100 ದೂರು ಕೊಡಿ ಎದುರಿಸುತ್ತೇನೆ: ಈಶ್ವರಪ್ಪ
ಕನ್ನಡಪ್ರಭ ವಾರ್ತೆ, ಶಿವಮೊಗ್ಗ, ಏ.14
ನಾನು ಹೇಳಿದ ಸತ್ಯಸಂಗತಿಯನ್ನು ತಿರುಚಿ ದೂರು ಕೊಡುತ್ತೀರಿ, 100 ದೂರು ಕೊಡಿ ಎದುರಿಸಲು ನಾನು ಸಿದ್ಧ ಎಂದು ಉಪಮುಖ್ಯಮಂತ್ರಿ ಹಾಗೂ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಪ್ರತಿಪಕ್ಷಗಳಿಗೆ ಸವಾಲೆಸೆದಿದ್ದಾರೆ.
ಕಳೆದ ವಾರ ವಿಪ್ರ ವೇದಿಕೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಲೌವ್ ಜಿಹಾದ್ ಹಾಗೂ ಬ್ರಾಹ್ಮಣ ಹೆಣ್ಣುಮಕ್ಕಳ ಕುರಿತು ಈಶ್ವರಪ್ಪನವರು ಹೇಳಿದ್ದ ಮಾತು ವಿವಾದಕ್ಕೀಡಾಗಿತ್ತು. ಈ ಸಂಬಂಧ ಪ್ರಕರಣ ದೂರು ಚುನಾವಣಾ ಆಯೋಗ ಹಾಗೂ ನ್ಯಾಯಾಲಯದ ಮೆಟ್ಟಿಲೇರಿದೆ. ಈ ಮಧ್ಯೆಯೇ ಭಾನುವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಈಶ್ವರಪ್ಪನವರು ದೂರುಕೊಟ್ಟವರನ್ನು ತರಾಟೆಗೆ ತೆಗೆದುಕೊಂಡರು.
ದೂರು ಎದುರಿಸಲು ಸಿದ್ಧ: ಬಿಜೆಪಿ ಕಾರ್ಯಕರ್ತನಾಗಿ ಹೇಳುತ್ತೇನೆ, ಕಳೆದ 20 ವರ್ಷದಿಂದ ನಗರದಲ್ಲಿ ಒಂದೇ ಒಂದು ಕೋಮುಗಲಭೆ ಆಗಿಲ್ಲ.
ನನ್ನ ಮೇಲೆ ಏಕೆ ಆಪಾದನೆ ಮಾಡುತ್ತಾರೆ ಎಂದ ಈಶ್ವರಪ್ಪ, ಸತ್ಯ ಸಂಗತಿ ಹೇಳಿದರೆ ದೂರುಕೊಡುತ್ತಾರೆ. 100 ಕಂಪ್ಲೇಂಟ್ ಕೊಟ್ಟರೂ ಎದುರಿಸುತ್ತೇನೆ.
ಈ ಪ್ರಕರಣ ನಡೆದ ನಂತರ ಅನೇಕರು ಹುಷಾರಪ್ಪ ಜೈಲಿಗೆ ಹಾಕುತ್ತಾರೆ ಎಂದು ಸಲಹೆಕೊಟ್ಟರು. ನಾನು ಜೈಲಿಗೆ ಹೋಗಲೂ ತಯಾರಿದ್ದೇನೆ, ಒಂದೇ ಮಾತರಂ, ಭಾರತ್ ಮಾತಾಕಿ ಜೈ ಎಂದು ಜೈಲಿಗೆ ಹೋಗುತ್ತೇನೆ ಎಂದು ತಿಳಿಸಿದರು.
ಕಾಂಗ್ರೆಸ್ನ ವ್ಯಕ್ತಿ ನನ್ನ ಮೇಲೆ ದೂರು ಕೊಡುತ್ತಾರೆ, ಕೊಡಲಿ ಪರವಾಗಿಲ್ಲ. ನಾನು ಮಾತನಾಡಿದ್ದು 9ರಂದು, ಚುನಾವಣಾ ನೀತಿ ಸಂಹಿತೆ ನೋಟಿಫಿಕೇಷನ್ 10ಕ್ಕೆ ಜಾರಿಯಾಗಿದೆ. ನೀತಿ ಸಂಹಿತೆ ಕುರಿತು ಹೈಕೋರ್ಟ್ ಜಡ್ಜ್ ಮೆಂಟ್ ಇದ್ದು, ಇವರು ಕೊಟ್ಟ ದೂರಿಗೆ 1 ಪೈಸೆಯೂ ಬೆಲೆ ಇಲ್ಲ. 100ಕ್ಕೆ 100 ಸತ್ಯ ಎಂದು ಗುಡುಗಿದರು.
