ಜಮೀನು ಅತಿಕ್ರಮಣ: ವಶಕ್ಕೆ ಒತ್ತಾಯ
ಕ.ಪ್ರ ವಾರ್ತೆ, ಭದ್ರಾವತಿ, ಏ.13
ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿರುವ ಬೊಮ್ಮನಕಟ್ಟೆಯಲ್ಲಿ ವಾರ್ಡ್ ಸಂಖ್ಯೆ 23 ಮತ್ತು 24ರಲ್ಲಿ ಸರ್ವೆ ನಂ.45ರಲ್ಲಿ 57 ಎಕರೆ 27 ಗುಂಟೆ ಹಾಗೂ ಹಳೇ ಗ್ರಾಮ ಠಾಣಾದ 6 ಎ 26 ಗುಂಟೆ ಜಮೀನು ಹಾಗೂ ಮೂರು ಕೆರೆಗಳನ್ನು ಪ್ರಭಾವಿ ರಾಜಕಾರಣಿಗಳು, ಅವರ ಸಂಬಂಧಿಗಳು ಮತ್ತು ಕೆಲವು ಸ್ಥಳೀಯರು ಅತಿಕ್ರಮಣ ಮಾಡಿದ್ದು ನಗರಸಭೆ ಮತ್ತು ಗ್ರಾಪಂಗಳು ಇವುಗಳನ್ನು ತಕ್ಷಣ ತನ್ನ ವಶಕ್ಕೆ ತೆಗೆದುಕೊಂಡು ಅಭಿವೃದ್ಧಿಗಾಗಿ ಮೀಸಲಿಡಬೇಕೆಂದು ನಾಗರಿಕ ಹಿತಚಿಂತನಾ ಸಂಘದ ಅಧ್ಯಕ್ಷ ಮಸ್ತಾನ್ ಒತ್ತಾಯಿಸಿದ್ದಾರೆ.
ಶನಿವಾರ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯದ ಪ್ರಸ್ತಾವನೆ ಮಾಡಿ, ಅತಿಕ್ರಮಣ ಮಾಡಿ ಅಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆಂದು ಆರೋಪಿಸಿದರು.
ಈ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದು ಜಿಲ್ಲಾಧಿಕಾರಿಗಳು ಪೌರಾಯುಕ್ತರು ಮತ್ತು ತಹಸೀಲ್ದಾರರಿಗೆ ಸಮೀಕ್ಷೆ ಮಾಡಿ ವರದಿ ಸಲ್ಲಿಸಲು ಆದೇಶಿಸಿದ್ದಾರೆ. ನಗರಸಭೆ ಮಾಸಿಕ ಸಭೆಯಲ್ಲಿ ಸಹ ಎರಡೂ ಗ್ರಾಮ ಠಾಣಾಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಪ್ರಸ್ತಾಪವಾಗಿದ್ದರೂ ಇದುವರೆಗೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು.
ಪ್ರಭಾವಿಗಳಿಂದ ದುರುಪಯೋಗ: ಇವುಗಳಿಗೆ ಸಂಬಂಧಿಸಿದ ಕಡತಗಳನ್ನು ಹಿರಿಯೂರು ಗ್ರಾಪಂ ನಗರಸಭೆಗೆ ರವಾನಿಸಿದ್ದರೂ ಹಿಂದೆ ಅಧ್ಯಕ್ಷರಾಗಿದ್ದ ರಾಮಕೃಷ್ಣ ಅವಧಿಯಲ್ಲಿ ಅವುಗಳನ್ನು ಕಳೆದು ಹಾಕಿದ್ದು ಅದನ್ನು ಪ್ರಭಾವಿಗಳು ದುರುಪಯೋಗಪಡಿಸಿ ಕೊಳ್ಳುತ್ತಿದ್ದಾರೆಂದು ಮಸ್ತಾನ್ ದೂರಿದರು.
