕು ಕುರುಬ ಸಮಾಜದ ಮುಖಂಡ ಬಿ.ಸಿ. ವೇಣುಗೋಪಾಲ, ಡಾ. ಪ್ರಶಾಂತ್, ಭೋಗಿ ನಿಂಗಪ್ಪ, ರಾಜಪ್ಪ, ನಾಗರಾಜಪ್ಪ, ಎಲ್ಐಸಿ ದೊಡ್ಡಪ್ಪ, ಮಲ್ಲಿಕಾರ್ಜುನ ಚಿಟ್ಟೂರು ಮತ್ತಿತರರು ಹಾಜರಿದ್ದರು.