ಕಾಂಗ್ರೆಸ್ ಸಭೆಯಲ್ಲಿ ಬಿಜೆಪಿ ಗೂಢಾಚಾರ...!
ಕ.ಪ್ರ.ವಾರ್ತೆ, ಶಿವಮೊಗ್ಗ, ಏ.15
ಕಾಂಗ್ರೆಸ್ನಿಂದ ಕೆ.ಬಿ. ಪ್ರಸನ್ನಕುಮಾರ್ ಅಭ್ಯರ್ಥಿ ಎಂದು ಘೋಷಣೆಯಾದಾಗಿನಿಂದ ನಿದ್ದೆಗೆಟ್ಟಿರುವ ಬಿಜೆಪಿ ಮಂದಿ, ಹೇಗಾದರೂ ಚುನಾವಣೆ ಗೆಲ್ಲಲೇಬೇಕೆಂದು ಹಠ ತೊಟ್ಟಿದ್ದಾರೆ. ಪಟ್ಟುಗಳನ್ನು ಹಾಕುತ್ತಿದ್ದಾರೆ, ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಈ ತಂತ್ರಗಾರಿಕೆಯ ಒಂದು ಭಾಗವಾಗಿ ಗೂಢಚಾರ ಕಾರ್ಯವೂ ಆರಂಭವಾಗಿದೆ.
ಸೋಮವಾರ ಕಾಂಗ್ರೆಸ್ ಅಭ್ಯರ್ಥಿ ಪ್ರಸನ್ನಕುಮಾರ್ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಾವಿರಾರು ಜನ ಮೆರವಣಿಗೆಯಲ್ಲಿ ಸಾಗಿಬಂದರು. ಈ ಮೆರವಣಿಗೆಯಲ್ಲಿ ಪಾಲ್ಗೊಂಡು ತಮಗೆ ಕೈಕೊಟ್ಟವರು ಯಾರು, ತಮಗೆ ಎರಡು ಬಗೆಯುತ್ತಿರುವವರು ಯಾರು, ತಮ್ಮ ಋಣ ಇದ್ದರೂ ಅತ್ತ ಮುಖಮಾಡಿದವರು ಯಾರು ಎಂಬುದನ್ನು ಪತ್ತೆ ಮಾಡುವ ಉದ್ದೇಶದಿಂದ ಬಿಜೆಪಿ ಮುಖಂಡರೊಬ್ಬರು ಗೂಢಚಾರಿಕೆ ಮಾಡಿಸಿದ್ದು ಗೊತ್ತಾಗಿದೆ.
ಮೆರವಣಿಗೆ ವಿಡಿಯೋ: ಕನ್ನಡಪ್ರಭಕ್ಕೆ ಖಚಿತ ಮಾಹಿತಿ ಲಭ್ಯವಾಗಿದ್ದು, ಕಾಂಗ್ರೆಸ್ ಮೆರವಣಿಗೆಯನ್ನು ವಿಡಿಯೋ ಮತ್ತು ಫೋಟೋಗ್ರಫಿ ಮಾಡಿಸಲಾಗಿದೆ. ಇಲ್ಲಿ ಪಾಲ್ಗೊಂಡವರು ಯಾರ್ಯಾರು, ಅವರ ವರ್ತನೆ ಹೇಗಿತ್ತು ಎಂಬುದನ್ನು ಕೂಲಂಕಷವಾಗಿ ಅವಲೋಕಿಸಲಾಗುತ್ತಿದೆ ಎನ್ನಲಾಗಿದೆ.
ಈಗಾಗಲೇ ಶಾಸಕರಾಗಿ, ಡಿಸಿಎಂ ಆಗಿ ಈಶ್ವರಪ್ಪನವರು ಅಧಿಕಾರದಲ್ಲಿದ್ದಾಗ ಅನೇಕರು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಉಪಯೋಗಪಡೆದುಕೊಂಡಿದ್ದಾರೆ. ಆದರೆ, ಈಗ ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿದ್ದಾರೆ ಎಂಬ ಗುಮಾನಿ ಇದೆ. ಈ ಕಾರಣಕ್ಕೆ ಗೂಢಚಾರ ಮಾಡಿರಬಹುದು, ಇದರಲ್ಲಿ ತಪ್ಪೇನಿದೆ ಎಂದು ಬಿಜೆಪಿ ಮುಖಂಡರೊಬ್ಬರು ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ್ದಾರೆ.
