ಪರಂಪರೆ ಕುರಿತು ಪುನರ್ ಸಂಶೋಧನೆ ಅಗತ್ಯ
ಕ.ಪ್ರ ವಾರ್ತೆ, ಶಿವಮೊಗ್ಗ, ಏ.13
ಭಾರತೀಯ ಸಂಸ್ಕೃತಿ ಹಾಗೂ ಪರಂಪರೆ ಕುರಿತಂತೆ ಪುನರ್ ಸಂಶೋಧನೆಯ ಅಗತ್ಯವಿದೆ ಎಂದು ಆರ್ಥಿಕ ತಜ್ಞ ಪ್ರೊ.ಬಿ.ಎಂ. ಕುಮಾರಸ್ವಾಮಿ ಹೇಳಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಡಿ.ಎಸ್. ದಿನಕರ್ ನ್ಯಾಷನಲ್ ಪಾಲಿಟೆಕ್ನಿಕ್ ಕಾಲೇಜು ಶನಿವಾರ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಮೂಲಕ ಕೃಷಿ, ತಂತ್ರಜ್ಞಾನ, ಸಾಮಾಜಿಕ ಬದುಕಿನ ಮೇಲೆ ಒಲವು ಮೂಡಿಸಲು ಸಾಧ್ಯ. ಸುಮಾರು 1200 ವರ್ಷಗಳ ಕಾಲ ಭಾರತ ಆರ್ಥಿಕತೆಯಲ್ಲಿ ಸ್ಥಿರತೆ ಕಂಡುಕೊಂಡಿತ್ತು. ಅಂದಿನಿಂದ ಇಂದಿನವರೆಗೂ ಭಾರತ ಎಲ್ಲಾ ಕ್ಷೇತ್ರದಲ್ಲಿಯೂ ಚಿನ್ನದ ಪಕ್ಷಿಯೆಂದೇ ಗುರುತಿಸಿಕೊಂಡಿದೆ ಎಂದರು.
ಸಂಪನ್ಮೂಲ ಹೇರಳ: ಕಳೆದ ಕೆಲವು ಶತಮಾನದಿಂದೀಚೆಗೆ ಅಭಿವೃದ್ಧಿ ಕ್ರಮದಲ್ಲಿ ಪರಿಸರ ವಿನಾಶದ ಅಂಚಿನಲ್ಲಿದೆ. ನಮ್ಮಲ್ಲಿ ನವೀಕರಣ ಹೊಂದುವ ಸಂಪನ್ಮೂಲಗಳು ಹೇರಳವಾಗಿವೆ. ಇಂತಹ ಸಂಪನ್ಮೂಲಗಳ ಸದುಪಯೋಗ ಪಡಿಸಿಕೊಳ್ಳುವುದು ಅವಶ್ಯಕ. ದೂರದೃಷ್ಟಿ ರಹಿತ ಯೋಜನೆಗಳು ಪರಿಸರ, ಸಾಮಾಜಿಕ ಬದುಕನ್ನು ಹಾಳು ಮಾಡುತ್ತಿರುವುದು ವಿಪರ್ಯಾಸ ಎಂದರು.
ವಿದೇಶಿ ಶಿಕ್ಷಣಕ್ಕೆ ಮಾರು ಹೋಗುವ ಬದಲು ಭಾರತದ ಶಿಕ್ಷಣದಲ್ಲಿ ಹೊಸ ದೃಷ್ಟಿಕೋನ ಕಂಡುಕೊಳ್ಳಬೇಕು. ಮುಂಬರುವ ವರ್ಷಗಳಲ್ಲಿ ಭೂಮಿಯ ತಾಪಮಾನದ ಏರಿಕೆಯಾಗಿ ಬಹುಪಾಲು ಜೀವ ಪ್ರಬೇಧಗಳು ನಶಿಸಿಹೋಗುವ ಸಂಭವವಿದೆ. ಮನುಷ್ಯ ತನ್ನ ಮುಂದಿನ ಜೀವನವನ್ನು ಸುಖಮಯವಾಗಿಟ್ಟುಕೊಳ್ಳಬೇಕಾದರೆ ತಂತ್ರಜ್ಞಾನ, ಶಕ್ತಿ ಸಂಪನ್ಮೂಲಗಳ ಬಳಕೆಯಲ್ಲಿನ ಚಿಂತನೆ ಹಾಗೂ ಯೋಚನೆಗಳು ಬದಲಾಗಬೇಕು ಎಂದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ, ವಿದ್ಯಾರ್ಥಿಗಳು ಅವಕಾಶಗಳ ಸದುಪಯೋಗ ಮಾಡಿಕೊಳ್ಳಲು ಹಿಂದೆ ಬೀಳುತ್ತಿದ್ದಾರೆ. ಪ್ರತಿಯೊಂದು ವಿಷಯವನ್ನು ಸಕಾರಾತ್ಮಕವಾಗಿ ಚಿಂತಿಸಿ ಮುಂಬರುವ ಅನಿವಾರ್ಯತೆ ಇದೆ ಎಂದರು.
ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಜಿಪಿಎಸ್ ತಂತ್ರಜ್ಞಾನದಿಂದ ತಯಾರಿಸಿದ ರಕ್ಷಣಾ ವ್ಯವಸ್ಥೆ, ಅಣೆಕಟ್ಟು ಸುರಕ್ಷತೆ, ರಸ್ತೆ ಸುರಕ್ಷತೆ, ಡಿಜಿಟಲ್ ಆಸ್ಪತ್ರೆ, ತೆರಿಗೆ ವ್ಯವಸ್ಥೆ ಸುಧಾರಿಸಬಹುದಾದ ಉಪಕರಣದ ಮಾದರಿಗಳನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಸಮಿತಿ ಖಜಾಂಚಿ ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ, ಪ್ರಾಂಶುಪಾಲ ಪ್ರೊ.ಪಿ.ಎಸ್. ರಾಜಶೇಖರಯ್ಯ ಮತ್ತಿತರರು ಇದ್ದರು.