ಬಿಎಸ್ವೈ ಈಗ ಟಿಪ್ಪು ಸುಲ್ತಾನ್ ಜಪ
ಕನ್ನಡಪ್ರಭ ವಾರ್ತೆ, ಶಿವಮೊಗ್ಗ, ಏ.14
ಯಡಿಯೂರಪ್ಪನವರು ಹೊಸ ಪಕ್ಷ ಕಟ್ಟಿದ ಉದ್ದೇಶ ಅವರು ಗೆಲ್ಲಬೇಕೆಂದಲ್ಲ, ಅವರು ಗೆಲ್ಲಲೆಂದು ಕಣಕ್ಕಿಳಿದೂ ಇಲ್ಲ. ಬಿಜೆಪಿಯನ್ನು ಹಾಳುಮಾಡಲು ಸುಪಾರಿ ತೆಗೆದುಕೊಂಡಿರುವ ಕಾರಣ ಕಣಕ್ಕಿಳಿದಿದ್ದಾರೆ. ಇಂತಹ ವಿಕೃತ ಮನಸ್ಸು ಜಯಿಸಬೇಕೇ, ಆ ವಿಕೃತ ಮನಸ್ಸಿಗೆ ಸಫಲತೆ ಸಿಗಬೇಕೆ ಎಂದು ಬಿಜೆಪಿ ವಕ್ತಾರ ಗೋ. ಮಧುಸೂಧನ್ ಪ್ರಶ್ನಿಸಿದ್ದಾರೆ.
ಭಾನುವಾರ ಇಲ್ಲಿನ ವಾಸವಿ ವಿದ್ಯಾಲಯ ಆವರಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಈಶ್ವರಪ್ಪನವರನ್ನು ಸೋಲಿಸುತ್ತೇನೆ, ಅವನು ಹೇಗೆ ಗೆಲ್ಲುತ್ತಾನೆ, ಇವನು ಹೇಗೆ ಗೆಲ್ಲುತ್ತಾನೆ ಎಂದು ಹೇಳಿಕೊಂಡು ಓಡಾಡುತ್ತಿರುವ ಯಡಿಯೂರಪ್ಪನವರು ಯಾರನ್ನು ಗೆಲ್ಲಿಸುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಅಂದ ಮೇಲೆ ಇವರ ಪ್ರಯತ್ನ ಗೆಲ್ಲಲಿಲ್ಲ.
ಇಂತಹ ವಿಕೃತ ಮನಸ್ಸನ್ನು ಯಾರೂ ಮೆಚ್ಚುವುದಿಲ್ಲ ಎಂದವರು ಹೇಳಿದರು.
ಹೀಗಾಗಿ ಬಿಜೆಪಿ ಕಾರ್ಯಕರ್ತರು ತೊಡೆತಟ್ಟಿ ಚುನಾವಣೆ ಎದುರಿಸಬೇಕು ಎಂದು ಕಾಯಕರ್ತರಿಗೆ ಕರೆಕೊಟ್ಟರು.
ಟಿಪ್ಪು ಬೇಕು: ತತ್ವ ಸಿದ್ಧಾಂತ ಕಟ್ಟಿಕೊಂಡು ಬೆಳೆದ ವ್ಯಕ್ತಿ ನೀವು, ಹಿಂದುತ್ವದ ಹೆಸರಿನ ಮೇಲೆ ರಾಜಕಾರಣ ಮಾಡಿಕೊಂಡು ಬಂದಿರಿ. ಟೌನ್ ಮುಸ್ಲಿಪಾಲಿಟಿಯಿಂದ ಸಿಎಂ ವರೆಗೆ ವಿವಿಧ ಹುದ್ದೆ ಅಲಂಕರಿಸಿದಿರಿ. ಆದರೆ ಇಂದು ನಿಮಗೆ ವಂದೇಮಾತರಂ ಬೇಡ, ಭಾರತ್ ಮಾತಾಕಿ ಬೇಡ, ಹಿಂದುಸ್ಥಾನ ಬೇಡ, ಅಂಬೇಡ್ಕರ್ ಬೇಡ, ದೀನದಯಾಳು ಭಗತ್ ಸಿಂಗ್ ಬೇಡ, ಶಿವಾಜಿ ಬೇಡ ಎಂದು ಕಟುಶಬ್ಧಗಳಲ್ಲಿ ಯಡಿಯರಪ್ಪರನ್ನು ಟೀಕಿಸಿದ ಮಧುಸೂಧನ್, ಬಿಎಸ್ವೈಗೆ ಈಗ ಟಿಪ್ಪು ಸುಲ್ತಾನ್ ಬೇಕು. ಈ ಬೆಳಣಿಗೆಗೆ ನೈತಿಕ ಪತನ ಎನ್ನುತ್ತಾರೆ, ಆಧ್ಯಾತ್ಮಿಕ ಪತನ, ರಾಷ್ಟ್ರೀಯ ಪತನ ಎನ್ನಲಾಗುತ್ತದೆ ಎಂದರು.