ಅನೇಕ ಧಾರ್ಮಿಕ ಸಂಸ್ಥೆಗಳು, ಸಂಘ ಸಂಸ್ಥೆಗಳು, ವಿವಿಧ ಜಾತಿ ಸಂಘಟನೆಗಳು ಈಶ್ವರಪ್ಪನವರಿಂದ ಸರ್ಕಾರ ಹಾಗೂ ವೈಯಕ್ತಿಕವಾಗಿ ಅನುಕೂಲ ಪಡೆದುಕೊಂಡಿವೆ. ಹೀಗೆ ಪಡೆದುಕೊಂಡವರ ಪೈಕಿ ಅನೇಕರು ಕಾಂಗ್ರೆಸ್ ಮೆರವಣಿಗೆಯಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದೂ ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಅವಲೋಕನ ಮಾಡಿಕೊಳ್ಳಲು, ಮುಂದಿನ ಹೆಜ್ಜೆ ಇಡುವ ದೃಷ್ಟಿಯಿಂದ ಈ ಗೂಡಚಾರಿಕೆ ಅನಿವಾರ್ಯ ಎಂದೂ ಹೇಳಲಾಗುತ್ತಿದೆ.
ಅಲೆ ಎಬ್ಬಿಸುವ ತಂತ್ರಗಾರಿಕೆ: ರಾಜಕೀಯ ಕಾವೇರುವ ಅಧಿಕೃತ ಘಳಿಗೆ ಆರಂಭವಾಗಿದೆ. ಸೋಮವಾರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಆರಂಭಿಸಿದ್ದಾರೆ. ಈ ಮೂಲಕ ಅಭ್ಯರ್ಥಿಗಳ ಶಕ್ತಿಪ್ರದರ್ಶನದ ವೇದಿಕೆ ಸಜ್ಜಾಗಿದೆ.
ಸೋಮವಾರ ಎಲ್ಲೆಡೆ ನಾಮಪತ್ರ ಸಲ್ಲಿಸುವ ಭರಾಟೆ. ಈ ಅವಕಾಶವನ್ನು ಬಳಸಿಕೊಂಡ ಬಹುತೇಕ ಅಭ್ಯರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳನ್ನು ಕಟ್ಟಿಕೊಂಡು ಸಾರ್ವಜನಿಕವಾಗಿ ಶಕ್ತಿ ಪ್ರದರ್ಶಿಸಿದರು.
ಚುನಾವಣಾ ಕಾವು ಏರುತ್ತಿದ್ದರು, ಅದರ ಬಹಿರಂಗ ದರ್ಶನವಾಗುವುದು ನಾಮಪತ್ರ ಸಲ್ಲಿಕೆಯ ಸಂದರ್ಭದ ನಂತರವೇ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ದೊಡ್ಡ ಮಟ್ಟದಲ್ಲಿ ಜನರನ್ನು ಸೇರಿಸಿ ನಾಮಪತ್ರ ಸಲ್ಲಿಸಿದರೆ ಒಂದು ಅಲೆ ಸೃಷ್ಟಿಯಾಗುತ್ತದೆ ಎಂಬ ವಾದವಿದೆ.
ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಸಹ ಈ ಮಾತನ್ನು ಒಪ್ಪಿಕೊಂಡಿದ್ದುಂಟು. ಸೋಲು-ಗೆಲವು ನಂತರ. ನಾವು ನಾಮಪತ್ರ ಸಲ್ಲಿಸಿದ್ದೇವೆ ಎಂದು ಎಲ್ಲರಿಗೂ ಸಂದೇಶ ಹೋಗಬೇಕು. ಅದಕ್ಕಾಗಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ದೊಡ್ಡ ಸಂಖ್ಯೆಯಲ್ಲಿ ಇರಬೇಕು ಎಂದು ಅವರು ಹೇಳಿದ್ದುಂಟು.
ಬಂಗಾರಪ್ಪ ಸೋಲು: ಕೆ.ಎಸ್. ಈಶ್ವರಪ್ಪಕೂಡ ತಾವು ನಾಮಪತ್ರ ಸಲ್ಲಿಸುವಾಗ 10 ಸಾವಿರಕ್ಕಿಂತ ಹೆಚ್ಚಿನ ಕಾರ್ಯಕರ್ತರು ಇರಬೇಕೆಂದು ಹೇಳಿಕೊಂಡಿದ್ದಾರೆ. ವಿಶೇಷವೆಂದರೆ ಕಳೆದ ಚುನಾವಣೆಯಲ್ಲಿ ಬಂಗಾರಪ್ಪ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿಸಿದ್ದರೂ ಬಿಎಸ್ವೈ ಎದುರು ಬಹಳ ಅಂತರದಲ್ಲಿ ಸೋತರೆಂಬುದು ಬೇರೆ ಮಾತು.
