ಬ್ರಾಹ್ಮಣ ಯುವತಿಯರ ಚಾರಿತ್ರ್ಯಕ್ಕೆ ಮಸಿ
ಕ.ಪ್ರ ವಾರ್ತೆ, ಶಿವಮೊಗ್ಗ, ಏ.13
ನಗರದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ವಿಪ್ರ ವೇದಿಕೆ ಆಶ್ರಯದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಬ್ರಾಹ್ಮಣ ಯುವತಿಯರ ಚಾರಿತ್ರ್ಯಕ್ಕೆ ಮಸಿ ಬಳಿಯುವ ಹೇಳಿಕೆ ನೀಡಿದ ಈಶ್ವರಪ್ಪ ಇಡೀ ಸಮುದಾಯದ ಯುವತಿಯರಿಗೆ ಶಾಶ್ವತ ಕಳಂಕ ಹಚ್ಚಿದ್ದಾರೆ ಎಂದು ಜೆಡಿಎಸ್ ಟೀಕಿಸಿದೆ.
ಪಕ್ಷದ ಜಿಲ್ಲಾ ಉಪಾಧ್ಯಕ್ಷ ಉಂಡಿನಾಳು ರಾಜಗೋಪಾಲ್, ಈಶ್ವರಪ್ಪ ಹೇಳಿಕೆಯಿಂದಾಗಿ ಸಮುದಾಯದವರು ರಸ್ತೆಯಲ್ಲಿ ತಿರುಗಾಡುವಾಗ ಸಾರ್ವಜನಿಕರ ಕುಚೇಷ್ಟೆಗೆ ಈಡಾಗುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಉನ್ನತ ಹುದ್ದೆಯಲ್ಲಿರುವ ಕೆ.ಎಸ್. ಈಶ್ವರಪ್ಪ ಒಂದು ಸಮುದಾಯದ ಮತ ಗಳಿಕೆಯ ಉದ್ದೇಶದಿಂದ ಸಮಾಜಕ್ಕೆ ಕೆಟ್ಟ ಹೆಸರು ತರುವಂತೆ ಬ್ರಾಹ್ಮಣ ಸಮುದಾಯವನ್ನೇ ಗುರಿಯಾಗಿಸಿಕೊಂಡು ಈ ರೀತಿ ಅಸಂಬದ್ಧ ಹೇಳಿಕೆ ನೀಡುವ ಮೂಲಕ ಸಮಾಜದ ತೇಜೋವಧೆಗೆ ಕಾರಣರಾಗಿದ್ದಾರೆ.
ಚುನಾವಣಾ ರಾಜಕೀಯದಲ್ಲಿ ಮತ ಗಳಿಕೆಗಾಗಿ ಹಲವಾರು ತಂತ್ರಗಳನ್ನು ಹೆಣೆಯುವುದು ಸಹಜ. ಆದರೆ, ಯಾವ ಸಮಾಜದಲ್ಲಿ ಕನ್ಯೆಯರ ಅಭಾವ ಇರುವುದೋ ಅಂತಹ ಸಮುದಾಯದ ಕನ್ಯೆಯರಿಗೆ ಕಳಂಕ ಹಚ್ಚಿ ಶಿವಮೊಗ್ಗದ ಬ್ರಾಹ್ಮಣ ಸಮುದಾಯದಿಂದ ಕನ್ಯಾ ಸಂಬಂಧ ಮಾಡುವವರು ಸಂಶಯ ದೃಷ್ಟಿಯಿಂದ ನೋಡುವಂತಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಮುದಾಯಕ್ಕೆ ಅವಮಾನ: ಇಂತಹ ಆಪಾದನೆಯಿಂದ ಇಡೀ ಸಮುದಾಯವೇ ತಲೆ ತಗ್ಗಿಸುವಂತಾಗಿದೆ. ಸಮುದಾಯದ ಅಧ್ಯಕ್ಷರು ಉನ್ನತ ಹುದ್ದೆಯಲ್ಲಿದ್ದವರು ವೇದಿಕೆಯಲ್ಲಿದ್ದಾರೆ. ಈಶ್ವರಪ್ಪ ಹೇಳಿಕೆ ಖಂಡಿಸದೇ ಇರುವುದು ಶೋಚನೀಯ ಸಂಗತಿ ಎಂದು ರಾಜಗೋಪಾಲ್ ತಿಳಿಸಿದ್ದಾರೆ.
ಇನ್ನಾದರು ಬ್ರಾಹ್ಮಣ ಸಮುದಾಯ ಎಚ್ಚತ್ತು ಇಂತಹ ಆಪಾದನೆ ಮಾಡಿದ ಕೆ.ಎಸ್. ಈಶ್ವರಪ್ಪಗೆ ಸರಿಯಾದ ಸಂದರ್ಭದಲ್ಲಿ ತಕ್ಕಪಾಠ ಕಲಿಸುವುದರ ಮೂಲಕ ಬ್ರಾಹ್ಮಣ ಸಮುದಾಯವು ಪ್ರಾಜ್ಞರೆಂಬುವುದನ್ನು ನಾಡಿಗೆ ತೋರಿಸಿಕೊಟ್ಟಂತಾಗುತ್ತದೆ. ಅದೇ ರೀತಿ ಇನ್ನು ಮುಂದಾದರು ಕೆ.ಎಸ್. ಈಶ್ವರಪ್ಪ ತಮ್ಮ ನಾಲಿಗೆಯ ಮೇಲೆ ಹಿಡಿತವಿಟ್ಟು ಮಾತನಾಡುವುದನ್ನು ಕಲಿಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಸಮಾಜದ ಮುಖಂಡ ಹಾಗೂ ಜೆಡಿಎಸ್‌ನ ಜಿಲ್ಲಾ ಉಪಾಧ್ಯಕ್ಷ ಉಂಡಿಗನಾಳು ರಾಜಗೋಪಾಲ್, ಪಕ್ಷದ ಪ್ರಮುಖರಾದ ಎನ್. ಮಂಜುನಾಥ್, ವಿಜಯ್‌ಮೆನನ್, ನಟೇಶ್ ಗೌಡ ಸೋಗಾನೆ, ಶ್ರೀನಿವಾಸ್ ಬಿ. ಚಂದ್ರನ್, ಶಾಂತಾ ಸುರೇಂದ್ರ, ರಾಜಮ್ಮ, ಲಲಿತಮ್ಮ, ಎಂ.ಕೆ. ಸುರೇಶ್‌ಕುಮಾರ್, ವೀರೇಸ್ ಚಿತ್ತರಗಿ ಮುಂತಾದವರು ಎಚ್ಚರಿಸಿದ್ದಾರೆ.