ನಿಮ್ಮ ಗುರು ಯಾರು? ಭದ್ರಾವತಿಯಲ್ಲಿ ಪದ್ಮಕ್ಕನ ಹಗರಣ ಮಾಡಿದ, ರೋಲಕ್ಸ್ ವಾಚ್ ಹಗರಣ ಮಾಡಿದ, ನಾಡನ್ನು ಅರಬ್ ದೇಶಕ್ಕೆ ಮಾರಾಟ ಮಾಡಲು ಹೊರಟ ಸಿಎಂ ಇಬ್ರಾಹಿಂ ನಿಮ್ಮ ಗುರುವಾದರೇ... ಎಂದು ಯಡಿಯೂರಪ್ಪನವರನ್ನು ಟೀಕಿಸಿದ ಮಧುಸೂಧನ್, ಬಸವೇಶ್ವರರ ವಚನ ಹೇಳುತ್ತಾ ತಾನು ಬಹಳ ಸಾಚ ಎಂದು ಓಡಾಡುವ ಇಬ್ರಾಹಿಂನನ್ನು ನಂಬಬೇಕೆ.
ಆತ ಆಧುನಿಕ ಶಿಶುನಾಳ ಶರೀಫ್ ಎಂದು ವ್ಯಂಗ್ಯವಾಡಿದರಲ್ಲದೇ, ಷರೀಫ್ ಅಂದರೆ ಮರ್ಯಾದಸ್ಥ. ಆದರೆ ಇವನು ಭದ್ರಾವತಿ ಬದ್ಮಾಶ್. ಇವನ ಮಾತು ಕಟ್ಟಿಕೊಂಡು ಯಡಿಯೂರಪ್ಪ ಹೊರಟಿದ್ದಾರೆ. ಇದು ಬೇಕಾಗಿತ್ತಾ ಎಂದು ಕಟುಕಿದರು.
ರೆಹಮಾನ್ ಖಾನ್ ವಿರುದ್ಧ ಟೀಕೆ: ಅಂದು ಒಂದು ಅಲ್ಪಸಂಖ್ಯಾತ ವಿಶ್ವವಿದ್ಯಾಲಯದಿಂದ ಅಖಂಡ ಭಾರತ ಮೂರು ಭಾಗವಾಯಿತು.
ಇಂತಹ ಐದು ವಿಶ್ವವಿದ್ಯಾಲಯದ ಸ್ಥಾಪಿಸುವ ಮೂಲಕ ದೇಶವನ್ನು 15 ತುಂಡುಮಾಡಲು ಹೊರಟವರನ್ನು ತಡೆಯಲು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಗೋ.ಮಧುಸೂಧನ್ ಗುಡುಗಿದರು.
ಕರ್ನಾಟಕದಲ್ಲೂ ಒಂದು ವಿಶ್ವವಿದ್ಯಾಲಯ ಆರಂಭಿಸಲು ಹೊರಟಿರುವ ಪಾಕಿಸ್ಥಾನ್ ಜಿಂದಾಬಾದ್ ಎನ್ನುವ ರೆಹಮಾನ್ ಖಾನ್ ಅಮಾನತ್ ಬ್ಯಾಂಕ್ನ ಹೆಸರಿನಲ್ಲಿ 13 ಸಾವಿರ ಕೋಟಿ ಮುಂಡಾಯಿಸಿದ್ದಾರೆ.