ಸ.ನಂ. 43ರಲ್ಲಿ ಇರುವ 57ಎ 27 ಗುಂಟೆ ಗ್ರಾಮ ಠಾಣಾ ಜಮೀನಿನಲ್ಲಿ 34 ಎ ಒತ್ತುವರಿಯಾಗಿ ಇಲ್ಲಿ ನಿವೇಶನಗಳನ್ನು ನಿರ್ಮಿಸಿಕೊಂಡಿದ್ದಾರೆ. ಸಿ. ಕುಪ್ಪುಸ್ವಾಮಿ, ಗೋವಿಂದಪ್ಪ, ಮಾಜಿ ನಗರಸಭಾ ಉಪಾಧ್ಯಕ್ಷ ಮೆಹಬೂಬ್ಸಾಬ್ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ. ಹಳೆ ಗ್ರಾಮಠಾಣಾದ 6 ಎ 26 ಗುಂ ಜಮೀನಿನಲ್ಲಿ 1ಎ 30 ಗುಂ ಜಮೀನನ್ನು ಮಹೇಶ್ವರಪ್ಪ ಎಂಬವರು ಒತ್ತುವರಿ ಮಾಡಿಕೊಂಡಿದ್ದಾರೆ. ರಾಜಕೀಯ ಪ್ರಭಾವದಿಂದ ಕೇಶವಮೂರ್ತಿ, ಖಾಸಿಂಸಾಬ್ ಮೊದಲಾದವರು ಇಲ್ಲಿ ಒಂದಿಷ್ಟು ಜಾಗವನ್ನು ಅತಿಕ್ರಮಣ ಮಾಡಿದ್ದಾರೆಂದು ಅವರು ತಿಳಿಸಿದರು.
ಅಕ್ರಮ ನಿವೇಶನ: ಬಡವರಿಗೆ ಕೆರೆಯಂಗಳ, ಗುಂಡುತೋಪು, ಹುಲ್ಲು ಬಣವೆ ಜಮೀನುಗಳನ್ನು ಅವರ ಆರ್ಥಿಕ ಸಬಲೀಕರಣಕ್ಕಾಗಿ ಮೀಸಲಿಡಬೇಕೆಂಬ ಆದೇಶವಿದ್ದರೂ ನಗರಸಭೆ ಮಾಜಿ ಉಪಾಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಮೆಹಬೂಬ್ಸಾಬ್ 23 ನಿವೇಶನಗಳನ್ನು ನಿರ್ಮಿಸಿಕೊಂಡಿದ್ದಾರೆ. ಹಿರಿಯೂರು ಬೊಮ್ಮನಕಟ್ಟೆ ವ್ಯಾಪ್ತಿಯಲ್ಲಿ ವಿಐಎಸ್ಎಲ್ ಕಾರ್ಖಾನೆ ಹಾಗೂ ಗ್ರಾಮಠಾಣಾ ಜಮೀನು ಇದೆ. ಇವುಗಳಿಗೆ ಸರಿಯಾದ ಗಡಿಗಳನ್ನು ಗುರುತಿಸದಿರುವುದರಿಂದ ಕೆಲವರು ಇದನ್ನು ದುರುಪಯೋಗಪಡಿಸಿಕೊಂಡು ಅಕ್ರಮ ನಿವೇಶನಗಳನ್ನು ಮಾಡಿಕೊಂಡು ಮನೆ ನಿರ್ಮಿಸಿ ಮಾರಾಟ ಮಾಡುತ್ತಿದ್ದಾರೆಂದು ದೂರಿದರು.
ಬೊಮ್ಮನಕಟ್ಟೆಯಲ್ಲಿನ ಮೂರು ಕೆರೆಗಳನ್ನು ಮಾಜಿ ನಗರಸಭಾ ಉಪಾಧ್ಯಕ್ಷ ಮೆಹಬೂಬ್ಸಾಬ್, ಮಹೇಶ್ವರಪ್ಪ, ಸುಲ್ತಾನ್ ಷರೀಫ್ ಎಂಬುವರು ಆಕ್ರಮಿಸಿಕೊಂಡಿದ್ದು ಈ ಬಗ್ಗೆ ಜಿಲ್ಲಾಧಿಕಾರಿಗಳು, ಭದ್ರಾವತಿ ಉಪ ವಿಭಾಗಾಧಿಕಾರಿ ಹಾಗೂ ತಹಸೀಲ್ದಾರರಿಗೆ ದೂರು ನೀಡಲಾಗಿದೆ ಎಂದು ಮಸ್ತಾನ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಗ್ರಾಪಂ ಅಧ್ಯಕ್ಷ ಶೇಶ್ ಸಿಲೇರ್ಸಾಬ್, ಅಹಮದ್ ಬಾಬು, ಹುಸೇನ್ ಸಾಬ್, ಗವಿಸಿದ್ದಯ್ಯ, ಆನಂದರಾವ್, ಅಂಜನಪ್ಪ ಮತ್ತಿತರರು ಹಾಜರಿದ್ದರು.