ಚುನಾವಣಾಧಿಕಾರಿ ವರ್ತನೆ ವಿರುದ್ಧ ಆರೋಪ
ಸೊರಬ: ಪಕ್ಷೇತರ ಅಭ್ಯರ್ಥಿಯೊಬ್ಬರು ನಾಮಪತ್ರ ಸಲ್ಲಿಸುವ ವೇಳೆ ಚುನಾವಣಾಧಿಕಾರಿಗಳು ತಾರತಮ್ಯ ಎಸಗಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.
ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಶುಕ್ರವಾರ ನಾಮಪತ್ರ ಸಲ್ಲಿಸಲು ತೆರಳಿದ್ದ ಯು. ಸುರೇಶ್ ಅವರಿಗೆ ಚುನಾವಣಾಧಿಕಾರಿಗಳು ಸಬೂಬು ಹೇಳಿ ನಾಮಪತ್ರ ಸಲ್ಲಿಸದಂತೆ ತಡೆದಿದ್ದಾರೆ. ನಾಮಪತ್ರ ಸಲ್ಲಿಸುವ ಮುನ್ನ ಅಧಿಕಾರಿಗಳನ್ನು ಸಂಪರ್ಕಿಸಿ ಅವರ ಸೂಚನೆಯಂತೆಯೆ ದಾಖಲಾತಿ ಹಾಗೂ ನಾಮಪತ್ರ ತುಂಬುವ ನಿಯಮ ಪಾಲಿಸಿದ್ದೆ, ಆದರೂ ಪ್ರಮಾಣಪತ್ರದಲ್ಲಿ ದೋಷವಿದೆ ಎಂದು ಸುಳ್ಳು ಮಾಹಿತಿ ನೀಡಿ ನನ್ನನ್ನು ಹೊರಗೆ ಹೋಗುವಂತೆ ಮಾಡಿ ಇನ್ನೊಬ್ಬ ಅಭ್ಯರ್ಥಿಗೆ ನನ್ನ ಚಿಹ್ನೆ ನೀಡಿ, ನಾನು ಚಿಹ್ನೆ ವಂಚಿತನಾಗುವಂತೆ ಮಾಡಿದ್ದಾರೆ.
ಅಲ್ಲದೆ ಸಲ್ಲಿಕೆ ಸಂದರ್ಭದಲ್ಲಿ ನನ್ನನ್ನು ಅನಕ್ಷರಸ್ಥನಂತೆ ಕಂಡಿದ್ದಾರೆ ಎಂದು ಸುರೇಶ್ ಹೇಳಿಕೆಯಲ್ಲಿ ದೂರಿದ್ದಾರೆ.