ಅದೆಷ್ಟೋ ಮೆಕ್ಯಾನಿಕ್, ವಾಹನ ಚಾಲಕರು, ಪಂಚರ್ ಹಾಕುವ ಸಾಹೇಬರ ಉಳಿತಾಯ ದುಡ್ಡನ್ನು ಇವರು ಮುಂಡಾಯಿಸಿದ್ದಾರೆ ಎಂದು ಟೀಕಿಸಿದರು.
ಕೋಟಿ ಕೋಟಿ ಲೂಟಿ ಮಾಡಿರುವ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆರಲು ಬಿಜೆಪಿ ಅಧಿಕಾರ ಕಳೆದುಕೊಳ್ಳಬೇಕೆ, ಅವರು (ಕಾಂಗ್ರೆಸ್) ಮತ್ತೆ ಅಧಿಕಾರಕ್ಕೆ ಬಂದರೆ ಕರ್ನಾಟಕ, ಭಾರತ ಉದ್ಧಾರ ಆಗುತ್ತದಾ ಎಂದು ಪ್ರಶ್ನಿಸಿದ ಮಧುಸೂಧನ್, ಅವರು ಅಧಿಕಾರಕ್ಕೆ ಬಂದರೆ ಇನ್ನೂ ಹೆಚ್ಚು ಪಾಕಿಸ್ಥಾನಗಳು ನಿರ್ಮಾಣ ಆಗುತ್ತದೆ ಎಂದವರು ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಹೇಳಿದರು.
ಚುನಾವಣೆ ಪ್ಲಾಸಿ ಕದನಕ್ಕೆ ಹೋಲಿಕೆ
1757ರಲ್ಲಿ ಬಂಗಾಳದ ಪ್ಲಾಸಿಯಲ್ಲಿ ಯುದ್ಧ ನಡೆಯಿತು. ಬ್ರಿಟಿಷ್ರ ಇಂಡಿಯಾ ಪರವಾಗಿ ರಾಬರ್ಟ್ ಕ್ಲೈವ್ ಹಾಗೂ ಬಂಗಾಳದ ರಾಜ ಸಿರಾಜ್ಉದ್ದೌಲ ನಡುವೆ ಯುದ್ಧ ನಡೆಯಿತು. ರಾಬರ್ಟ್ ಕ್ಲೈವ್ ಗೆದ್ದ, ಭಾರತ ಆಂಗ್ಲರಿಗೆ ಸೋತಿತು. ಏಕೆಂದರೆ ಯುದ್ಧ ಶುರುವಿಗಿಂತ ಮುಂಚೆ ಸಿರಾಜುದ್ದಿನ್ ದೌಲನ ಅಳಿಯ ಮೀರ್ ಬಾಕಿ ಬ್ರಿಟಿಷರೊಂದಿಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದ. ಪುಕ್ಕಟೆ ರಾಜನಾಗುವ ಆಮಿಷದಿಂದ ಫಿಕ್ಸಿಂಗ್ಗೆ ಒಳಗಾದ. ಕೊನೆಗೆ ಅವನೂ ಆಡಳಿತ ನಡೆಸಲಾಗಲಿಲ್ಲ.
ಪ್ರಸ್ತುತ ಇಂತಹುದೇ ಒಂದು ಮ್ಯಾಚ್ಫಿಕ್ಸಿಂಗ್ ನಡೆದಿದೆ. ಬಿಜೆಪಿಯನ್ನು ಸೋಲಿಸಲೆಂದು ಕಾಂಗ್ರೆಸ್ನಿಂದ ಸುಪಾರಿಕೊಡಲಾಗಿದೆ. ಆದರೆ ಕಾರ್ಯಕರ್ತರು ಎಚ್ಚೆತ್ತು ಕೆಲಸ ಮಾಡಿ ಬಿಜೆಪಿಯನ್ನು ಸೋಲಲು ಬಿಡಬಾರದು ಎಂದು ಕರೆ ನೀಡಿದರು. ಸುಪಾರಿಕೊಟ್ಟವರು ಕಾಂಗ್ರೆಸ್ಸಿಗರು, ಮ್ಯಾಚ್ಫಿಕ್ಸಿಂಗ್ ಮಾಡಿಕೊಂಡಿದ್ದು ಬಿಎಸ್ವೈ ಎಂದುಮಧುಸೂಧನ್ ಹೇಳಿದರು.