ಆ ಕುತಂತ್ರಿಗಳಿಗೆ, ರಾಷ್ಟ್ರೀಯ ವಿಚಾರದ ಬಗ್ಗೆ ಚರ್ಚಿಸುವ ವ್ಯವಧಾನವೇ ಇಲ್ಲ.
ಏನೇ ಮಾತನಾಡಿದರೂ ಜಾತಿ, ಧರ್ಮದ ವಿಚಾರಕ್ಕೆ ಎಳೆದುತರುತ್ತಾರೆ ಎಂದ ಅವರು, ಅಬ್ದುಲ್ ಕಲಾಂ ಅವರನ್ನು ಬಿಜೆಪಿ ಸರ್ಕಾರ ರಾಷ್ಟ್ರಪತಿಯಾಗಿ ಆರಿಸಿದಾಗ ಇದೇ ದುಷ್ಟ ಕಾಂಗ್ರೆಸ್ಸಿಗರು ಕಲಾಂ ಮುಸಲ್ಮಾನನೇ ಅಲ್ಲ ಎಂದಿದ್ದರು ಎಂದು ಟೀಕಿಸಿದರು.
ಕಾಂಗ್ರೆಸ್ ಟಿಕೆಟ್ ಮಾರಾಟವಾಗಿದೆ ಎಂದು ಆ ಪಕ್ಷದ ಮುಖಂಡರೇ ಹೇಳಿದರು ಎಂದು ಲೇವಡಿ ಮಾಡಿದರು.
ತಾವು ಏ.17ರಂದು ನಾಮಪತ್ರ ಸಲ್ಲಿಕೆ ಮಾಡಲಿದ್ದು, ಅಂದು ಬೆಳಿಗ್ಗೆ 9 ಗಂಟೆಗೆ ರಾಮಣ್ಣಶ್ರೇಷ್ಠಿ ಪಾರ್ಕ್ನಿಂದ ಮೆರವಣಿಗೆ ಮೂಲಕ ತೆರಳುವ ಉದ್ದೇಶವಿದೆ. 10 ಸಾವಿರ ಜನ ಮೆರವಣಿಗೆಯಲ್ಲಿರಬೇಕು ಎಂಬುದು ನನ್ನ ಆಸೆ ಎಂದರು.
ಇದು ಸೆಮಿಫೈನಲ್: ಈಗಾಗಲೇ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಬಿಜೆಪಿ, ಸೆಮಿಫೈನಲ್ ಎದುರಿಸಲು ಸಜ್ಜಾಗಿದೆ. ಫೈನಲ್ ಪಂದ್ಯ ಮುಂದೆ ನಡೆಯುವುದಿದ್ದು, ಕೇಂದ್ರದಲ್ಲಿ ನರೇಂದ್ರ ಮೋದಿ ಗೆಲ್ಲಬೇಕು.
ಇದಕ್ಕಾಗಿ ಇಲ್ಲಿ ಈಶ್ವರಪ್ಪ ಗೆಲವು ಅನಿವಾರ್ಯ ಎಂದು ಬಿಜೆಪಿ ವಕ್ತಾರ ಗೋ. ಮಧುಸೂಧನ್ ತಿಳಿಸಿದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಿಂದಲೂ ಬಿಜೆಪಿ ಅಭ್ಯರ್ಥಿಗಳನ್ನು ಆರಿಸಿಕಳುಹಿಸುವ ವಿಶ್ವಾಸವಿದೆ. ಶಿವಮೊಗ್ಗದಿಂದಲೂ ಬಿಜೆಪಿ ಅಭ್ಯರ್ಥಿಗೆಲ್ಲುತ್ತಾರೆ, ಆದರೆ ಈಗಿರುವ ವ್ಯಕ್ತಿಯಲ್ಲ ಎಂದು ಪರೋಕ್ಷವಾಗಿ ರಾಘವೇಂದ್ರ ವಿರುದ್ಧ ವಾಗ್ದಾಳಿ ನಡೆಸಿ ಮಧುಸೂಧನ್, ಸ್ಥಾನದಿಂದಾಗಿ ಅಪಾತ್ರರಿಗೆ ಮರ್ಯಾದೆ ಬರುತ್ತದೆ. ಯೋಗ್ಯತೆ ಇದ್ದವರಿಗೆ ಸ್ಥಾನ ಇದ್ದರೂ ಮರ್ಯಾದೆ, ಇಲ್ಲದೇ ಇದ್ದರೂ ಮರ್ಯಾದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸಿದ್ದರಾಮಣ್ಣ, ಪಕ್ಷದ ಮುಖಂಡರಾದ ಚನ್ನಬಸಪ್ಪ, ಎಸ್. ದತ್ತಾತ್ರಿ, ಜ್ಞಾನೇಶ್ವರ್ ಸೇರಿದಂತೆ ನಗರಸಭಾ ಸದಸ್ಯರು ವೇದಿಕೆಯಲ್ಲಿದ್ದರು.