ಸೋಮವಾರ ಶಿವಮೊಗ್ಗ ನಗರ ಕ್ಷೇತ್ರ ಹಾಗೂ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರಗಳ ನಾಮಪತ್ರ ಸಲ್ಲಿಕೆಯ ಭರಾಟೆ ಎಷ್ಟಿತ್ತೆಂದರೆ, ನಗರದ ಪ್ರಮುಖ ರಸ್ತೆಗಳ ಸಂಚಾರವೇ ಅನೇಕ ಹೊತ್ತು ಅಸ್ತವ್ಯಸ್ತವಾಗಿತ್ತು. ಶಿವಮೊಗ್ಗ ನಗರದ ಎರಡು ನಾಮಪತ್ರ ಸಲ್ಲಿಕೆ ಕೇಂದ್ರಗಳ ಸುತ್ತಮುಲ್ಲಿನ ರಸ್ತೆ ಹಾಗೂ ವೃತ್ತಗಳಲ್ಲಿ ಸಂಚಾರ ವ್ಯವಸ್ಥೆ ಹದಗೆಟ್ಟಿತ್ತು.
ಆಟೋದವರಿಗೆ ಬೆಲೆ ಬಂತು: ಮಾಜಿ ಸಿಎಂ ಬಂಗಾರಪ್ಪನವರಿಗೂ ಆಟೋದವರಿಗೂ ಅವಿನಾಭಾವ ಸಂಬಂಧ. ಅವರ ಪ್ರಮುಖ ರಾಜಕೀಯ ಘಟ್ಟದಲ್ಲಿ ಆಟೋದವರೇ ಅವರಿಗೆ ಶುಭಶಕುನವಾಗಿತ್ತು. ಒಮ್ಮೆ ಬಂಗಾರಪ್ಪ ಶಿವಮೊಗ್ಗದಲ್ಲಿ ಒಂದು ಸಾವಿರ ಆಟೋದ ರ್ಯಾಲಿ ಮಾಡಿದ್ದು ಚರಿತ್ರೆ. ಬಂಗಾರಪ್ಪ ನಂತರ ಇದೇ ಮೊದಲ ಬಾರಿಗೆ ಆಟೋ ಚಾಲಕರಿಗೆ ಬೆಲೆ ಬಂದಿದೆ ಎಂಬುದು ಆಟೋ ಚಾಲಕ ರಮೇಶ್ (ಹೆಸರು ಬದಲಿಸಲಾಗಿದೆ) ಹೇಳುತ್ತಾರೆ. ಸೋಮವಾರ ಕಾಂಗ್ರೆಸ್ ಕಡೆಯಿಂದ ಅನೇಕ ಆಟೋ ಚಾಲಕರಿಗೆ ಬೆಲೆ ಬಂದರೆ, ಮಂಗಳವಾರ ಹಲವು ಆಟೋ ಚಾಲಕರು ಬಿಜೆಪಿಗೆ ಬುಕ್ ಆಗಿದ್ದರು. ಬಿಜೆಪಿಯಿಂದ ಶರಾವತಿ ನಗರದ ಕಲ್ಯಾಣ ಮಂದಿರದಲ್ಲಿ ಆಟೋ ಚಾಲಕರನ್ನು ಮನವೊಲಿಸುವ ಕಾರ್ಯ ಆಯೋಜನೆಗೊಂಡಿದೆ. ಒಬ್ಬ ಆಟೋ ಚಾಲಕನ ಮನಸ್ಸು ಒಲಿಸಿಕೊಂಡರೆ ಕನಿಷ್ಠ 3ರಿಂದ 5 ಓಟು ಪಡೆಯಬಹುದೆಂಬುದು ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳ ಆಂಬೋಣ. ಹೀಗಾಗಿ ಆಟೋ ಚಾಲಕರನ್ನು ಸೆಳೆಯುವ ತಂತ್ರಗಾರಿಕೆ ಆರಂಭವಾಗಿದೆ.
-ಶ್ರೀಕಾಂತ ಭಟ್